ಹರಿಹರ: ಲಾಕ್‌ಡೌನ್‌ನಿಂದ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಲಾಕ್‌ಡೌನ್ ಮೇ 3ರ ನಂತರವೂ ಮುಂದುವರೆಸುವ ಸಾಧ್ಯತೆ ಇದ್ದು, ರೈತರ ಉತ್ಪನ್ನಗಳ ಸಾಗಣೆ, ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಬಿತ್ತನೆಗೆ ಬೀಜ, ಗೊಬ್ಬರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯ ಲಾಕ್‌ಡೌನ್ ನಿರ್ವಹಣೆಯಲ್ಲಿ ಪೊಲೀಸರ ನಿರ್ಲಕ್ಷ್ಯತನ ಕಾಣುತ್ತಿದೆ. ರಸ್ತೆಗಳಲ್ಲಿ ವಾಹನ, ಜನ ಸಂಚಾರ ಹೆಚ್ಚಾಗಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿದ್ದ ಎಸ್ಪಿಗೆ ತಾಕೀತು ಮಾಡಿದರು. ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ತಬ್ಲಿಘೀ ಸಮಾವೇಶ ಹಾಗೂ ಬಿಹಾರದ ಕೂಲಿ ಕಾರ್ಮಿಕರಿಂದ ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗಿವೆ. ಜಿಲ್ಲೆಯಲ್ಲಿ ತಬ್ಲಿಘೀ ಸಮಾವೇಶಕ್ಕೆ ಹೋಗಿ ಬಂದವರಿದ್ದರೆ ಸ್ವಯಂ ಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ತಾಲೂಕಿನ ಭತ್ತದ ಬೆಳೆಗೆ ಇನ್ನೂ ನೀರು ಬೇಕಾಗಿದ್ದು, ಭದ್ರಾ ಕಾಲುವೆಗಳಲ್ಲಿ ಮೇ 25ರವರೆಗೆ ನೀರು ಹರಿಸಬೇಕೆಂದು ಸಚಿವರಿಗೆ ಕೋರಿದ ಶಾಸಕ ಎಸ್. ರಾಮಪ್ಪ, ಕೋವಿಡ್ ನಿಮಿತ್ತ ತಾವು 10 ಸಾವಿರ ಮಾಸ್ಕ್, 10 ಸಾವಿರ ಆಹಾರ ಕಿಟ್ ವಿತರಿಸುತ್ತಿದ್ದು, ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲೂ 10-15 ಲಕ್ಷ ನೀಡುತ್ತಿರುವುದಾಗಿ ತಿಳಿಸಿದರು.
ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತೆಎಸ್.ಲಕ್ಷ್ಮಿ, ತಾಪಂ ಇಒ ಲಕ್ಷ್ಮಿಪತಿ, ಎಪಿಎಂಸಿ ಕಾರ್ಯದರ್ಶಿ, ಕೃಷಿ ಎಡಿ ವಿ.ಪಿ.ಗೋವರ್ಧನ್, ತೋಟಗಾರಿಕೆಎಡಿ ಜಿ.ಪಿ.ರೇಖಾ ಇಲಾಖಾವಾರು ವರದಿ ಮಂಡಿಸಿದರು. ಜಿಪಂ ಅಧ್ಯಕ್ಷ ಯಶೋದಮ್ಮ, ಧೂಡಾಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶಾಸಕರಾದಎಸ್ .ವಿ.ರಾಮಚಂದ್ರಪ್ಪ, ಪ್ರೂ.ಲಿಂಗಣ್ಣ, ಮಾಜಿ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್, ಜಿಪಂ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್, ಡಿಸಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಇತರರಿದ್ದರು.