ಚಿಕ್ಕಬಳ್ಳಾಪುರ: ವರ್ಷದ ಹಿಂದೆ ತಮ್ಮದೇ ಆದ ರಾಜಕೀಯ ಅಸ್ತಿತ್ವಕ್ಕಾಗಿ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಆರೋಪ. ಪ್ರತ್ಯಾರೋಪ, ಟೀಕೆ, ಟಿಪ್ಪಣಿಗಳಿಂದಾಗಿ ಜಂಗೀಕುಸ್ತಿ ಏರ್ಪಟ್ಟು ಗಮನ ಸೆಳೆದಿದ್ದ ಬಿಜೆಪಿ, ಜೆಡಿಎಸ್ ನಾಯಕರ ನಡುವೆ ಇದೀಗ ಮೈತ್ರಿ ಧರ್ಮ ಪಾಲನೆಗೆ ಒತ್ತು ನೀಡಿ ಲೋಕ ಸಮರದಲ್ಲಿ ಪರಸ್ಪರ ದೋಸ್ತಿ ಆಗಿರುವುದು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯುತ್ತಿದೆ.
ಹೌದು, ರಾಜಕೀಯ ಪಕ್ಷಗಳ ನಡುವೆ ತೀವ್ರ ಪ್ರತಿಷ್ಠೆಯ ಕಣವಾಗಿರುವ ಲೋಕಸಭಾ ಚುನಾವಣಾ ಪ್ರಚಾರ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು ಅದರಲ್ಲೂ ಬಿಜೆಪಿ-ಜೆಡಿಎಸ್ ನಾಯಕರ ಚುನಾವಣಾ ಪ್ರಚಾರ ಒಂದು ರೀತಿ ಸಾರ್ವಜನಿಕ ವಲಯದಲ್ಲಿ ಗಮನ ಸಾಕಷ್ಟು ಸೆಳೆಯುತ್ತಿದೆ.
ಕಳೆದ 2023ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಚುನಾವಣೆಗೆ ಸ್ಪರ್ಧಿಸಿ ಪರಸ್ಪರ ರಾಜಕೀಯ ಎದುರಾಳಿಗಳಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿ ಪರಸ್ಪರ ಕೆಸರರೆಚಾಟಕ್ಕೆ ಸಾಕ್ಷಿಯಾಗಿ ಸೋತು ಗೆದ್ದ ಹಾಲಿ ಮಾಜಿ ಶಾಸಕರು ಇದೀಗ ಬಿಜೆಪಿ, ಜೆಡಿಎಸ್ ಮೈತ್ರಿಯಿಂದಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಯಾರು ಇಲ್ಲ. ಶಾಶ್ವತ ಮಿತ್ರರರು ಯಾರು ಇಲ್ಲ ಎಂಬುದನ್ನು
ಪುಷ್ಠೀಕರಿಸುತ್ತಿವೆ. ಜಿಲ್ಲೆಯಲ್ಲಿ ವಿಶೇಷವಾಗಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಾದ ಎಸ್.ಮುನಿಸ್ವಾಮಿ ಹಾಗೂ ಆಗಿನ ಶಾಸಕ ಜೆಡಿಎಸ್‌ನ ಜೆಕೆ ಕೃಷ್ಣಾರೆಡ್ಡಿ ನಡುವೆ ವಿಧಾನಸಭಾ ಚುನಾವಣೆ ಜೊತೆಗೆ ಮುನಿಸ್ವಾಮಿ ಸಂಸದರದಾಗನಿಂದಲೂ ಇಬ್ಬರ ನಡುವೆ ರಾಜಕೀಯ ವೈರತ್ವದ ಕಾರಣಕ್ಕೆ ತೀವ್ರ ಜಟಾಪಟಿ ಚಿಂತಾಮಣಿ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಿತ್ತು.
ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮ: ಆದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಧರ್ಮದ ಕಾರಣಕ್ಕೆ ಸಂಸದ ಎಸ್.ಮುನಿಸ್ವಾಮಿ, ಈಗ ಮಾಜಿ ಶಾಸಕರಾಗಿರುವ ಜೆಕೆ ಕೃಷ್ಣಾರೆಡ್ಡಿ ಪರಸ್ಪರ ರಾಜಕೀಯ ವೈಮನಸ್ಸು ಬಿಟ್ಟು ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ಸಂಸದರು, ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನೂ ಶಿಡ್ಲಘಟ್ಟ ಕ್ಷೇತ್ರದಲ್ಲೂ ಕೂಡ ಪರಸ್ಪರ ಚುನಾವಣೆಗೆ ಎದುರಾಳಿಗಳಾಗಿದ್ದ ಬಿಜೆಪಿ ಸೀಕಲ್ ರಾಮಚಂದ್ರಗೌಡ, ಜೆಡಿಎಸ್‌ನ ಮೇಲೂರು ರವಿಕುಮಾರ್ (ಶಾಸಕರು) ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವುಗೆ ಹೋರಾಡುತ್ತಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಮುಖಂಡರು ತಮ್ಮ ತಮ್ಮ ಪಕ್ಷಗಳಿಂದ ಅಖಾಡಕ್ಕೆ ಇಳಿದಿರುವ ಮೈತ್ರಿ ಅಭ್ಯರ್ಥಿ ಗೆಲುವುಗೆ ಶ್ರಮಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯುತ್ತಿದ್ದಾರೆ.
ಅಂದು ಪರಸ್ಪರ ಕೆಸರೆರಚಾಟ, ಇಂದು ಪರಸ್ಪರ ಗುಣಗಾನ! :
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಾದ ಜೆಡಿಎಸ್, ಬಿಜೆಪಿ ಪಕ್ಷಗಳ ನಾಯಕರು ಪರಸ್ಪರ ವೇದಿಕೆಗಳಲ್ಲಿ ತಮ್ಮ ರಾಜಕೀಯ ವೈರತ್ವ ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಗಮನ ಸೆಳೆಯುತ್ತಿದ್ದು, ಅಂದು ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ರಾಜಕೀಯ ಕೆಸರರೆಚಾಟಕ್ಕೆ ಇಳಿದ ನಾಯಕರು ಇಂದು ಮೈತ್ರಿ ಹಿನ್ನೆಲೆಯಲ್ಲಿ ಒಬ್ಬರನ್ನ ಒಬ್ಬರು ಗುಣಗಾನ ಮಾಡಿಕೊಂಡು ಮೈತ್ರಿ ಅಭ್ಯರ್ಥಿ ಗೆಲುವುಗೆ ಶಪಥ ಮಾಡಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಏರ್ಪಟ್ಟಿದ್ದ ಮೈತ್ರಿ ಎರಡು ಪಕ್ಷಗಳ ನಾಯಕರ, ಮುಖಂಡರ ನಡುವೆ ಇಷ್ಟೊಂದು ರಾಜಕೀಯ ಸಾಮಾರಸ್ಯ ಕಾಣಲಿಲ್ಲವಾದರೂ ಈಗಿನ ಬಿಜೆಪಿ-ಜೆಡಿಎಸ್ ಮೈತ್ರಿ ರಾಜಕೀಯವಾಗಿ ನಾಯಕರ, ಮುಖಂಡರ ನಡುವೆ ಸಾಮಾರಸ್ಯ ಮೂಡಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವುದು ಅಂತೂ ಗಮನ ಸೆಳೆಯುತ್ತಿದೆ. ಇದು ಲೋಕ ಸಮರದ ಮೇಲೆ ಫಲಿತಾಂಶ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಫಲಿತಾಂಶ ಪ್ರಕಟ ನಂತರವಷ್ಟೇ ತಿಳಿಯಲಿದೆ.
– ಕಾಗತಿ ನಾಗರಾಜಪ್ಪ