ಹೊಸದಿಲ್ಲಿ: ಹಿರಿಯ ಬಾಲಿವುಡ್ ನಟ, ಬಿಜೆಪಿ ಹಾಲಿ ಸಂಸದ ಶತೃಘ್ನ ಸಿನ್ಹಾ ಅವರಿಗೆ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದು, ಸಿನ್ಹಾ ಪ್ರತಿನಿಧಿಸುವ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಈ ಬಾರಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಣಕ್ಕಿಳಿಯಲಿದ್ದಾರೆ.
ಶನಿವಾರ ಲೋಕಸಭಾ ಚುನಾವಣೆಗೆ ಎನ್ ಡಿಎ ಮೈತ್ರಿಕೂಟ ಬಿಹಾರದ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಬಹುತೇಕ ಹಾಲಿ ಸಂಸದರು ತಮ್ಮ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಿಜೆಪಿಯೊಳಗಿದ್ದು ಬಿಜೆಪಿಯನ್ನೇ ವಿರೋಧಿಸುತ್ತಿದ್ದ ‘ಫೈರ್ ಬ್ರ್ಯಾಂಡ್’ ಶತೃಘ್ನ ಸಿನ್ಹಾ ಗೆ ಮಾತ್ರ ಟಿಕೆಟ್ ನಿರಾಕರಿಸಲಾಗಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸಿನ್ಹಾ ನೆಲದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.
ಈಗಾಗಲೆ ಬಿಜೆಪಿಯನ್ನು ವಿರೋಧಿಸುತ್ತಿರುವ ಶತೃಘ್ನ ಸಿನ್ಹಾ, ಕಾಂಗ್ರೆಸ್ ಸೇರುವ ಅವಕಾಶವಿದ್ದು, ಸ್ವಕ್ಷೇತ್ರ ಪಾಟ್ನಾ ಸಾಹಿಬ್ ನಿಂದಲೇ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
ಕೇಂದ್ರ ಸಚಿವರುಗಳಾದ ರಾಧಾ ಮೋಹನ್ ಸಿಂಗ್, ರಾಮ್ ಕೃಪಾಲ್ ಯಾದವ್, ರಾಜೀವ್ ಪ್ರತಾಪ್ ರೂಡಿ, ರಾಜ್ ಕುಮಾರ್ ಸಿಂಗ್, ಗಿರಿರಾಜ್ ಸಿಂಗ್ ಅವರಿಗೆ ಲೋಕಸಭಾ ಟಿಕೆಟ್ ನೀಡಲಾಗಿದೆ.
ಬಿಹಾರದಲ್ಲಿ ಎಪ್ರಿಲ್ 11ರಿಂದ ಮೇ 19ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಕೂಟದಿಂದ ದೂರವುಳಿದಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಈ ಚುನಾವಣೆಗೆ ಮತ್ತೆ ಎನ್ ಡಿಎಯೊಂದಿಗೆ ಕೈಜೋಡಿಸಿದ್ದಾರೆ.