Advertisement

ಲಾಕ್‌ಡೌನ್‌: ಸುಪ್ತ ಪ್ರತಿಭೆಗಳ ಅನಾವರಣ

09:51 PM May 15, 2020 | Sriram |

ಮಣಿಪಾಲ: ಸೂಪರ್‌ ಆಗಿದೆ ಆರ್ಟ್‌. ಯಾರು ಮಾಡಿದ್ದು ಮಾರ್ರೆ? ನೀನೇನಾ?. ನಂಗ್ಯಾಕೋ ಡೌಟ್‌ ಆಗ್ತಾ ಇದೆ ಅಂದಾಗ ನವೀನ ನಾನೇ ಮಾಡಿದ್ದು ಕಣೋ ಎಂದು ಮುಖವರಳಿಸಿ ನಕ್ಕ. ಸೂಪರ್‌ ಆಗಿದೆ ಅಂದದ್ದಕ್ಕೆ ಆತನಲ್ಲೂ ಹೆಮ್ಮೆ ಇತ್ತು.

Advertisement

ಹೌದು, ಅವನಲ್ಲಿ ಅಂತಹ ಕಲೆಯೊಂದು ಇತ್ತು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಕಚೇರಿ ವೇಳೆಯಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ. ಮನೆಯಿಂದ ಹೊರಟರೆ ಆಫೀಸ್‌-ಆಫೀಸ್‌ನಿಂದ ಮನೆ ಇಷ್ಟೇ. ಅದರ ನಡುವಿನ ವೇಳೆಯಲ್ಲಿ ಕೆಲಸ ಕೆಲಸ ಕೆಲಸ… ಕೆಲಸ ಬಿಟ್ಟರೆ ನಿನಗೇನೂ ಗೊತ್ತಿಲ್ವೇನೋ ಎಂಬ ಭಾವ ಅವರನ್ನು ನೋಡಿದಾಗ ನಮ್ಮಲ್ಲಿ ಮೂಡುವುದು ಸಹಜ. ಆ ರೀತಿಯಲ್ಲಿರುತ್ತಿದ್ದ. ಈಗ ನೋಡಿದರೆ ಎಫ್ ಬಿ ಪೇಜ್‌ ತುಂಬ ತರಹೇವಾರಿ ಪೆನ್ಸಿಲ್‌ ಶೇಡ್‌ ಚಿತ್ರಗಳು. ಸುಂದರವಾಗಿತ್ತು. ಇವನು ಯಾವಾಗಪ್ಪ ಇಷ್ಟೆಲ್ಲ ಕಲಿತ ಅನ್ನೋ ಆಶ್ಚರ್ಯವೂ ಮನೆ ಮಾಡಿತ್ತು.

ಸುಪ್ತ ಪ್ರತಿಭೆ
ನಿಜವಾಗಿಯೂ ಇವನಲ್ಲಿ ಟ್ಯಾಲೆಂಟ್‌ ಇತ್ತಾ? ಕೇಳಿದರೆ ಇತ್ತು. ಆದರೆ ಅದಕ್ಕೆ ನೀರೆರೆಯುವ ಕಾಯಕವನ್ನು ಈತ ಮಾಡುತ್ತಿರಲಿಲ್ಲ. ಅದಕ್ಕೊಂದು ಚೂರು ಸಮಯವನ್ನೂ ಮೀಸಲಿಡುತ್ತಿರಲಿಲ್ಲ. ಅಂಥವನು ಲಾಕ್‌ಡೌನ್‌ ನಿರ್ಬಂಧದಿಂದಾಗಿ ಮನೆಯಲ್ಲಿರಬೇಕಾದ ಅನಿವಾರ್ಯದಿಂದಲೋ ಏನೋ ತನ್ನ ಪ್ರತಿಭಾ ಪ್ರದರ್ಶನಕ್ಕೆ ಮೀಸಲಿಟ್ಟ. ಮೊದಲ ಚಿತ್ರ ಹಾಕುವಾಗ ಅಳುಕಿತ್ತು. ಯಾರು ಏನು ಹೇಳುತ್ತಾರೋ ಏನೋ ಎನ್ನುವ ಅಂಜಿಕೆ ಇತ್ತು. ಆದರೆ ಪೇಜ್‌ ತುಂಬಾ ಲೈಕ್ಸ್‌ ಸಿಕ್ಕಿದ್ದರಿಂದ ಈತನಲ್ಲೂ ಇನ್ನಷ್ಟು ಚಿತ್ರ ಬಿಡಿಸುವ ಹುರುಪು ಮೂಡಿತ್ತು. ಇದು ಒಬ್ಬನ ಕತೆ ಮಾತ್ರ. ಇಂತಹ ಹಲವು ಸಾಧಕರು ನಮ್ಮ ಸುತ್ತ ಇದ್ದಾರೆ. ಅವರಿಗೆ ಯಾರೇನು ಅಂದುಕೊಳ್ಳುತ್ತಾರೋ ಅನ್ನುವ ಭಯ ಒಂದೆಡೆಯಾದರೆ ಇಲ್ಲಿಯ ವರೆಗೆ ಪುರುಸೊತ್ತು ಇರಲಿಲ್ಲ ಎಂಬ ಒಂದು ನೆಪವೂ ಇತ್ತು.

ಪ್ರತಿಭಾ ಪ್ರದರ್ಶನ
ಲಾಕ್‌ಡೌನ್‌ ಮನೆಯಲ್ಲಿ ಕುಳಿತವರು ಸುಮ್ಮನೆ ಇರದೆ ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತಾ ತಮ್ಮ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಾ ಬರುತ್ತಿದ್ದಾರೆ. ಪಮ್ಮಿ ತನ್ನ ಅಡುಗೆ ಕಲೆಯನ್ನು ಸಾದರಪಡಿಸಿದರೆ, ದೀಪು, ಭರತ ಸೊಗಸಾಗಿ ಹಾಡುವುದನ್ನು ನೋಡಿದೆ. ವಿನ್ನುವಿನ ಮೆಹಂದಿ ಕಲೆ ಇಷ್ಟವಾಯಿತು. ಹೇಮಣ್ಣ ಮಾತಿನಲ್ಲೇ ಮುದನೀಡಿದರೆ, ಗಾಯಕ್ಕನ ಕವನದಲ್ಲಿನ ಸಾಹಿತ್ಯ ಮನ ಸೆಳೆಯಿತು. ರಾಕಿಯ ಫೊಟೋಗಳು ಕಣ್ಣರಳಿಸಿದರೆ, ನಮ್ಮೂರ ಯುವಕರ ತಮಾಷೆಯ ವೀಡಿಯೋಗಳು ಮನಸ್ಸಿಗೆ ಮುದ ನೀಡಿತು. ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಇಷ್ಟು ಫ್ರೀಯಾಗಿ ಯಾವತ್ತೂ ಇರಲಿಲ್ಲವೇ?. ಸಮಯ ಆಗಲೂ ಇತ್ತು, ಕೆಲಸದ ಒತ್ತಡದಲ್ಲಿ ಯಾಕೋ ಇದೆಲ್ಲ ಅಂತ ಅನ್ನಿಸಿಬಿಡುತ್ತಿತ್ತು. ಈಗ ಯಾವ ರಗಾಳೆಯೂ ಇಲ್ಲ. ಕಲೆಯು ಬೆಳಕಿಗೆ ಬರುವಲ್ಲಿ ಲಾಕ್‌ಡೌನ್‌ ನೆರವಾಗಿದೆ ಅಂದರೆ ಸುಳ್ಳಲ್ಲ. ಎಲ್ಲೋ ಕೂತು ಇವುಗಳನ್ನೆಲ್ಲ ನೋಡಿದಾಗ ಮನಸ್ಸಿಗಾಗುವ ಆನಂದವೂ ಅಷ್ಟಿಷ್ಟಲ್ಲ. ಹಾಗೆಯೇ ಕಲೆಗಳನ್ನು ಪ್ರದರ್ಶಿಸುವವರಿಗೆ ನಿಮ್ಮ ಮೆಚ್ಚುಗೆಯೂ ಇರಲಿ.

Advertisement

Udayavani is now on Telegram. Click here to join our channel and stay updated with the latest news.

Next