ಮನೋರಂಜನಾ ಸಾಧನವೂ, ಆಧುನಿಕ ಅನುಕೂಲಗಳೂ ಇಲ್ಲದೆ, ಅಜ್ಜಿ- ಮುತ್ತಜ್ಜಿಯರು ಮನೆಯೊಳಗೆ ಹೇಗೆ ಇರುತ್ತಿದ್ದರು ಎಂಬ ಪ್ರಶ್ನೆ ಕಾಡಿತು. ಆದರೆ, ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದ ಅವರಿಗೆ, ಬೇಸರವೇ ಆಗುತ್ತಿರಲಿಲ್ಲವೇನೋ. ಹಾಗಾಗಿ, ನಾನೂ ಅವರಂತೆ ಕೆಲಸ, ಹವ್ಯಾಸಗಳಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದೆ. ಮೊದಲಿಗೆ, ಅದು ಕಲಿಯಬೇಕು, ಇದು ಕಲಿಯಬೇಕು ಅಂದುಕೊಂಡು, ಸಮಯದ ಅಭಾವದಿಂದ ಮುಂದೂಡಿದ್ದ ಕೆಲಸಗಳ ಪಟ್ಟಿ ಮಾಡಿಕೊಂಡೆ. ಆ ಪ್ರಕಾರ, ಹೊಸ ಹೊಸ ಅಡುಗೆಗಳನ್ನು ಕಲಿತು, ಎಲ್ಲರ ಶಹಭಾಷ್‌ಗಿರಿ ಪಡೆದೆ. ಎಂಬ್ರಾಯ್ಡ್ ರಿಯ ಹೊಸ ವಿನ್ಯಾಸಗಳನ್ನು ಹಾಕಿದೆ. ಹಳೆಯ ಸ್ನೇಹಿತೆಯರ ದೂರವಾಣಿಯ ಸಂಖ್ಯೆಗಳನ್ನು ಹುಡುಕಿ, ಎಲ್ಲರಿಗೂ ಫೋನಾಯಿಸಿದೆ. ಅವರ ಜೊತೆ
ಹಳೆಯ ವಿಷಯಗಳನ್ನು ಹಂಚಿಕೊಂಡು, ಶಾಲಾ ದಿನಗಳನ್ನು ಮೆಲುಕು ಹಾಕಿದೆ. ಹಳೆ ಗೆಳೆಯರ ಬಳಿ ಇದ್ದ ಶಾಲೆ, ಕಾಲೇಜಿನ ಫೋಟೋಗಳನ್ನು ಕಲೆ ಹಾಕಿಕೊಂಡೆ. ನನ್ನ ಬಳಿ ಇದ್ದ ಫೋಟೋಗಳನ್ನು ಅವರಿಗೂ ಕಳಿಸಿದೆ. ಎಷ್ಟು ಖುಷಿ ಸಿಕ್ಕಿತೆಂದರೆ, ಛೇ, ಇಷ್ಟು ದಿನ ಇದಕ್ಕೆಲ್ಲ ಸಮಯ ಹೊಂದಿಸಲೇ ಇರಲಿಲ್ಲವಲ್ಲ ಅಂತ ಬೇಸರವಾಯ್ತು. ಲಾಕ್‌ಡೌನ್ ಇಲ್ಲದಿದ್ದರೆ, ಮರೆತು ಹೋಗಿದ್ದ ಬಾಲ್ಯದ ನೆನಪುಗಳು ದಕ್ಕುತ್ತಲೇ ಇರಲಿಲ್ಲ. ಹಾಂ, ಇಲ್ಲಿರುವ ಚಿತ್ರ ಇದೆಯಲ್ಲ, ಇದು ನಾನು ಮಾಡಿದ ಎಂಬ್ರಾಯ್ಡ್ ರಿ. ಹೇಗಿದೆ ಹೇಳಿ?
Advertisement
ಆಶಾ ನಾಯಕ್