Advertisement

“ಜಾತಿ ಗಣತಿ”ವರದಿಗೆ ತಾರ್ಕಿಕ ಅಂತ್ಯ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ

07:19 PM Nov 26, 2020 | mahesh |

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಗೆ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೂತನ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

Advertisement

ಆಯೋಗದ ಕಚೇರಿಯಲ್ಲಿ ಗುರುವಾರ ಅಧಿಕಾರವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ 160 ಕೋಟಿ ರೂ. ಹಣ ವೆಚ್ಚ ಮಾಡಿ ಸಿದ್ದಪಡಿಸಿರುವ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಅದಕ್ಕಾಗಿ ನಾನು ಪ್ರಮಾಣಿಕ ಪ್ರಯತ್ನಪಡುತ್ತೇನೆ ಎಂದರು.

ಈಗಷ್ಟೇ ಅಧಿಕಾರವಹಿಸಿಕೊಂಡಿದ್ದೇನೆ. ವರದಿ ಕುರಿತು ಆಯೋಗದಲ್ಲಿ ಚರ್ಚಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ವರದಿಯನ್ನು ಒಪ್ಪಿಸುವುದಷ್ಟೇ ಆಯೋಗದ ಕೆಲಸ. ಮುಂದಿನ ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು. ವರದಿ ಒಪ್ಪಿ ಜಾರಿ ಮಾಡುವುದು ಅಥವಾ ತಿರಸ್ಕರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೆಗ್ಡೆ ಹೇಳಿದರು.

ಹಿಂದುಳಿದ ವರ್ಗಗಳ ಪಟ್ಟಿ ಸೇರಿಸಬೇಕು ಎಂದು ಹಲವು ಮನವಿಗಳು ಬಂದಿವೆ. ಕೆಲ ಬಲಿಷ್ಠ ಸಮುದಾಯಗಳಿಂದಲೂ ಬೇಡಿಕೆ ಇದೆ. ಕಾನೂನು ವ್ಯಾಪ್ತಿಯಲ್ಲಿ ಅದನ್ನು ಪರಿಶೀಲಿಸಲಾಗುವುದು. ಮುಖ್ಯವಾಗಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಬೇಕಾದ ಸಣ್ಣ ಮತ್ತು ಧ್ವನಿ ಇಲ್ಲದ ಅನೇಕ ಸಮುದಾಯಗಳು ಇರಬಹುದು. ಅದರಲ್ಲಿ ತಮ್ಮ ಬೇಡಿಕೆ ಬಗ್ಗೆ ಮನವಿ ಸಲ್ಲಿಸುವ ಶಕ್ತಿ ಅಥವಾ ಪ್ರಭಾವ ಹೊಂದಿರದ ಸಮುದಾಯಗಳೂ ಸಹ ಇರಬಹುದು. ಅಂತಹವನ್ನು ಗುರುತಿಸಿ ಕ್ಷೇತ್ರ ಅಧ್ಯಯನ ನಡೆಸಿ ಅಂತಹವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಆಯೋಗ ಮಾಡಲಿದೆ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಆಧರಿಸಿ ಕೆಲ ಮಾಹಿತಿಯನ್ನು ಕೋರಿದ್ದು, ಅದನ್ನು ಒದಗಿಸಲಾಗುವುದು.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ನನಗೆ ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಸಮಾಜಕ್ಕೆ ರಾಜಕೀಯೇತರವಾಗಿ ಕೆಲಸ ಮಾಡಲು ಅವಕಾಶವನ್ನು ಕಲ್ಪಿಸಿದ್ದಾರೆ. ಈ ಹಿಂದೆ ಮೀನುಗಾರಿಕೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದಂತೆ ಎಲ್ಲರೂ ಗುರುತಿಸುವಂತಹ ರೀತಿಯಲ್ಲಿ ಶ್ರಮಿಸುತ್ತೇನೆ ಎಂದು ಜಯಪ್ರಕಾಶ್‌ ಹೆಗ್ಡೆ ತಿಳಿಸಿದರು.

ಗೊಂದಲ ನಿವಾರಣೆ: ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೆಲ ಸಮುದಾಯಗಳ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಹೀಗಾಗಿ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ನೀಟ್‌ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಗೊಂದಲಗಳಿವೆ. ಅವುಗಳನ್ನು ಶೀಘ್ರದಲ್ಲೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಪಿ. ವಸಂತಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next