Advertisement

ಜನರಿಗೆ ಕಲಬೆರಕೆ ಸರಕಾರ ಬೇಕಾಗಿಲ್ಲ​​​​​​​

12:30 AM Feb 08, 2019 | |

ಹೊಸದಿಲ್ಲಿ: ದೇಶದ ಜನರು ಮಹಾ ಮಿಲಾವತ್‌ (ಕಲಬೆರಕೆ) ಸರಕಾರ ಬಯಸುತ್ತಿಲ್ಲ. ಬದಲಾಗಿ ಈಗಿನಂತೆಯೇ ಇರುವ ಸದೃಢ ಸರಕಾರವನ್ನು ಬಯಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. 

Advertisement

ಲೋಕಸಭೆಯಲ್ಲಿ ಗುರುವಾರ ರಾಷ್ಟ್ರಪತಿ ಭಾಷಣದ ಮೇಲೆ ವಂದನಾ ನಿರ್ಣಯದ ಗೊತ್ತುವಳಿ ಚರ್ಚೆಗೆ ಉತ್ತರವಾಗಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗಾಗಿ ಬಿಜೆಪಿ ವಿರುದ್ಧ ಮಹಾಮೈತ್ರಿ ಕೂಟ ರಚಿಸಲು ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳನ್ನು ಪ್ರಬಲವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. 

ಬಿಜೆಪಿ ನೇತೃತ್ವದ ಸರಕಾರ ಚುನಾವಣಾ ಆಯೋಗ, ಸುಪ್ರೀಂಕೋರ್ಟ್‌ ಸೇರಿದಂತೆ ಹಲವು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಪ್ರಧಾನಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರಿಂದ ಇಂಥ ಆರೋಪವೇ ಎಂದು ಪ್ರಶ್ನಿಸಿದ್ದಾರೆ. ದಿ.ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ 50 ಬಾರಿ ಚುನಾಯಿತ ಸರಕಾರಗಳನ್ನು ವಜಾ ಮಾಡಿದ್ದರು. ಅದು ಕಾಂಗ್ರೆಸಿಗರಿಗೆ ಮರೆತು ಹೋಯಿತೇ ಎಂದು ಕುಟುಕಿದ್ದಾರೆ. 1959ರಲ್ಲಿ ಕೇರಳಕ್ಕೆ ತೆರಳಿ ಹೊಸದಿಲ್ಲಿಗೆ ಬಂದ ಕೂಡಲೇ ದಿ.ಜವಾಹರ್‌ಲಾಲ್‌ ನೆಹರೂ ಇ.ಎಂ.ಎಸ್‌.ನಂಬೂದಿರಿಪ್ಪಾಡ್‌ ಸರಕಾರವನ್ನು ವಜಾ ಮಾಡಿದರು. ಆ ಘಟನೆಗೆ ಈಗ 60 ವರ್ಷ ತುಂಬಿತು ಎನ್ನುವ ಮೂಲಕ ಕಾಂಗ್ರೆಸ್‌ಗೆ ಚುಚ್ಚಿದ ಮೋದಿ. ಕೇರಳದಲ್ಲಿ ಪರಸ್ಪರ ಮುಖ ನೋಡಿಕೊಳ್ಳಲು ಇಚ್ಛಿಸದವರು ಕೋಲ್ಕತಾದಲ್ಲಿ ಬೃಹತ್‌ ರ್ಯಾಲಿ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು. 

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ವಾಗ್ಧಂಡನೆ ಮಂಡಿಸಲು ಕಾಂಗ್ರೆಸ್‌ ನಿರ್ಧರಿಸಿತ್ತು. ಭೂಸೇನೆಯ ಮುಖ್ಯಸ್ಥರನ್ನು “ಗೂಂಡಾ’ ಎಂದು ಟೀಕಿಸಿತ್ತು ಎಂದು ಆಕ್ರೋಶ ಭರಿತರಾಗಿ ಹೇಳಿದರು. “ನೀವು ಚುನಾವಣಾ ಆಯೋಗ, ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆ ಪ್ರಶ್ನೆ ಮಾಡಿದ್ದೀರಿ. ಯೋಜನಾ ಆಯೋಗವನ್ನು ಜೋಕರ್‌ಗಳು ಇರುವ ಸ್ಥಳ ಎಂದು ಹೇಳಿದ್ದೀರಿ. ಇಂಥವರು ನರೇಂದ್ರ ಮೋದಿ ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ’ ಎಂದರು.

ರಫೇಲ್‌ ಪ್ರಸ್ತಾಪ: ಬಹುಕೋಟಿ ರೂ. ಮೌಲ್ಯದ ರಫೇಲ್‌ ಡೀಲ್‌ನಲ್ಲಿ ಅವ್ಯವಹಾರವಾಗಿದೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಮೋದಿ, “ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿ ಐಎಎಫ್ ಆಧುನೀಕರಣಕ್ಕೆ ಮನಸ್ಸು ಮಾಡಲೇ ಇಲ್ಲ. ಇದು ನನ್ನ ಗಂಭೀರ ಆರೋಪ. ನೆರೆಹೊರೆಯ ದೇಶಗಳ ಸೇನೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಬಲಿಷ್ಠವಾಗುತ್ತಿದ್ದರೆ, ನಮ್ಮ ಸೇನೆ ಕುಗ್ಗುತ್ತಿತ್ತು. ಯಾರೋ ಒಬ್ಬರು ಮಾಮಾ, ಚಾಚಾ ಬರುತ್ತಿದ್ದರು’, ಯುಪಿಎ ಅವಧಿಯಲ್ಲಿ ರಕ್ಷಣಾ ಖರೀದಿ ಸೇರಿ ಪ್ರತಿಯೊಂದು ಒಪ್ಪಂದಲ್ಲಿ ದಲ್ಲಾಳಿಗಳದ್ದೇ ಪ್ರಭಾವ ಜೋರಾಗಿತ್ತು. ಸೇನೆಯನ್ನು ಆಧುನೀಕರಣಗೊಳಿಸದೇ ಇದ್ದದ್ದು ಮಹಾ ಅಪರಾಧ. ಅವರ ಅವಧಿಯಲ್ಲಿ ಸೈನಿಕರ ಕೈಯ್ಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ, ಬೂಟ್‌, ಉತ್ತಮ ಸಂವಹನ ಉಪಕರಣಗಳು ಇರಲಿಲ್ಲ. ನಮ್ಮ ಸರಕಾರ ಬಂದ ಬಳಿಕ ಆ ಕೊರತೆ ನೀಗಿಸಲಾಯಿತು. ಕೊರತೆ ನೀಗಿಸದವರು ಸರ್ಜಿಕಲ್‌ ದಾಳಿಯ ಬಗ್ಗೆ ಏಕೆ ಮಾತನಾಡುತ್ತೀರಿ ಎಂದು ಕಾಂಗ್ರೆಸ್‌ಗೆ ಪ್ರಶ್ನೆಯನ್ನೆಸೆದರು. 

Advertisement

ಖರ್ಗೆ ಡೀಸೆಂಟ್‌ ವ್ಯಕ್ತಿ; ಆದರೆ ಡಿಸೆಂಟ್‌ ನೋಟ್‌ ಕೊಡ್ತಾರೆ
ಭಾಷಣದಲ್ಲಿ ಪ್ರಧಾನಿ 4 ಬಾರಿ ಖರ್ಗೆಯವರನ್ನು ಕಿಚಾಯಿಸಿದರು. “ಖರ್ಗೆ ಜಿ ಡೀಸೆಂಟ್‌ (ಯೋಗ್ಯ) ವ್ಯಕ್ತಿ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಅವರು ಡಿಸೆಂಟ್‌ (ಅಸಮ್ಮತಿ) ಸೂಚಿಸುವ ಪತ್ರ ನೀಡುತ್ತಿದ್ದಾರೆ’ ಎಂದರು. ಸಿಬಿಐ ಮುಖ್ಯಸ್ಥರ ನೇಮಕ ಮತ್ತು ನಿವೃತ್ತ ಮುಖ್ಯಸ್ಥ ಅಲೋಕ್‌ ವರ್ಮಾ ವಜಾ ಪ್ರಶ್ನಿಸಿ ಕೇಂದ್ರ ಹಣಕಾಸು ಸಚಿವ ಜೇಟಿÉಗೆ ಪತ್ರ ಬರೆದುದೂ ಸಹಿತ ಪ್ರತಿಯೊಂದು ವಿಚಾರಕ್ಕೂ ಆಕ್ಷೇಪ ಮಾಡುತ್ತಾರೆ ಎಂದರು. 

ಅದರ ಜೊತೆಗೆ, ಹಿರಿಯರಾದ ಅವರು ನಮ್ಮೆಲ್ಲರ ಆರೋಗ್ಯವನ್ನೂ ವಿಚಾರಿಸುತ್ತಾರೆ ಎಂದು ಹೊಗಳಿದರು. ಹಿಂದಿನ ಸಂದರ್ಭದಲ್ಲಿ ಖರ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ್ದ ಶಾಯರಿಗಳನ್ನು ಪ್ರಧಾನಿ ಮೋದಿ ಓದಿದರು. ಹಿಂದುಳಿದ ವರ್ಗದಿಂದ ಬಂದ ಅವರು, ಪರಿಶ್ರಮ ವಹಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಹಾಗಾಗಿ, ಅವರು ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದರು. 

ಮೈತ್ರಿ ಸರಕಾರದಿಂದ ಅರಾಜಕತೆ ಸೃಷ್ಟಿಯಾಗದು: ದೇವೇಗೌಡ
ಮಹಾಘಟಬಂಧನಕ್ಕೆ ಬಹುಮತಕ್ಕೆ ಲಭ್ಯವಾಗಿ ಅಧಿಕಾರಕ್ಕೇರಿದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂಬ ಬಿಜೆಪಿ ಹೇಳಿಕೆಯನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಳ್ಳಿಹಾಕಿದ್ದಾರೆ. ಹಲವು ಪಕ್ಷಗಳು ಒಟ್ಟಾಗಿ ಸೇರಿ ನಡೆಸುವ ಸರಕಾರ ಕೆಲಸ ಮಾಡಬಲ್ಲದು ಎಂದಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ದೇವೇಗೌಡ, 57 ವರ್ಷಗಳಿಂದಲೂ ತಾನು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ. ಇದು ನನ್ನ ಕೊನೆಯ ಭಾಷಣ ಎಂದು ಹೇಳಿದರು. ಮೈತ್ರಿ ಸರಕಾರವನ್ನು ಅನಗತ್ಯವಾಗಿ ಟೀಕಿಸಬೇಡಿ. ಅಟಲ್‌ ಬಿಹಾರಿ ವಾಜಪೇಯಿ ಕೂಡ ಮೈತ್ರಿ ಸರಕಾರ ನಡೆಸಿದ್ದರು. ಹೊಂದಾ ಣಿಕೆ ಇದ್ದರೆ ಮೈತ್ರಿ ಸರಕಾರ ಉತ್ತಮ ಕೆಲಸ ಮಾಡಬಲ್ಲದು. ತಮ್ಮ ಭಿನ್ನಾಭಿಪ್ರಾ ಯಗಳನ್ನು ಹೊರಹಾಕಬಾರದು ಎಂದು ದೇವೇಗೌಡ ಹೇಳಿದ್ದಾರೆ. 

1996-97ರ ಅವಧಿಯಲ್ಲಿ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದ ದಿನಗಳನ್ನು ನೆನಪಿಸಿಕೊಂಡ ಅವರು, ಆಗ ಮಾಜಿ ಪ್ರಧಾನಿ ವಿ.ಪಿ. ಸಿಂಗ್‌ ಹಾಗೂ ಪ. ಬಂಗಾಳದ ಮಾಜಿ ಸಿಎಂ ಜ್ಯೋತಿ ಬಸು ಪ್ರಧಾನಿ ಹುದ್ದೆ ನಿರಾಕರಿಸಿದ್ದರಿಂದ ಪ್ರಧಾನಿ ಹುದ್ದೆ ನನಗೆ ಒಲಿದು ಬಂದಿತ್ತು ಎಂದೂ ಅವರು ಹೇಳಿದ್ದಾರೆ.

ಸಚಿವ ಗಡ್ಕರಿ ಕೆಲಸಕ್ಕೆ ಸೋನಿಯಾ ಕರತಾಡನ
ಸರಕಾರ ಎಷ್ಟೇ ಉತ್ತಮವಾಗಿ ಕೆಲಸ ಮಾಡಲಿ, ಅದನ್ನು ವಿಪಕ್ಷಗಳು ಮುಕ್ತಕಂಠದಿಂದ ಹೊಗಳುವುದು ಕಡಿಮೆಯೇ. ಆದರೆ, ಲೋಕಸಭೆಯಲ್ಲಿ ಗುರುವಾರ ಅಪರೂಪದ ವಿದ್ಯಮಾನ ನಡೆದಿದೆ. ದೇಶದ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಶ್ಲಾ ಸಿದ್ದಾರೆ.ಪ್ರಶ್ನೋತ್ತರ ಅವಧಿಯಲ್ಲಿ ಗಡ್ಕರಿ ಅವರ ಸಚಿವಾಲಯಕ್ಕೆ ಸಂಬಂಧಿಸಿದ 2 ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳ ಲಾಗಿತ್ತು. ಈ ಸಂದರ್ಭದಲ್ಲಿ ಸಚಿವರು ದೇಶದಲ್ಲಿ ಹೆದ್ದಾರಿ ಅಭಿವೃದ್ಧಿ ಮತ್ತು ಸಂಬಂಧಿತ ವಿಚಾರಗಳ ಬಗ್ಗೆ ಸಮಗ್ರ ವಿವರಣೆ ನೀಡಿದರು. “ಎಲ್ಲಾ ಪಕ್ಷಗಳ ಸಂಸದರು ನನ್ನ ಸಚಿವಾಲಯ ಮಾಡಿದ ಕೆಲಸದ ಬಗ್ಗೆ ಮುಕ್ತ ಕಂಠದ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಸಂತಸದಿಂದ ಮೇಜು ತಟ್ಟಿದರು. ಅಷ್ಟರ ವರೆಗೆ ತಾಳ್ಮೆಯಿಂದ ಮಾತುಗಳನ್ನು ಕೇಳುತ್ತಿದ್ದ ಯುಪಿಎ ಅಧ್ಯಕ್ಷೆ  ಸೋನಿಯಾ ಗಾಂಧಿ, ಹರ್ಷಭರಿತರಾಗಿ ತಲೆದೂಗಿ ಮುಗುಳ್ನಕ್ಕರು. ಜತೆಗೆ ಉತ್ತಮ ಕೆಲಸ ಮಾಡಿದ್ದೀರಿ ಎಂದು ಸಂಜ್ಞೆಯನ್ನೂ ಬೀರುತ್ತಾ, ಮೇಜು ತಟ್ಟಿ ಮೆಚ್ಚುಗೆ ವ್ಯಕ್ತಪಡಿ ಸಿದರು. ಅದನ್ನು ಗಮನಿಸಿದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹಿತ ಇತರ ಸದಸ್ಯರೂ ಸಹಮತ ವ್ಯಕ್ತಪಡಿಸಿದರು. 

ಮೋದಿ ಗುಡುಗು
ಸೇನಾ ಪಡೆ, ಸುಪ್ರೀಂಕೋರ್ಟ್‌, ಚುನಾವಣಾ ಆಯೋಗಗಳನ್ನು  ಕಾಂಗ್ರೆಸ್‌ ಅವಮಾನಿಸಿದೆ ಮಹಾ ಮೈತ್ರಿಕೂಟ ಈಗ ಶೋಚನೀಯ ಸ್ಥಿತಿಯಲ್ಲಿದೆ ದೇಶದ ಸೇನಾಪಡೆ ಆಧುನೀಕರಣಗೊಳಿಸಲು ಕಾಂಗ್ರೆಸ್‌ ಬಯಸಿರಲಿಲ್ಲ ಚುನಾವಣೆಯಲ್ಲಿ ಹಲವು ಸುಳ್ಳು ಭರವಸೆ ನೀಡಿತ್ತು ಯುಪಿಎ ಸಂವಿಧಾನದ 356ನೇ  ವಿಧಿ ದುರುಪಯೋಗ ಮಧ್ಯವರ್ತಿಗಳ ಮೂಲಕವೇ ಪ್ರಮುಖ ಒಪ್ಪಂದದಗಳು ವಿದೇಶಗಳಲ್ಲಿ ದೇಶಕ್ಕೆ ಅವಮಾನ

Advertisement

Udayavani is now on Telegram. Click here to join our channel and stay updated with the latest news.

Next