Advertisement

ಲೋಕಸಭೆ ಮೈತ್ರಿಗೆ ಹತ್ತು-ಹದಿನೆಂಟರ ಲೆಕ್ಕ

06:20 AM Aug 06, 2018 | |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್‌-18, ಜೆಡಿಎಸ್‌ 10 ಸ್ಥಾನ ಹಂಚಿಕೆ ಸೂತ್ರ ಏರ್ಪಟ್ಟಿದೆ. ಕಾಂಗ್ರೆಸ್‌ ಸಂಸದರು ಇರುವ ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜೆಡಿಎಸ್‌ ತೆಕ್ಕೆಗೆ ಜಾರುವ ಸಾಧ್ಯತೆ ಹೆಚ್ಚಾಗಿದೆ.

Advertisement

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೇಲೂ ಜೆಡಿಎಸ್‌ ಕಣ್ಣು ಹಾಕಿತ್ತಾದರೂ ಕಾಂಗ್ರೆಸ್‌ಗೆ ಉಳಿಸಿಕೊಳ್ಳುವಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಯಶಸ್ವಿಯಾಗಿದ್ದಾರೆ. ಸಹೋದರ ಡಿ.ಕೆ.ಸುರೇಶ್‌ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡದಂತೆ ಶಿವಕುಮಾರ್‌ ಮನವಿಗೆ ಹೈಕಮಾಂಡ್‌ ಸಹ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ಹಾಗೂ ತುಮಕೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗಬಹುದು. ಇದಕ್ಕಾಗಿ ಹಾಲಿ ಸಂಸದರು ಬೇರೆ ಕ್ಷೇತ್ರ ನೋಡಿಕೊಳ್ಳಿ ಎಂಬ ಸೂಚನೆ ಸಹ ಹೈಕಮಾಂಡ್‌ನಿಂದ ಸದ್ಯದಲ್ಲೇ ರವಾನೆಯಾಗಿದೆ.

ಚಿಕ್ಕಬಳ್ಳಾಪುರ ಸಂಸದರಾಗಿರುವ ವೀರಪ್ಪ ಮೊಯ್ಲಿ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಇತ್ತೀಚೆಗೆ ನಡೆದ ಲೋಕಸಭೆ ಕ್ಷೇತ್ರಾವಾರು ಸಭೆಯಲ್ಲೂ  ಈ ಬಗ್ಗೆ ಸ್ಥಳೀಯ ನಾಯಕರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ, ವೀರಪ್ಪಮೊಯ್ಲಿ ಅವರು ಕ್ಷೇತ್ರ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಜೆಡಿಎಸ್‌ ಜತೆ ಮೈತ್ರಿಯಾದರೆ ನನಗೆ ಗೆಲುವು ಸುಲಭವಾಗಲಿದೆ. ಹೀಗಾಗಿ ಈ ಕ್ಷೇತ್ರ ಕಾಂಗ್ರೆಸ್‌ ಉಳಿಸಿಕೊಳ್ಳಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಜೆಡಿಎಸ್‌ಗೆ 10 ಸ್ಥಾನ ಬಿಟ್ಟುಕೊಟ್ಟು ಕಾಂಗ್ರೆಸ್‌ 18 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಜೆಡಿಎಸ್‌ಗೆ ಬಿಟ್ಟುಕೊಡುವ ಹತ್ತು ಸ್ಥಾನಗಳಲ್ಲಿ ಒಂದು ಸ್ಥಾನ ಬಿಎಸ್‌ಪಿ ಪಾಲಾಗಲಿದೆ. ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಬೀದರ್‌, ವಿಜಯಪುರ, ಬೆಂಗಳೂರು ಕೇಂದ್ರ,  ಬಳ್ಳಾರಿ ಸೇರಿ 10 ಕ್ಷೇತ್ರಗಳಿಗೆ ಜೆಡಿಎಸ್‌ಗೆ ಸಿಗಲಿದೆ ಎಂದು ಹೇಳಲಾಗಿದೆ.

Advertisement

ಮೈಸೂರಿಗೆ ಪಟ್ಟು:
ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲು ಸುತಾರಾಂ ಒಪ್ಪುತ್ತಿಲ್ಲ. ಪ್ರಸ್ತುತ ಬಿಜೆಪಿ ಪ್ರತಿನಿಧಿಸುತ್ತಿರುವ ಮೈಸೂರು ಕ್ಷೇತ್ರ ಕಾಂಗ್ರೆಸ್‌ಗೆ ಪಡೆಯಬೇಕು. ಚಾಮರಾಜನಗರ ಹಾಗೂ ಮೈಸೂರು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಸಚಿವ ಎಚ್‌.ಸಿ.ವಿಜಯಶಂಕರ್‌ ಅವರನ್ನು ಮೈಸೂರು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿಸುವುದು ಸಿದ್ದರಾಮಯ್ಯ ಅವರ ಉದ್ದೇಶ. ಆದರೆ, ಕಾಂಗ್ರೆಸ್‌ಗೆ ಆ ಕ್ಷೇತ್ರ ಪಡೆದಿದ್ದೇ ಆದರೆ ರಾಜವಂಶಸ್ಥರಾದ ಪ್ರಮೋದಾ ದೇವಿ, ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಮನವೊಲಿಸಿ ಅಲ್ಲಿಂದ ಕಣಕ್ಕಿಳಿಸಲು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ , ಚಿತ್ರದುರ್ಗ, ದಾವಣೆಗೆರೆ, ರಾಯಚೂರು, ಧಾರವಾಡ, ಹಾವೇರಿ, ಕೊಪ್ಪಳ, ಕಲಬುರಗಿ, ಚಾಮರಾಜನಗರ ಕಾಂಗ್ರೆಸ್‌ಗೆ ಲಭಿಸಲಿವೆ ಎಂದು ಹೇಳಲಾಗಿದೆ.

ಈಮಧ್ಯೆ, ಜೆಡಿಎಸ್‌ ಶಿವಮೊಗ್ಗ ಕ್ಷೇತ್ರ ಪಡೆದರೆ ಅಲ್ಲಿ ವರನಟ ಡಾ.ರಾಜ್‌ಕುಮಾರ್‌ ಕುಟುಂಬದ ಸೊಸೆ ಗೀತಾ ಶಿವರಾಜ್‌ಕುಮಾರ್‌ ಅಥವಾ ಅವರ ಸಹೋದರ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ.

ಮಂಡ್ಯದಿಂದ ದೇವೇಗೌಡರ ಸ್ಪರ್ಧೆ?
ಜೆಡಿಎಸ್‌ ಮೈಸೂರು ಕ್ಷೇತ್ರ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದು, ಅಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಅದು ಸಾಧ್ಯವಾಗದಿದ್ದರೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಸನ ಕ್ಷೇತ್ರವ°ನು ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆಗೆ ಒಲವು ಹೊಂದಿದ್ದರಾದರೂ ಡಿ.ಕೆ.ಶಿವಕುಮಾರ್‌ ಜೆಡಿಎಸ್‌ಗೆ  ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಕಾರಣ ಗೌಡರು ಮಂಡ್ಯದಿಂದ ಸ್ಪರ್ಧೆ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ಗಾಳ?
ಸೀಟು ಹೊಂದಾಣಿಕೆ ಕುರಿತು ಮಾತುಕತೆ ಪೂರ್ಣಗೊಂಡಿರುವುದರಿಂದ ಕಾಂಗ್ರೆಸ್‌ನಲ್ಲಿ ಅತೃಪ್ತರನ್ನು ತನ್ನತ್ತ ಸೆಳೆಯಲು ಬಿಜೆಪಿ ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದೆ.  ಈಗಾಗಲೇ ಕೆ.ಎನ್‌.ರಾಜಣ್ಣ, ಚೆಲುವರಾಯಸ್ವಾಮಿ, ಎ.ಮಂಜು, ಎಚ್‌.ಸಿ.ಬಾಲಕೃಷ್ಣ ಅವರ ಜತೆ ಈಗಾಗಲೇ ಚರ್ಚಿಸಿದೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next