ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಜೂನ್ 30ರ ನಂತರವೂ ರಾಜ್ಯದಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇಂದು ಈ ಬಗ್ಗೆ ಸ್ಪಷ್ಟಪಡಿಸಿದ ಅವರು, ಜೂನ್ 30ರ ನಂತರವೂ ಲಾಕ್ ಡೌನ್ ತೆರವು ಮಾಡಲಾಗುವುದಿಲ್ಲ. ಆದರೆ ಕೆಲವು ನಿಬಂಧನೆಗಳನ್ನು ಸಡಿಲಿಸಲಾಗುವುದು ಎಂದಿದ್ದಾರೆ.
ಕೋವಿಡ್-19 ಸೋಂಕಿನ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ನಾವೀಗ ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ನಡೆಸಲು ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ಲಾಸ್ಮಾ ಚಿಕಿತ್ಸೆ ನೀಡಲಿದ್ದೇವೆ. ಹೀಗಾಗಿ ಗುಣಮುಖರಾದ ಸೋಂಕಿತರಲ್ಲಿ ಪ್ಲಾಸ್ಮಾ ದಾನ ಮಾಡುವಂತೆ ವಿನಂತಿಸುತ್ತೇನೆ ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದರು.
ಮುಂಗಾರು ರಾಜ್ಯಕ್ಕೆ ಕಾಲಿಡುತ್ತಿರುವ ಕಾರಣ ನಗರದಲ್ಲಿ ವಾಸಿಸುವ ಜನರು ತಮ್ಮ ಪರಿಸರವನ್ನು ಸ್ವಚ್ಛವಾಗಿಡಬೇಕು. ಇದಿರಂದ ಅನಾರೋಗ್ಯವನ್ನು ದೂರವಿಡಬಹುದು ಎಂದರು.
ಮಹಾರಾಷ್ಟ್ರದಲ್ಲಿ ಇದುವರೆಗೆ ಒಂದು ಲಕ್ಷ 53 ಸಾವಿರ ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಲ್ಲಿ 7,106 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 79,815 ಮಂದಿ ಸೋಂಕಿತರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.