Advertisement

10 ಎಕರೆ ಪ್ರದೇಶದಲ್ಲಿ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣ

10:04 AM Nov 10, 2018 | Team Udayavani |

ಪಣಂಬೂರು: ಬಂದರು ನಗರಿ ಮಂಗಳೂರಿಗೆ ಅತ್ಯಗತ್ಯವಾಗಿದ್ದ ಟ್ರಕ್‌ ಟರ್ಮಿನಲ್‌ ಬದಲು ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕೆ ಕೊನೆಗೂ ಸರಕಾರ ಮನಸ್ಸು ಮಾಡಿದೆ. ಬಂದರು, ಕೈಗಾರಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಲಾರಿಗಳ ಓಡಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಇದು ರೈಲು, ಬಂದರು, ವಿಮಾನ ನಿಲ್ದಾಣ ಸಂಪರ್ಕ ಸೌಲಭ್ಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಇದರಿಂದ ಕೈಗಾರಿಕೆ ವಲಯದಲ್ಲಿ ಹೆಚ್ಚಿನ ಹೂಡಿಕೆ ಅವಕಾಶ ಲಭ್ಯವಾಗಲಿದೆ.

Advertisement

ದೇವರಾಜು ಅರಸು ಟ್ರಕ್‌ ಟರ್ಮಿನಲ್ಸ್‌ ನಿಗಮದಿಂದ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವ ಕುರಿತು ಪ್ರಯತ್ನ ಸಾಗಿತ್ತಾದರೂ ಇದು ಹಳೆಯ ವ್ಯವಸ್ಥೆಯಾಗಿರುವುದರಿಂದ ಅತ್ಯಾಧುನಿಕ ತಂತ್ರಜ್ಞಾನದ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣವೇ ಸೂಕ್ತ ಎಂದು ಸರಕಾರ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ನವಮಂಗಳೂರು ಬಂದರು ಮಂಡಳಿ 5 ಎಕರೆ  ಭೂಮಿ ನೀಡಿದ್ದರೂ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕಾಗಿ ಕನಿಷ್ಠ 10 ಎಕರೆ ಭೂಮಿಯ ಅಗತ್ಯವಿದ್ದು, ಪರ್ಯಾಯ ಭೂಮಿಯ ಹುಡುಕಾಟಕ್ಕೆ ತಯಾರಿ ನಡೆದಿದೆ. ನೂತನ  ಲಾಜಿಸ್ಟಿಕ್‌ ಪಾರ್ಕ್‌ನಲ್ಲಿ ಕನಿಷ್ಠ 400 ಲಾರಿಗಳ ನಿಲುಗಡೆ ಸಾಧ್ಯ. ಇದರಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ, ನೀರಿನ ಸೌಲಭ್ಯ, ಸಣ್ಣ ಪ್ರಮಾಣದ  ಕ್ಯಾಂಟೀನ್‌, ಸಣ್ಣ ಪ್ರಮಾಣದ ದುರಸ್ತಿ ಕೇಂದ್ರ, ತುರ್ತು ಸೇವೆ, ಬ್ಯಾಂಕಿಂಗ್‌, ಕಂಟೇನರ್‌ ಡಿಪೋಗಳು 
ಇರಲಿವೆ.

ಎಪಿಎಂಸಿ ಯಾರ್ಡ್‌ನಲ್ಲಿ ಎಕರೆಗಟ್ಟಲೆ ಜಾಗವಿದ್ದರೂ ಎಪಿಎಂಸಿ ಈ ಭಾಗದಲ್ಲಿ ನಿರ್ಮಾಣಕ್ಕೆ ಆಕ್ಷೇಪ ಎತ್ತಿದೆ. ಖಾಸಗಿ ಸಹಭಾಗಿತ್ವದ ಬದಲು ಎನ್‌ಎಂಪಿಟಿಯ ಸ್ಥಳದಲ್ಲಿ ನಿರ್ಮಿಸಲು ಕನಿಷ್ಠ 10 ಎಕರೆ ಭೂಮಿ ನೀಡುವಂತೆ ಸರಕಾರ ಬಂದರು ಮಂಡಳಿಯೊಂದಿಗೆ ಮಾತುಕತೆ ನಡೆಸಲಿದೆ.

ಈಗಾಗಲೇ ಸರಾಸರಿ ಐದು ಸಾವಿರಕ್ಕೂ ಹೆಚ್ಚು ಟ್ರಕ್‌ಗಳು ಮಂಗಳೂರು ಬಂದರಿನಲ್ಲಿ ವಿವಿಧ ಸರಕುಗಳ ನಿರ್ವಹಣೆಯಲ್ಲಿ ನಿರತವಾಗಿವೆ. ಜತೆಗೆ ಕೈಗಾರಿಕೆ ಪ್ರದೇಶಕ್ಕೆ ಸರಕು ಹೇರಿಕೊಂಡು ನೂರಾರು ಘನ ಲಾರಿಗಳು ಓಡಾಟ ನಡೆಸುತ್ತವೆ. ನಿಲುಗಡೆ, ವಿಶ್ರಾಂತಿಗೆ ಸೂಕ್ತ ಜಾಗವಿಲ್ಲದ ಕಾರಣ ಬೈಕಂಪಾಡಿ, ಕುಳಾç, ಪಣಂಬೂರು ಮತ್ತಿತರ ಕಡೆ ಲಾರಿಗಳು ರಸ್ತೆ ಬದಿ ಆಶ್ರಯ ಪಡೆಯುವಂತಾಗಿದೆ. 

ಇದು ವಿವಿಧ ಬಗೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಈಗ ವಿಶೇಷ ಆರ್ಥಿಕ ವಲಯದ ಬೇಡಿಕೆಯನ್ನು  ಪರಿಗಣಿಸಿ ಸರಕಾರ ದೊಡ್ಡ ಪ್ರಮಾಣದ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ ಹೆದ್ದಾರಿ 66ರ ಉದ್ದಕ್ಕೂ ಲಾರಿಗಳ ನಿಲುಗಡೆ ಸಮಸ್ಯೆ ತಪ್ಪಲಿದೆ.  

Advertisement

ಮಂಗಳೂರು ಬಂದರು, ರೈಲ್ವೇ ಹಾಗೂ ಕೈಗಾರಿಕೆ ಪ್ರದೇಶದ ಕೊಂಡಿಯಾಗಿರುವ ಈ ಭಾಗದಲ್ಲಿ ಅತ್ಯಾಧುನಿಕ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣ ಸೂಕ್ತ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಬದಲು 10 ಎಕರೆ ಪ್ರದೇಶದಲ್ಲಿ ಸರ್ವ ಸೌಲಭ್ಯವುಳ್ಳ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕೆ ಸರಕಾರ ಸಿದ್ಧವಿದೆ. ಭೂಮಿ ಒದಗಿಸುವ ಕುರಿತು ಎನ್‌ಎಂಪಿಟಿ ಜತೆ ಮಾತು ಕತೆ ನಡೆಸಲಾಗುವುದು. ವಿಶೇಷ ಆರ್ಥಿಕ ವಲಯದಲ್ಲೂ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣದ ಪ್ರಸ್ತಾವವಿದೆ.
ಕೆ.ಜೆ. ಜಾರ್ಜ್‌ ಸಚಿವರು, ಬೃಹತ್‌ ಕೈಗಾರಿಕೆ, ಐಟಿಬಿಟಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next