ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯ ಘೋಷಣೆ “ಚುನಾವಣಾ ಪರ್ವ-ದೇಶದ ಗರ್ವ’ ಎಂದಿದೆ. ಈ ಗರ್ವ ನಿಜ ಆರ್ಥದಲ್ಲಿ ಸಾಕಾರ ಗೊಳ್ಳಬೇಕಾದರೆ ಅಲಸ್ಯ, ಬಿಗುಮಾನ ಬಿಟ್ಟು ಜನ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು. ಆದರೆ, ರಾಜಧಾನಿಯ ಬೆಂಗಳೂರಿನಲ್ಲಿ ಮತ್ತದೇ ಇತಿಹಾಸ ಮರುಕಳಿಸಿದೆ. ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ನಗರ ವ್ಯಾಪ್ತಿಯ ಮೂರು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಶೇ.50ರ ಅಸುಪಾಸಿನಲ್ಲಿದೆ.
“ಅರ್ಬನ್ ಅಪಥಿ’ (ನಗರ ನಿರುತ್ಸಾಹ) ಚುನಾವಣಾ ಆಯೋಗದ ಮುಂದಿರುವ ಸವಾಲು. ಈ ಬಾರಿಯೂ ಅದು ಸವಾಲಾಗಿಯೇ ಉಳಿದಿದೆ. ಇದು ನಗರ ಮತದಾರರನ್ನು ಮತ್ತೂಮ್ಮೆ ಕಟಕಟೆಯಲ್ಲಿ ನಿಲ್ಲಿಸಿದೆ.
ನಗರ ಪ್ರದೇಶಗಳಲ್ಲಿ ಮತಪ್ರಮಾಣ ಹೆಚ್ಚಿಸುವ ಚುನಾವಣಾ ಆಯೋಗದ ಪ್ರಯತ್ನಕ್ಕೆ ಈ ಬಾರಿಯೂ ಹೆಚ್ಚಿನ ಯಶಸ್ಸಿ ಸಿಕ್ಕಿಲ್ಲ. ಚುನಾವಣಾ ಆಯೋಗದ ಪ್ರಯತ್ನಗಳಿಗೆ ಯಥಾರೀತಿ ರಾಜಧಾನಿಯಲ್ಲಿ ಹಿನ್ನಡೆ ಆಗಿದೆ. ಬೆಂಗಳೂರು ಗ್ರಾಮಾಂತರ ಸೇರಿದಂತೆ ನಗರ ವ್ಯಾಪ್ತಿಯ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವೇನು ಕಂಡು ಬಂದಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ ಬಾರಿ ಶೇ. 64.09 ಆಗಿದ್ದರೆ, ಈ ಬಾರಿ ಶೇ.67.29 ಮತದಾನ ಆಗಿದೆ. ಬೆಂಗಳೂರು ಉತ್ತರದಲ್ಲಿ ಕಳೆದ ಬಾರಿ ಶೇ.51.26 ಮತದಾನ ಆಗಿದ್ದರೆ, ಈ ಬಾರಿ ಶೇ.52.81 ಆಗಿದೆ. ಬೆಂಗಳೂರು ಕೇಂದ್ರದಲ್ಲಿ ಕಳೆದ ಅತಿ ಕಡಿಮೆ ಶೇ.50.84 ಆಗಿದ್ದರೆ, ಈ ಬಾರಿ ಶೇ.52.81 ಮತದಾನ ಆಗಿದೆ. ಮೊದಲ ಹಂತದಲ್ಲಿ ಮತದಾನ ನಡೆದ 14 ಕ್ಷೇತ್ರಗಳ ಪೈಕಿ ಇದು ಅತಿ ಕಡಿಮೆ ಮತದಾನ ಆಗಿದೆ.
ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಆಯೋಗ ಹತ್ತು ಹಲವು ಕ್ರಮಗಳನ್ನು ಕೈಗೊಂಡಿತು. ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತ ಸಹ ಪ್ರತ್ಯೇಕವಾಗಿ ಸಾಲು-ಸಾಲು ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸಿತು. ಆದರೆ, ಮತದಾರರಿಂದ ಅದಕ್ಕೆ ತಕ್ಕ ಸ್ಪಂದನೆ ಸಿಕ್ಕಿಲ್ಲ. ರಾಜಧಾನಿಯ ಜನ ಸಂಖ್ಯೆಯಲ್ಲಿ ವಲಸಿಗ ಜನಸಂಖ್ಯೆ (ಫ್ಲೋಟಿಂಗ್ ಪಾಪುಲೇಷನ್) ಹೆಚ್ಚಾಗಿದೆ. ಮತದಾರರ ಸಂಖ್ಯೆ ಕಡಿಮೆ ಇದೆ ಎಂಬ ಸಿದ್ಧ ವಾದ ಪ್ರತಿ ಬಾರಿ ಮುನ್ನೆಲೆಗೆ ಬರುತ್ತಿದೆ. ಆದರೆ, ಒಟ್ಟು ಮತದಾರರಲ್ಲಿ ಅರ್ಧದಷ್ಟು ಜನ ಮತ ಚಲಾಯಿಸಿದಿರುವುದೂ ವಾಸ್ತವ ಸಂಗತಿಯಾಗಿದೆ.