Advertisement

ಮೈತ್ರಿಗೆ ಆಪತ್ತು; ಕ್ಷೇತ್ರ ಹಂಚಿಕೆಯೇ ಕಗ್ಗಂಟು

12:30 AM Jan 13, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಏಳು ತಿಂಗಳು ಮುಗಿಯುವುದರಲ್ಲಿ ಮಿತ್ರಪಕ್ಷಗಳ ನಡುವೆ ಅಪಸ್ವರ ಎದ್ದಿದ್ದು, ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಅಥವಾ ಮೈತ್ರಿಯೂ ಕಗ್ಗಂಟಾಗಿ ಪರಿಣಮಿಸುವ ಲಕ್ಷಣಗಳು ಕಂಡುಬರುತ್ತಿವೆ. 

Advertisement

ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿದ ನಂತರ ಕಾಂಗ್ರೆಸ್‌ನ ಹಿಡಿತ ಬಿಗಿಯಾಗುತ್ತಿರುವುದರಿಂದ ಜೆಡಿಎಸ್‌ ಸಹ ಸ್ವಲ್ಪ ಮಟ್ಟಿಗೆ ಅಸಮಾಧಾನಗೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ಬಿಗಿ ಪಟ್ಟು ಹಿಡಿಯಲು ತೀರ್ಮಾನಿಸಿದೆ.

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಆದ ಒಪ್ಪಂದದಂತೆ ಮೂರನೇ ಒಂದು ಭಾಗ ಎಲ್ಲದರಲ್ಲೂ ಸಿಗಬೇಕು. 9ರಿಂದ 10 ಸೀಟು ನಮಗೆ ಬೇಕೇ ಬೇಕು ಎಂದು ಜೆಡಿಎಸ್‌ ಪ್ರತಿಪಾದಿಸಲು ಮುಂದಾಗಿದೆ.

ಈ ವಿಚಾರದಲ್ಲಿ ಪಟ್ಟು ಸಡಿಲಿಸಿದರೆ 7ರಿಂದ 8 ಸ್ಥಾನಕ್ಕೆ ಕಾಂಗ್ರೆಸ್‌ ನಮ್ಮನ್ನು ಸೀಮಿತಗೊಳಿಸಬಹುದು. ಅದರಲ್ಲೂ ಮೈಸೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಕೊಡದಿರಬಹುದು ಎಂಬ ಅನುಮಾನವೂ ಜೆಡಿಎಸ್‌ನಲ್ಲಿದೆ.

ಇನ್ನೂ ಸೀಟು ಹಂಚಿಕೆ ಮಾತುಕತೆ, ಕ್ಷೇತ್ರಗಳ ಹಂಚಿಕೆ ಇತ್ಯರ್ಥವಾಗುವ ಮುನ್ನವೇ ಹಾಲಿ ಕಾಂಗ್ರೆಸ್‌ ಸಂಸದರು ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಬಳಿಗೂ ಹೋಗಿ ನಾವು ಗೆದ್ದಿರುವ ಕ್ಷೇತ್ರ ಬಿಟ್ಟು ಕೊಡುವುದು ಬೇಡ ಎಂದು ಮನವಿ ಸಲ್ಲಿಸಿರುವುದು ಇದಕ್ಕೆ ಕಾರಣ.

Advertisement

ಹೀಗಾಗಿ, ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೀದರ್‌, ಬಿಜಾಪುರ ಕ್ಷೇತ್ರಗಳು ನಮಗೆ ಬೇಕು ಎಂದು ಜೆಡಿಎಸ್‌ ಹಠ ಹಿಡಿಯಲು ನಿರ್ಧರಿಸಿದೆ. ಒಂದೊಮ್ಮೆ  ಅಷ್ಟು ಸೀಟು ಸಿಗದಿದ್ದರೆ ಅಥವಾ ತಾವು ಬಯಸಿದ ಕ್ಷೇತ್ರಗಳನ್ನು ನೀಡಲು ಕಾಂಗ್ರೆಸ್‌ ಸಾರಾಸಗಟಾಗಿ ನಿರಾಕರಿಸಿದರೆ  ಪ್ರತ್ಯೇಕವಾಗಿಯೇ ಸ್ಪರ್ಧೆ ಮಾಡುವ ಬೆದರಿಕೆ ಒಡ್ಡಬಹುದು. ತೀರಾ ಅನಿವಾರ್ಯವಾದರೆ ಸಮ್ಮಿಶ್ರ ಸರ್ಕಾರವಿದ್ದರೂ ಫ್ರೆಂಡ್ಲಿ ಫೈಟ್‌ ಎಂದು ಪ್ರತ್ಯೇಕವಾಗಿಯೇ ಚುನಾವಣೆಗೆ ಹೋದರೂ ಆಶ್ಚರ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್‌ನ ಹೊಸ ವರಸೆ ಮಾಹಿತಿ ಸಿಕ್ಕಿರುವುದರಿಂದಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ  ಈಶ್ವರ್‌ ಖಂಡ್ರೆಯವರು, ತ್ಯಾಗ ಮಾಡಬೇಕಾಗುತ್ತದೆ. ಒಂದೆರಡು ಕಡೆ ಅದು ಅನಿವಾರ್ಯ ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಮಹಾಘಟ್‌ಬಂಧನ್‌ ಮುಂಚೂಣಿ ವಹಿಸಿರುವುದು ದೇವೇಗೌಡರು. ಅವರೇ ಬೇಸರಗೊಂಡರೆ ರಾಷ್ಟ್ರ ಮಟ್ಟದಲ್ಲಿ ಬೇರೆ ರೀತಿಯ ಸಂದೇಶ ರವಾನೆಯಾಗುತ್ತದೆ. ಹೀಗಾಗಿ, ಕಾಂಗ್ರೆಸ್‌ ಗೆದ್ದಿರುವ ಕ್ಷೇತ್ರಗಳ ಪೈಕಿ ಜೆಡಿಎಸ್‌ಗೆ ಶಕ್ತಿ ಇರುವ ಕಡೆ ಬಿಟ್ಟುಕೊಡಬೇಕಾಗಿ ಬರಬಹುದು ಎಂಬುದು  ಅವರ ವಾದ.

ಆದರೆ, ನಾವು ಗೆದ್ದಿರುವ ಕ್ಷೇತ್ರ ಅವರಿಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್‌ ಸಂಖ್ಯಾಬಲ ಕಡಿಮೆಯಾಗಿ, ಜೆಡಿಎಸ್‌ ಬಲ ಹೆಚ್ಚಾಗಲಿದೆ. ಇದರಿಂದ ಪಕ್ಷದ ಮುಂದಿನ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ ಎಂಬುದು ಕಾಂಗ್ರೆಸ್‌ನ ಹಾಲಿ ಸಂಸದರ ಪ್ರತಿಪಾದನೆ.

ಲೋಕಸಭೆ ಚುನಾವಣೆಗೂ ಒಟ್ಟಿಗೆ ಹೋಗುವ ದೃಷ್ಟಿಯಿಂದಲೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾಗಿದ್ದು. ಆಗ ಕಾಂಗ್ರೆಸ್‌ ಗೆದ್ದಿರುವ ಕ್ಷೇತ್ರಗಳು ಕಾಂಗ್ರೆಸ್‌ಗೆ, ಜೆಡಿಎಸ್‌ ಗೆದ್ದಿರುವ ಕ್ಷೇತ್ರಗಳು ಜೆಡಿಎಸ್‌ಗೆ, ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಂಚಿಕೆ ಮಾಡಿಕೊಳ್ಳುವುದು ಎಂಬ ಮಾತು  ಆಗಿತ್ತು ಎನ್ನಲಾಗಿದೆ. ಆದರೆ,  ಒಟ್ಟಾರೆ 28 ಕ್ಷೇತ್ರಗಳಲ್ಲಿ ನಮಗೆ 10 ನಿಮಗೆ 18 ಎಂದು ಜೆಡಿಎಸ್‌ ಬೇಡಿಕೆ ಇಟ್ಟಿದೆ. ಎರಡೂ ಪಕ್ಷಗಳ ನಡುವಿನ  ಈ ಹಗ್ಗ ಜಗ್ಗಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದು ಕಾದು ನೋಡಬೇಕಾಗಿದೆ.

ಮೋದಿ ಮಾತಿನ ಮರ್ಮವೇನು?
ಅತ್ತ ಪ್ರಧಾನಿ ನರೇಂದ್ರಮೋದಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗಾœಳಿ ನಡೆಸಿ, ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇದೆ. ಅಲ್ಲಿನ ಮುಖ್ಯಮಂತ್ರಿಯನ್ನು  ಕಾಂಗ್ರೆಸ್‌ನವರು ಕ್ಲರ್ಕ್‌ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆನುಕಂಪದ ಮಾತುಗಳನ್ನು ಆಡಿರುವುದು ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಕುಮಾರಸ್ವಾಮಿ ಬಗ್ಗೆ ಮೃಧು ಧೋರಣೆ ತಾಳಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಳ್ಳುವ ಕಾರ್ಯತಂತ್ರ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ. ಮತ್ತೂಂದೆಡೆ ಕಾಂಗ್ರೆಸ್‌ ಜತೆ ಸಂಬಂಧ ಕಡಿದುಕೊಂಡರೆ ಜೆಡಿಎಸ್‌-ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಅವಕಾಶ ಸಿಗಬಹುದು ಎಂಬ ಕಾರಣಕ್ಕೂ ಹೇಳಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

– ಎಸ್‌. ಲಕ್ಷ್ಮಿ ನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next