Advertisement
ಸೋಮವಾರ ರಾಜ್ಯಸಭೆಯಲ್ಲಿನ ಕಾಂಗ್ರೆಸ್ ಉಪ ನಾಯಕ ಪ್ರಮೋದ್ ತಿವಾರಿ ಮಾತನಾಡಿ, ಮಣಿಪುರದಲ್ಲಿ ನೂರಾರು ಜನ ಸಾವಿಗೀಡಾಗಿದ್ದಾರೆ. ಇಂಥ ಹಲವು ಘಟನೆಗಳು ಅಲ್ಲಿ ನಡೆದಿವೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಅಲ್ಲಿ ಎಷ್ಟೊಂದು ಅತ್ಯಾಚಾರಗಳು ನಡೆದಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಕೂಡಲೇ ಮಣಿಪುರ ಕುರಿತು ಸಮಗ್ರ ಹಾಗೂ ವಿಸ್ತೃತ ಚರ್ಚೆ ನಡೆಸಬೇಕು. ಸಂವಿಧಾನದ 75ನೇ ವಿಧಿಯ ಪ್ರಕಾರ ಪ್ರಧಾನಮಂತ್ರಿಗಳು ಸಂಸತ್‌ಗೆ ಉತ್ತರದಾಯಿತ್ವ ಹೊಂದಿದ್ದಾರೆ. ಅವರು ಸಂಸತ್‌ಗೆ ಬಂದು ಉಭಯ ಸದನಗಳಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ, ಪ್ರಧಾನಿ ಮೋದಿಯವರು ದೇಶದಲ್ಲೇ ಇದ್ದೂ, ಸಂಸತ್‌ಗೆ ಯಾಕೆ ಬರುತ್ತಿಲ್ಲ ಎಂದು ಕಾರಣ ಹೇಳಬಹುದೇ ಎಂದೂ ಪ್ರಶ್ನಿಸಿದ್ದಾರೆ.
Related Articles
“ಗಲಭೆ ಪೀಡಿತ ಮಣಿಪುರದ ಜನರ ನೋವು ಮತ್ತು ಸಂಕಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀರಾ ಅಸಡ್ಡೆ ಹೊಂದಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಪ್ರತಿಪಕ್ಷಗಳ ನಾಯಕರ ಮಣಿಪುರ ಭೇಟಿಯ ಬಳಿಕ ಸೋಮವಾರ ಟ್ವೀಟ್ ಮಾಡಿರುವ ಖರ್ಗೆ, “ಸಂಘರ್ಷ ಪೀಡಿತ ರಾಜ್ಯದ ಸ್ಥಿತಿಗತಿ ಅರಿಯಲೆಂದು ಭೇಟಿ ನೀಡಿದ್ದ ಪ್ರತಿಪಕ್ಷಗಳ ನಿಯೋಗಕ್ಕೆ ಅಲ್ಲಿನ ಜನರ ಹೃದಯಹಿಂಡುವ ಕಥೆಗಳನ್ನು ಆಲಿಸಿ ಬಹಳ ವೇದನೆಯಾಯಿತು. ಮಣಿಪುರವು ಹೊತ್ತಿ ಉರಿಯುತ್ತಿದ್ದರೂ, ಮೋದಿ ಸರ್ಕಾರ ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಅಲ್ಲಿ ಎರಡು ಸಮುದಾಯಗಳ ನಡುವೆ ದೊಡ್ಡಮಟ್ಟದ ಬಿರುಕು ಮೂಡಿರುವುದು ತೀವ್ರ ಕಳವಳಕಾರಿ’ ಎಂದು ಬರೆದುಕೊಂಡಿದ್ದಾರೆ.
Advertisement
ಕಲಾಪ ಮುಂದೂಡಿಕೆ:ಮಣಿಪುರದ ಕುರಿತು ಚರ್ಚೆಗೆ ಆಗ್ರಹಿಸಿ ಸೋಮವಾರವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದ ಕಾರಣ, ಎರಡೂ ಸದನಗಳ ಕಲಾಪಗಳು ದಿನದ ಮಟ್ಟಿಗೆ ಮುಂದೂಡಿಕೆಯಾದವು. ಗದ್ದಲದ ನಡುವೆಯೇ ಸಿನಿಮಾ ಪೈರಸಿಗೆ ಕಡಿವಾಣ ಹಾಕುವ ಸಿನಿಮಾಟೋಗ್ರಫಿ ತಿದ್ದುಪಡಿ ವಿಧೇಯಕ, 2023ಕ್ಕೆ ಅಂಗೀಕಾರ ಪಡೆಯಲಾಯಿತು. ಶೇ.44 ಕುಟುಂಬಗಳಿಗೆ ನೀರಿನ ಸಂಪರ್ಕವಿಲ್ಲ
ದೇಶದ ಗ್ರಾಮೀಣ ಭಾಗದ ಪರಿಶಿಷ್ಟ ಪಂಗಡಗಳಿರುವಂಥ ಪ್ರದೇಶಗಳಲ್ಲಿ ಶೇ.44ರಷ್ಟು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವೇ ಇಲ್ಲ. ಹೀಗೆಂದು ಜಲಶಕ್ತಿ ಖಾತೆ ಸಹಾಯಕ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 2.17 ಕೋಟಿ ಗ್ರಾಮೀಣ ಬುಡಕಟ್ಟು ಕುಟುಂಬಗಳ ಪೈಕಿ 1.2 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವಿದೆ. ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನೇ ನೀಡಲಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ. ದೆಹಲಿ ಸೇವೆಗಳ ವಿಧೇಯಕದಲ್ಲಿ ಬದಲಾವಣೆ
ಆಪ್ ಬೆಂಬಲಿಸಿ ವಿಪ್ ಜಾರಿ ಮಾಡಿದ ಬಿಆರ್‌ಎಸ್
ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಬದಲಿಗೆ ತರಲಾದ ದೆಹಲಿ ಆಡಳಿತಾತ್ಮಕ ಸೇವೆಗಳ ವಿಧೇಯಕವು ಸದ್ಯದಲ್ಲೇ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರವೇ ಈ ಮಸೂದೆ ಮಂಡಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ, ಕೊನೇ ಕ್ಷಣದಲ್ಲಿ ಮಂಡನೆಯಾಗಲಿಲ್ಲ. ಇದೇ ವೇಳೆ, ಈ ವಿಧೇಯಕಕ್ಕೆ ಕೆಲವೊಂದು ತಿದ್ದುಪಡಿಗಳನ್ನು ತಂದು ಮಂಡಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಪ್ರಕಾರ, “ರಾಜ್ಯ ನಾಗರಿಕ ಸೇವೆಗಳು ಮತ್ತು ರಾಜ್ಯ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದ ಯಾವುದೇ ಕಾನೂನನ್ನು ದೆಹಲಿ ಅಸೆಂಬ್ಲಿಯಲ್ಲಿ ಜಾರಿ ಮಾಡುವಂತಿರಲಿಲ್ಲ. ಆದರೆ, ಈಗ ಈ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ರಾಷ್ಟ್ರ ರಾಜಧಾನಿ ನಾಗರಿಕ ಸೇವೆಗಳ ಪ್ರಾಧಿಕಾರದ ವಾರ್ಷಿಕ ವರದಿಯನ್ನು ಸಂಸತ್ ಮತ್ತು ದೆಹಲಿ ಅಸೆಂಬ್ಲಿಯಲ್ಲಿ ಮಂಡಿಸುವುದು ಕಡ್ಡಾಯ ಎಂಬ ನಿಯಮವನ್ನೂ ಕೈಬಿಡಲಾಗಿದೆ. ಇದೇ ವೇಳೆ, ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಸೋಮವಾರ ರಾಜ್ಯಸಭೆಯ ತನ್ನ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಿ, ಸದನದಲ್ಲಿ ಉಪಸ್ಥಿತಿಯಿರುವಂತೆ ಮತ್ತು ದೆಹಲಿ ಸೇವೆಗಳಿಗೆ ಸಂಬಂಧಿಸಿದ ವಿಧೇಯಕದ ವಿರುದ್ಧ ಮತ ಚಲಾಯಿಸುವಂತೆ ಸೂಚಿಸಿತ್ತು. ಆದರೆ, ವಿಧೇಯಕ ಮಂಡನೆಯಾಗಿಲ್ಲ. ಖರ್ಗೆ ನೇತೃತ್ವದಲ್ಲಿ ರಾಷ್ಟ್ರಪತಿಗಳ ಭೇಟಿ
ಸಂಸತ್‌ನಲ್ಲಿ ಪ್ರಧಾನಿ ಹೇಳಿಕೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳು ಈಗ ಈ ವಿಚಾರದಲ್ಲಿ ರಾಷ್ಟ್ರಪತಿಯವರನ್ನೂ ಭೇಟಿಯಾಗಲು ನಿರ್ಧರಿಸಿವೆ. ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಪಕ್ಷಗಳ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಸಮಯ ಕೋರಿದ್ದಾರೆ. ಜತೆಗೆ, ತಮ್ಮ ಮುಂದಿನ ನಡೆ ಕುರಿತು ಕಾರ್ಯತಂತ್ರ ರೂಪಿಸಲು ಮಂಗಳವಾರ ಬೆಳಗ್ಗೆ 10 ಗಂಟೆಗೆ ಖರ್ಗೆ ಕಚೇರಿಯಲ್ಲಿ ಪ್ರತಿಪಕ್ಷಗಳ ನಾಯಕರು ಸಭೆ ನಡೆಸಲಿದ್ದಾರೆ. ಸಂಸತ್‌ನಲ್ಲಿ ಚರ್ಚೆಯಾಗಬಾರದು ಎಂಬ ಕಾರಣಕ್ಕೇ ಮಣಿಪುರ ವಿಚಾರದಲ್ಲಿ ಪ್ರತಿಪಕ್ಷಗಳು ತಮ್ಮ ಗುರಿಯನ್ನು ಬದಲಿಸುತ್ತಿವೆ. ಪ್ರತಿಪಕ್ಷ ನಾಯಕರು ಧರಿಸಿರುವ ಬಟ್ಟೆಗಳು ಎಷ್ಟು ಕಪ್ಪಗಿವೆಯೋ, ಅವರ ಮನಸ್ಥಿತಿಯೂ ಅಷ್ಟೇ ಕಪ್ಪಗಿದೆ.
– ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ