ಉದಯವಾಣಿ ಸಮಾಚಾರ
ಕೊಪ್ಪಳ: ಕೊಪ್ಪಳ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಗೆಲುವು ಕಂಡವರು ಎಚ್.ಜಿ. ರಾಮುಲು ಅವರು. ಇವರು ಕಾಂಗ್ರೆಸ್ ನಿಂದ ನಾಲ್ಕು ಬಾರಿ ಗೆಲುವು ಕಂಡು ಒಂದು ಬಾರಿ ಸೋಲುಂಡ ಇತಿಹಾಸವೂ ಇದೆ. ಇಂದಿರಾ ಗಾಂಧಿ ಅವರ ಪರಮಾಪ್ತರಾಗಿದ್ದ ಇವರು ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಹಿಡಿತ ಹೊಂದಿದ್ದರು.
ಹೌದು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಎಚ್ .ಜಿ.ರಾಮುಲು ಅವರು ದಾಖಲೆ ಸೃಷ್ಟಿಸಿದ್ದಾರೆ. ಈವರೆಗೂ ಯಾರೂ ಇವರ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಕೊಪ್ಪಳ ಲೋಕಸಭಾ ಕ್ಷೇತ್ರವು ಈವರೆಗೂ 17 ಚುನಾವಣೆಗಳನ್ನು ಕಂಡಿದೆ. ಅವುಗಳ
ಪೈಕಿ ನಾಲ್ಕು ಬಾರಿ ಎಚ್.ಜಿ.ರಾಮುಲು ಅವರು ಗೆದ್ದಿದ್ದಾರೆ. ಈ ಹಿಂದೆ ಕೊಪ್ಪಳ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆಗ ಅಭ್ಯರ್ಥಿಗಿಂತ ಪಕ್ಷದ ಚಿಹ್ನೆ ನೋಡಿಯೇ ಜನರು ಮತ ನೀಡುತ್ತಿದ್ದರೆನ್ನುವ ಮಾತುಗಳು ರಾಜಕೀಯ ವಿಶ್ಲೇಷಕರಿಂದ ಅಭಿವ್ಯಕ್ತವಾಗಿವೆ. ಹಿಂದೆಲ್ಲಾ ಚುನಾವಣೆಗೆ ಯಾರೇ ಸ್ಪರ್ಧಿಸಿದರೂ ಯಾವ ಪಕ್ಷದಿಂದ ಸ್ಪರ್ಧಿಸಿದ್ದಾರೆ ಎಂಬುದನ್ನು ನೋಡಿ ಜನತೆ ಅಭ್ಯರ್ಥಿಗೆ ಮತ ನೀಡುತ್ತಿದ್ದರು ಎನ್ನುವುದು ವಿಶ್ಲೇಷಕರ ವಾದ.
ಆಗ ಕಾಂಗ್ರೆಸ್‌ನಲ್ಲಿ ಕೊಪ್ಪಳ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಆಗ ಎಚ್.ಜಿ.ರಾಮುಲು ಅವರು ದೊಡ್ಡ ಹಿಡಿತ ಹೊಂದಿದ್ದರು. ಕಾಂಗ್ರೆಸ್‌ನಲ್ಲಿ ಯಾವುದೇ ನಿರ್ಧಾರ, ನಿರ್ಣಯ ತೆಗೆದುಕೊಳ್ಳಬೇಕಿದ್ದರೂ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಬೇಕು ಎನ್ನುವ ವಿಚಾರಗಳು ಹೈಕಮಾಂಡ್‌ನಿಂದ ರಾಮುಲು ಅವರ ಮನೆಗೆ ಸಂದೇಶ ಬರುತ್ತಿತ್ತು ಎಂಬುದು
ಈ ಹಿಂದಿನವರ ಮಾತಾಗಿವೆ. ರಾಜ್ಯದಲ್ಲಿ ಕೆಲ ಬೆಳವಣಿಗೆಗಳು, ನಿರ್ಧಾರಗಳು ಇಲ್ಲಿಯೇ ನಡೆಯುತ್ತಿದ್ದವು ಎಂಬುದು ಹಿರಿಯ
ರಾಜಕಾರಣಿಗಳ ಅನುಭವದ ಮಾತಾಗಿವೆ.
ಗಂಗಾವತಿ ನಿವಾಸಿಗಳಾದ ಎಚ್.ಜಿ.ರಾಮುಲು ಅವರು ಕೊಪ್ಪಳ ಕ್ಷೇತ್ರವನ್ನು ತಮ್ಮ ಕೈ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಇವರಿಗೆ ಒಂದು ಬಾರಿ ಸೋಲಿನ ಅನುಭವ ತೋರಿಸಿರುವುದು ಈಗಲೂ ದಾಖಲಾಗಿದೆ.
ರಾಮುಲು ನಾಲ್ಕು ಬಾರಿ ಗೆಲುವು: 1980ರ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್ ಹಾಗೂ ಅರಸು ಕಾಂಗ್ರೆಸ್ ಎಂದು ಇಬ್ಭಾಗವಾಗಿದ್ದ ವೇಳೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ (ಇಂ)ದಿಂದ ಸ್ಪರ್ಧಿಸಿದ್ದ ಎಚ್.ಜಿ. ರಾಮುಲು ಮೊದಲ ಬಾರಿಗೆ ಗೆಲುವು ಕಂಡಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಅರಸು ಕಾಂಗ್ರೆಸ್ ಬಣದಿಂದ ಎಚ್. ಆರ್. ಬಸವರಾಜ ಅವರು ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ 1984ರಲ್ಲಿ ಎಚ್.ಜಿ.ರಾಮುಲು 2ನೇ ಬಾರಿಗೆ ಗೆಲುವು ಕಂಡಿದ್ದರು. ಆದರೆ 1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಮುಲು ಅವರಿಗೆ ಜನತಾದಳದಿಂದ ಬಸವರಾಜ ಪಾಟೀಲ್ ಅನ್ವರಿ ಅವರು ಸ್ಪರ್ಧಿಸಿ ರಾಮುಲು ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಮತ್ತೆ 1998, 1999 ಈ ಎರಡು ಅವಧಿಯಲ್ಲೂ ರಾಮುಲು ಅವರು ಗೆಲುವು ಕಂಡಿದ್ದಾರೆ. ನಂತರದ ದಿನಗಳಲ್ಲಿ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದರು. ಈಗಲೂ ಯಾವುದೇ ಹಿರಿಯ ರಾಜಕಾರಣಿಗಳು ಜಿಲ್ಲೆಗೆ ಪ್ರವಾಸ ಬೆಳೆಸಿದರೆ ಎಚ್ .ಜಿ. ರಾಮುಲು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ವಿಶೇಷವೆಂಬಂತೆ ಕ್ಷೇತ್ರದಲ್ಲಿ ನಡೆದ 17 ಲೋಕಸಭಾ ಚುನಾವಣೆಯಲ್ಲಿ ಎಚ್.ಜಿ.ರಾಮುಲು ಅವರನ್ನು ಬಿಟ್ಟರೆ ಈವರೆಗೂ ನಾಲ್ಕಕ್ಕೂ ಹೆಚ್ಚು ಬಾರಿ ಯಾರೂ ಗೆಲುವು ಕಂಡಿಲ್ಲ. ಎಲ್ಲರೂ ಎರಡು ಬಾರಿ ಮಾತ್ರ ಗೆದ್ದಿರುವ ದಾಖಲೆ ಇದೆ. ಇವರ ದಾಖಲೆಯನ್ನು ಈವರೆಗೂ ಯಾರೂ ಮುರಿಯಲು ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಹಿಂದೊಮ್ಮೆ ಕೊಪ್ಪಳದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಕಳೆದ ಮೂರು ಅವಧಿಯಿಂದ ಬಿಜೆಪಿ ಕ್ಷೇತ್ರವನ್ನು ಕೇಸರಿಮಯಗೊಳಿಸಿದೆ. ಕೈ ಮತ್ತೆ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿ ಸತತ ವಿಫಲ ಆಗುತ್ತಿದೆ. ಈಗ ಮತ್ತೆ ಕೈ-ಕಮಲದ ನಡುವೆ 18ನೇ ಲೋಕಸಭಾ ಚುನಾವಣಾ ರಣಕಣ ಶುರುವಾಗಿದೆ. ಈ ಬಾರಿ ಮತದಾರ ಪ್ರಭು ಪಕ್ಷದ ನಿಲುವು ನೋಡಿ ಮತ ನೀಡುವರಾ? ಅಥವಾ ಅಭ್ಯರ್ಥಿ ಮುಖಕ್ಕೆ ಮಣೆ ಹಾಕುವರಾ ಎಂಬುದನ್ನು ಕಾದು ನೋಡಬೇಕಿದೆ.
*ದತ್ತು ಕಮ್ಮಾರ