Advertisement

ಜಿಲ್ಲೆಯ 33 ಗ್ರಾಮಗಳು ಸ್ತಬ್ಧ: ಮೊದಲ ದಿನದ ಸಂಪೂರ್ಣ ಲಾಕ್‌ಡೌನ್‌ ಯಶಸ್ವಿ

07:16 PM Jun 02, 2021 | Team Udayavani |

ಉಡುಪಿ : ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 50+ ಪ್ರಕರಣಗಳಿರುವ 33 ಗ್ರಾಮಗಳನ್ನುಜಿಲ್ಲಾಡಳಿತ ಬುಧವಾರ ಸಂಪೂರ್ಣ ಲಾಕ್‌ಡೌನ್‌ ಮಾಡಿದ್ದು, ಮೊದಲ ದಿನ ಬಂದ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಎಲ್ಲ ಗ್ರಾಮಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು.

Advertisement

ಸಂಪೂರ್ಣ ಲಾಕ್‌ಡೌನ್‌ ಹಿನ್ನಲೆಯಲ್ಲಿ ಉಡುಪಿ ತಾಲೂಕಿನ 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು ಗ್ರಾಮಗಳ ಗಡಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿತ್ತು. ಸೀಲ್‌ಡೌನ್‌ ಆದ ಗ್ರಾಮದಿಂದ ಇನ್ನೊಂದು ಗ್ರಾಮ ಸಂಪರ್ಕಿಸುವ ರಸ್ತೆಗೆ ಬ್ಯಾರಿಕೇಡ್‌ ಹಾಗೂ ಟೇಪುಗಳನ್ನು ಹಾಕಿ ಬಂದ್‌ ಮಾಡಲಾಗಿತ್ತು.

ತುರ್ತು ಸೇವೆಗೆ ಅವಕಾಶ
ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್‌, ಲ್ಯಾಬ್‌ನಲ್ಲಿ ರಕ್ತ ಪರೀಕ್ಷೆ , ಇತರೆ ವೈದ್ಯಕೀಯ ಸೇವೆ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸೀಮಿತ ಅವಧಿಗೆ ಹಾಲಿನ ಸಂಗ್ರಹ, ರಾಜ್ಯ ಮತ್ತು ರಾ.ಹೆ.ಗೆ ಹೊಂದಿಕೊಂಡಿರುವ ಪೆಟ್ರೋಲ್‌ ಪಂಪ್‌, ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು. ಅಗತ್ಯ ತುರ್ತು ವೈದ್ಯಕೀಯ ಸೇವೆಯ ವಾಹನಗಳು ಹೊರತು ಪಡಿಸಿ, ಉಳಿದೆಲ್ಲ ಸೇವೆಗಳನ್ನು 33 ಗ್ರಾಮಗಳಲ್ಲಿ ನಿರ್ಬಂಧಿಸಲಾಗಿದೆ.

ಹಾಲಿಗಾಗಿ ಪರದಾಟ
ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ನಿತ್ಯ ಅಗತ್ಯ ವಸ್ತುವಾದ ಹಾಲು ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ. ಗ್ರಾಮದ ಹಾಲು ಬೂತ್‌ಗಳಿಗೆ ತೆರೆಯಲು ಅವಕಾಶ ನೀಡಿದರೂ, ಸಾರ್ವಜನಿಕರಿಗೆ ಖರೀದಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹಾಲಿಗಾಗಿ ಪರದಾಡಬೇಕಾಯಿತು. ಹಾಲು ಹೆಚ್ಚು ದಿನಗಳ ಕಾಲ ಶೇಖರಣೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೊನೆಯ ಪಕ್ಷ ಸಾರ್ವಜನಿಕರಿಗೆ ಹಾಲು ಖರೀದಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಸ್ಥಳೀಯರು ಮನವಿ ಮಾಡಿದರು.

Advertisement

ಬಿಗು ಬಂದೋಬಸ್ತ್
ಸಂಪೂರ್ಣ ಲಾಕ್‌ಡೌನ್‌ ಘೋಷಿಸಿರುವ ಗ್ರಾಪಂಗಳಲ್ಲಿ ಆಯಾ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಓಡಾಟ ನಡೆಸುತ್ತಿದ್ದ ವಾಹನಗಳ ತಪಾಸಣೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ವಿನಾಕಾರಣ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ಸಂಪೂರ್ಣ ಬಂದ್‌ ಗ್ರಾಮಗಳು
ಬೆಂದೂರು ತಾಲೂಕಿನ ಶಿರೂರು, ಜಡ್ಕಲ್‌, ಕಂಬದಕೋಣೆ, ನಾಡ. ಕುಂದಾಪುರ ತಾಲೂಕಿನ ಕಾವ್ರಾಡಿ, ಹೊಂಬಾಡಿ ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು ಕುಂಜ್ಞಾಡಿ, ಆಲೂರು, ಆಜ್ರಿ. ಬ್ರಹ್ಮಾವರ ತಾಲೂಕಿನ 38ನೇ ಕಳತ್ತೂರು. ಉಡುಪಿ ತಾಲೂಕಿನ 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು. ಕಾಪು ತಾಲೂಕಿನ ಬೆಳಪು, ಬೆಳ್ವೆ, ಪಡುಬಿದ್ರಿ, ಶಿರ್ವ. ಕಾರ್ಕಳ ತಾಲೂಕಿನ ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್‌, ಹೆಬ್ರಿ ತಾಲೂಕಿನ ಬೆಳ್ವೆ, ಮುದ್ರಾಡಿ, ವರಂಗ ಗ್ರಾಮಗಳ ಗಡಿಯನ್ನು ಸಂಪೂರ್ಣವಾಗಿ ಬಂದ್‌ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ನೀಡಿಲ್ಲ.

ಆಯಾ ಗ್ರಾ.ಪಂ. ಟಾಸ್ಕ್ ಫೋರ್ಸ್‌ ತಂಡಗಳು ಅಗತ್ಯವಿರುವವರಿಗೆ ಹಾಲು ಪೂರೈಕೆ ಮಾಡುವುದಾಗಿ ಹೇಳಿದ್ದಾರೆ. ಜತೆಗೆ ಹಾಲಿನ ಬೂತ್‌ಗೆ ಮೂರು ನಾಲ್ಕು ಮನೆಗೆ ಬೇಕಾಗಿರುವ ಹಾಲು ಒಬ್ಬರೇ ಹೋಗಿ ತೆಗೆದುಕೊಂಡು ಬರಲು ಅವಕಾಶ ನೀಡಲಾಗಿದೆ. ಜತೆಗೆ ಹಾಲು ಒಕ್ಕೂಟಗಳಿಗೆ ನೀಡುವ ಹಾಲುಗಳನ್ನು ಮನೆ ಸಮೀಪದವರಿಗೆ ಮಾರಾಟ ಮಾಡುವಂತೆ ಗ್ರಾ.ಪಂ.ಗಳ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಮುಂದಿನ ದಿನದಲ್ಲಿ ಹಾಲಿನ ಸಮಸ್ಯೆ ಎದುರಾಗದು.
– ಪ್ರದೀಪ್‌ ಕುರ್ಡೇಕರ್, ತಹಶೀಲ್ದಾರ್‌, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next