ಶಿವಮೊಗ್ಗ: ನಟ ದರ್ಶನ್ ಅವರು ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿರುವ ವಿಚಾರಕ್ಕೆ ಮಂಡ್ಯ ಜೆಡಿಎಸ್ ಅಭ್ಯರ್ಥಿ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ”ಇದರಲ್ಲಿ ತಪ್ಪೇನಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರ ಪರ ಬೇಕಾದರೂ ಪ್ರಚಾರ ಮಾಡಬಹುದು. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಯಾರು ಯಾರ ಪರವಾಗಿ ಬೇಕಾದರೂ ಪ್ರಚಾರ ಮಾಡಬಹುದು” ಎಂದರು.
ಶಿವಮೊಗ್ಗದಲ್ಲಿ ರಾಘವೇಂದ್ರ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ಅವರು ಮಾತನಾಡಿ, ರಾಘವೇಂದ್ರ ಅವರು ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮೈತ್ರಿಯ ಹೊಂದಾಣಿಕೆಯಿಂದ ನಾವೆಲ್ಲರೂ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರಿಂದ ನಾಯಕ ಮಟ್ಟದಲ್ಲಿ ಈ ಹೊಂದಾಣಿಕೆ ಸುಮಧುರ ಬಾಂಧವ್ಯದಲ್ಲಿ ನಡೆಯುತ್ತಿದೆ. ರಾಘವೇಂದ್ರ ನಾಮಪತ್ರ ಸಲ್ಲಿಕೆಗೆ ನಾವು ಆಗಮಿಸಿದ್ದೇವೆ. ಅವರಿಗೆ ಯಶಸ್ಸು ಸಿಗಬೇಕೆಂದು ನಮ್ಮ ಅಭಿಲಾಷೆ, ಇದು ಜನರ ಬಯಕೆ ಕೂಡ ಎಂದರು.
ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿ ಗಳು 28 ಕ್ಕೆ 28 ಗೆಲ್ಲುತ್ತಾರೆ ಎಂದು ಎಚ್ ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ವಿಚಾರಕ್ಕೆ ಮಾತನಾಡಿ, ಅದೆಲ್ಲಾ ನಿಧಾನವಾಗಿ ಮಾತಾನಾಡೋಣ. ಆಮೇಲೆ ಚರ್ಚೆ ಮಾಡೋಣ ಎಂದರು.
ರಾಹುಲ್ ಗಾಂಧಿ ಪ್ರಚಾರ ವಿಚಾರಕ್ಕೆ ಮಾತನಾಡಿ, ಪಾಪ ಪ್ರಚಾರ ಮಾಡಿದ್ದಾರೆ. ಅಧ್ಯಕ್ಷರು ಯಾರು, ಮುಖ್ಯಮಂತ್ರಿ ಯಾರು ಎಂಬುದು ಅವರಿಗೆ ಗೊತ್ತಿಲ್ಲ. ಇನ್ಯಾವ ಪ್ರಚಾರ ಮಾಡಿದ್ದಾರೆಂದು ನೀವು ತಿಳಿದುಕೊಳ್ಳಿ ಎಂದು ವ್ಯಂಗ್ಯವಾಡಿದರು.