Advertisement

Lok Sabha Election: ಚುನಾವಣ ಪ್ರಚಾರಕ್ಕೆ ಬಿಜೆಪಿಯಿಂದ 4 ತಂಡ

11:07 PM Mar 27, 2024 | Team Udayavani |

ಬೆಂಗಳೂರು: ಇಪ್ಪತ್ತೆಂಟೂ ಲೋಕಸಭಾ ಕ್ಷೇತ್ರಗಳ ಗೆಲುವಿನ ಬೆನ್ನೇರಿ ಹೊರಟಿರುವ ಬಿಜೆಪಿ, ತನ್ನ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರ ಕಾರ್ಯಗಳು ಹೇಗಿರಬೇಕೆಂಬ ನೀಲನಕ್ಷೆ ರೂಪಿಸಿಕೊಂಡಿದ್ದು ನಾಲ್ಕು ಪ್ರತ್ಯೇಕ ತಂಡಗಳಾಗಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದೆ.

Advertisement

ಈಗಾಗಲೇ 28 ಲೋಕಸಭಾ ಕ್ಷೇತ್ರಗಳನ್ನೂ 8 ಕ್ಲಸ್ಟರ್‌ಗಳಾಗಿ ವಿಂಗಡಿಸಿಕೊಂಡಿರುವ ಬಿಜೆಪಿ, ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಮೊದಲ ಹಂತದ ಪ್ರಚಾರಕ್ಕೆ ಚಾಲನೆ ನೀಡಿದೆ.

ಮುಂದಿನ ಹಂತದ ಪ್ರಚಾರ ಕಾರ್ಯಕ್ಕೆ ಅಣಿಯಾಗುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹಾಗೂ ಕೇಂದ್ರ ನಾಯಕರ ಪ್ರತ್ಯೇಕ ತಂಡಗಳನ್ನು ರಚಿಸುತ್ತಿದೆ. ನಾಲ್ಕೂ ತಂಡದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರೂ ಇರಲಿದ್ದಾರೆ.

ಉಳಿದಂತೆ ಯಾವ್ಯಾವ ಪ್ರಮುಖರು ಇರಬೇಕು, ಇದರಲ್ಲಿ ಜೆಡಿಎಸ್‌ನ ಎಷ್ಟು ಪ್ರಮುಖರು ಹಾಗೂ ಬಿಜೆಪಿಯ ಎಷ್ಟು ನಾಯಕರು ಇರಬೇಕು, ಯಾವಾಗಿನಿಂದ ಪ್ರವಾಸ ಅರಂಭಿಸಬೇಕು, ಯಾವ್ಯಾವ ಕ್ಷೇತ್ರದಲ್ಲಿ ಯಾವ್ಯಾವ ತಂಡ ಪ್ರವಾಸ ಮಾಡಬೇಕು ಎಂಬುದರ ರೂಪುರೇಷೆ ಇನ್ನಷ್ಟೇ ಸಿದ್ಧವಾಗಬೇಕಿದೆ.

ಜೆಡಿಎಸ್‌ ಜತೆಗೆ ಸಮನ್ವಯ ಸಾಧನೆ
ಬಿಜೆಪಿ ಹಾಗೂ ಜೆಡಿಎಸ್‌ ತನ್ನ 28 ಅಭ್ಯರ್ಥಿಗಳ ಹೆಸರನ್ನು ಬಹುತೇಕ ಅಂತಿಮಗೊಳಿಸಿದ್ದು ಅಸಮಾಧಾನ ಶಮನ ಮತ್ತು ಸಮನ್ವಯ ಸಾಧಿಸುವ ಕಾರ್ಯದಲ್ಲಿ ಸದ್ಯಕ್ಕೆ ಮಗ್ನವಾಗಿದೆ. ಏತನ್ಮಧ್ಯೆ, ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆ ನಡೆಸಿದ್ದು ಗುರುವಾರ ಮಂಡ್ಯದಲ್ಲೂ ಸಮನ್ವಯ ಸಭೆ ನಡೆಯಲಿದೆ. ಅಸಮಾಧಾನ ಶಮನಗೊಂಡು ಸಮನ್ವಯ ಸಾಧನೆ ಯಶಸ್ವಿಯಾದಂತೆ ಪ್ರವಾಸ ನಡೆಸಲಿರುವ ತಂಡದ ಸದಸ್ಯರ ಆಯ್ಕೆಯೂ ಅಂತಿಮಗೊಳ್ಳಲಿದೆ.

Advertisement

4 ತಂಡ, ದಿನಕ್ಕೆ 2ರಿಂದ 3 ಕಡೆ ಪ್ರಚಾರ
ಗೋಡೆ ಬರಹ ಅಭಿಯಾನ, ಗ್ರಾಮ ಚಲೋ, ಫ‌ಲಾನುಭವಿಗಳ ಸಂಪರ್ಕ, ವಿಕಸಿತ ಭಾರತ, ರೈತ ಪರಿಕ್ರಮ ಅಥವಾ ಗ್ರಾಮ ಪರಿಕ್ರಮ ಯಾತ್ರೆ ಸೇರಿ ವಿವಿಧ ಅಭಿಯಾನಗಳ ಮೂಲಕ ಸ್ಥಳೀಯವಾಗಿ ಮತದಾರರನ್ನು ತಲುಪಲು ಪ್ರಯತ್ನಿಸಿರುವ ಬಿಜೆಪಿ, ವಿವಿಧ ಪ್ರಕೋಷ್ಠಗಳ ಮುಖಾಂತರ ಆಯಾ ವರ್ಗದ ಜನರನ್ನು ಮುಟ್ಟಲೆತ್ನಿಸುತ್ತಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಇಂತಹ 70-80 ಕಾರ್ಯಕ್ರಮಗಳನ್ನು ಈ ಬಾರಿಯ ಚುನಾವಣೆಗಾಗಿ ರೂಪಿಸಿದ್ದು, ಎಲ್ಲ ಚಟುವಟಿಕೆಗಳನ್ನು ನಮೋ ಆಪ್‌ ಹಾಗೂ ಸರಳ್‌ ಆಪ್‌ ಮೂಲಕ ನಿರ್ವಹಿಸುತ್ತಿದೆ. ಇದರೊಂದಿಗೆ ರಚನೆಯಾಗುತ್ತಿರುವ ನಾಲ್ಕು ತಂಡಗಳು ದಿನವೊಂದಕ್ಕೆ ಪ್ರತಿ ಲೋಕಸಭಾ ಕ್ಷೇತ್ರದ ಎರಡರಿಂದ ಮೂರು ಕಡೆಗಳಲ್ಲಿ ರ್ಯಾಲಿ, ಸಮಾವೇಶ ಇತ್ಯಾದಿಗಳ ಮೂಲಕ ಪ್ರಚಾರ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next