Advertisement
ಕಾಂಗ್ರೆಸ್‌ನ ಪದ್ಮರಾಜ್ ಆರ್. ಅವರು ವಕೀಲರಾದರೆ, ಬಿಜೆಪಿಯ ಕ್ಯಾಪ್ಟನ್ ಬ್ರಿಜೇಶ್ ಚೌಟ ನಿವೃತ್ತ ಸೇನಾಧಿಕಾರಿ. ಇಬ್ಬರಲ್ಲಿನ ಪ್ರಮುಖವಾದ ಸಾಮ್ಯತೆಯೆಂದರೆ ಇಬ್ಬರೂ ವೃತ್ತಿಪರ ರಾಜಕಾರಣಿಗಳಲ್ಲ ಎಂಬುದು. ಇಬ್ಬರೂ ಆರೋಪ ರಹಿತರು. ಹಾಗೆಯೇ ಇಬ್ಬರದ್ದೂ ರಾಜಕೀಯ ಕ್ಷೇತ್ರದ ರಂಗ ಪ್ರವೇಶ.
Related Articles
Advertisement
ಬಿಲ್ಲವ ಸಮುದಾಯ ಈ ಕ್ಷೇತ್ರದಲ್ಲಿ ನಿರ್ಣಾಯಕ ಎಂದಿದೆ. ಬಿಲ್ಲವರ ನಿಗಮ ಬೇಕು ಎಂದು ಹೋರಾಟ ಮಾಡಿದ್ದವರು ಗೋಕರ್ಣನಾಥ ಕ್ಷೇತ್ರದ ಖಜಾಂಚಿಯೂ ಆಗಿರುವ ಪದ್ಮರಾಜ್ ಆರ್. ಹಿಂದೂ ಪರಿವಾರದ ಮಾಜಿ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಇತ್ತೀಚೆಗೆ ಬಿಲ್ಲವ ಅಭ್ಯರ್ಥಿಗಳನ್ನು ಬಿಲ್ಲವ ವೇದಿಕೆ ಪಕ್ಷಾತೀತವಾಗಿ ಬೆಂಬಲಿಸಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ಸಹ ಪ್ರಧಾನಿ ಮೋದಿಯವರನ್ನು ಕರೆಸಿ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಮಾಲಾರ್ಪಣೆ, ಅದೇ ಸ್ಥಳದಿಂದ ರೋಡ್ ಶೋ ಕೂಡ ನಡೆಸಿ ಪ್ರತಿತಂತ್ರವನ್ನೂ ಹೂಡಿದೆ. ಇದು ಬಿಜೆಪಿ ಕಾರ್ಯಕರ್ತರಲ್ಲಿ ಮಿಂಚಿನ ಸಂಚಲನಕ್ಕೆ ನಾಂದಿ ಹಾಡಿದೆ.
ಇನ್ನೊಂದೆಡೆ ಕಳೆದ ಚುನಾವಣೆಯಲ್ಲಿ 46,839 ಮತಗಳನ್ನು ಗಳಿಸಿದ್ದ ಎಸ್‌ಡಿಪಿಐ ಈ ಬಾರಿ ಕಣಕ್ಕಿಳಿಯದೆ ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಂತಿದೆ. 2019ರ ಚುನಾವಣೆಯಲ್ಲಿ 2.74 ಲಕ್ಷ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಜಯ ಸಾಧಿಸಿದ್ದರು. ಆದರೆ ಈ ಬಾರಿ ಬದಲಾಗಿರುವ ಸನ್ನಿವೇಶಗಳಿಂದ ಗೆಲುವಿನ ಅಂತರ ಕಡಿಮೆ ಆಗಬಹುದೆಂಬ ಆತಂಕ ಬಿಜೆಪಿಗೂ ಇದ್ದಂತಿದೆ. ಆದರೆ ಈ ಅಂತರ ಯಾರಿಗೆ ಗೆಲುವು ತಂದುಕೊಡುತ್ತದೆಂಬ ಕುತೂಹಲಕ್ಕೆ 42 ದಿನಗಳು ಕಾಯಬೇಕಿದೆ.
ವಿಷಯಗಳು: ಕ್ಷೇತ್ರದಲ್ಲಿ ಹಿಂದಿನಿಂದಲೂ ಚುನಾವಣೆಗೆ ನಿರ್ಣಾಯಕವೆನಿಸುತ್ತಿರುವುದು ಹಿಂದುತ್ವ ಹಾಗೂ ಕಳೆದ ಒಂದು ದಶಕದಲ್ಲಿ ನರೇಂದ್ರ ಮೋದಿ. ಮೋದಿಯವರ ಪರವಾದ ಅಲೆ ಈಗಲೂ ಇರುವುದು ಅವರ ರೋಡ್ ಶೋದಲ್ಲಿ ವ್ಯಕ್ತವಾಗಿದೆ. ಅಲ್ಲದೇ ಹಿಂದಿನ ಎರಡು ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರವನ್ನು ಹೆಚ್ಚಿಸಿತ್ತು. ಈ ಬಾರಿ ಮಂಗಳೂರು ರೈಲ್ವೇ ವಲಯ ರಚನೆಯಂಥ ಹಳೆ ಬೇಡಿಕೆ, ತುಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ, ಸ್ಥಳೀಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಆದ್ಯತೆ, ದಕ್ಷಿಣ ಕನ್ನಡಕ್ಕೆ ರೈಲ್ವೇ ಸೌಲಭ್ಯ ಹೆಚ್ಚಳದಂಥ ವಿಷಯಗಳು ಮುನ್ನೆಲೆಯಲ್ಲಿವೆ. ಹಾಗೆಯೇ ಸೌಜನ್ಯಾ ಹೋರಾಟ ಸಮಿತಿಯ ನೋಟಾ ಅಭಿಯಾನವೂ ಚರ್ಚೆಯಲ್ಲಿದೆ.
ವೇಣು ವಿನೋದ್ ಕೆ.ಎಸ್.