Advertisement
ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದರಿಂದ ರೈತರು ಭೂಮಿ ಹದಗೊಳಿಸಲು ಸಜ್ಜಾಗಿದ್ದಾರೆ. ಈ ವರ್ಷವಾದರೂ ಉತ್ತಮ ಮಳೆ-ಬೆಳೆ ಬಂದು ರೈತರ ಬದುಕು ಹಸನಾಗಬಹುದೆಂಬ ಆಸೆ ರೈತರ ಮನದಲ್ಲಿ ಚಿಗುರೊಡೆದಿದೆ. ಲಾಕ್‌ಡೌನ್‌ನಿಂದ ಕೃಷಿ ಸಲಕರಣೆಗಳನ್ನು ಸಜ್ಜುಗೊಳಿಸಿಕೊಳ್ಳಲು ಸಾಧ್ಯವಾಗದ ರೈತರೀಗ ಕೃಷಿ ಕಾರ್ಯಗಳಿಗೆ ಅವಶ್ಯವಿರುವ ಸಾಮಗ್ರಿಗಳ ಸಂಗ್ರಹಣೆ, ಸಿದ್ಧತೆ ನಡೆಸಿದ್ದಾರೆ. ಕೃಷಿಗೆ ಬೇಕಾಗುವ ಪ್ರಮುಖ ಸಲಕರಣೆಗಳಾದ ರಂಟಿ, ಕುಂಟಿ, ಕೊರಡು, ಬುಡಗುಂಟಿ, ನೊಗ, ಕಾಯಿಕೊಲು ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಕಮ್ಮಾರನ ಕುಲುಮೆಗೆ ಒಯ್ದು ಸರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡುವವರು ಯಂತ್ರದ ನೇಗಿಲು, ರಂಟಿ ತಯಾರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗೆ ಪೂರಕ ಸೇವೆ ನೀಡುವ ಅಂಗಡಿಗಳಲ್ಲಿ ವ್ಯವಹಾರ ಜೋರಾಗಿದೆ.
Related Articles
Advertisement
ದರ ಹೆಚ್ಚಿಸಿದರೆ ದೂರು ನೀಡಿ: ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟಗಾರರು ನಿಗದಿ ಪಡಿಸಿದ ದರದಲ್ಲಿ ಮಾರಲು ಜಿಲ್ಲಾಡಳಿತ . ಸೂಚನೆ ನೀಡಿದೆ. ಮಾರಾಟ ಮಾಡಿದ ಪರಿಕರಗಳಿಗೆ ಕಡ್ಡಾ ಯವಾಗಿ ರಸೀದಿ ಯಲ್ಲಿ ಲಾಟ್ ಇಲ್ಲವೇ ಬ್ಯಾಚ್ ಸಂಖ್ಯೆ ಹಾಗೂ ನಿಗದಿಪಡಿಸಿದ ದರ ನಮೂದಿಸಲು ಸೂಚಿಸಿದೆ. ಯಾವುದೇ ಮಾರಾಟಗಾರರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಿದರೆ, ಅವಧಿ ಮೀರಿರುವ ಪರಿಕರ ಮಾರಿದರೆ ಯಾವುದೇ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿದರೆ ರೈತರು ಕೂಡಲೇ ಸಮೀಪದ ಕೃಷಿ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಬೇಕೆಂದು ಜಿಲ್ಲಾಡಳಿತ ರೈತರಿಗೆ ತಿಳಿಸಿದೆ.
ಅಧಿಕೃತ ಪರವಾನಗಿ ಹೊಂದಿದ ಪರಿಕರ ಮಾರಾಟಗಾರರಿಂದ ಮಾತ್ರ ರೈತರು ಬೀಜ, ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷಧಿ ಖರೀದಿಸಬೇಕು. ಖರೀದಿಸಿದ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಯಾವುದೇ ಕಾರಣಕ್ಕೂ ರೈತರು ಯಾವುದೇ ಉಚಿತ-ಉಡುಗೊರೆ ಆಮಿಷಕ್ಕೊಳಗಾಗದೇ ಪರಿಕರಗಳ ಗುಣಮಟ್ಟ ಖಾತರಿಪಡಿಸಿಕೊಂಡು ಖರೀದಿಸಬೇಕು. –ಬಿ.ಮಂಜುನಾಥ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
ಕಳೆದ ವರ್ಷ ನೆರೆ, ಅತಿವೃಷ್ಟಿಯಾಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿತ್ತು. ಇನ್ನು ಅಳಿದುಳಿದ ಒಂದಿಷ್ಟು ಬೆಳೆಗೆ ಕೋವಿಡ್ ಲಾಕ್‌ಡೌನ್‌ನಿಂದ ಸಮರ್ಪಕ ಬೆಲೆಯೂ ಸಿಗಲಿಲ್ಲ. ಮೆಕ್ಕೆಜೋಳದ ಬೆಲೆಯಂತೂ ಪಾತಾಳಕ್ಕೆ ಕುಸಿಯಿತು. ಈಗಷ್ಟೇ ಒಂದಿಷ್ಟು ಮಳೆ ಬಿದ್ದಿದ್ದು ಮುಂದಿನ ದಿನಗಳಲ್ಲಿ ಮುಂಗಾರು ಸಕಾಲದಲ್ಲಿ, ಸಮರ್ಪಕವಾಗಿ ಸುರಿದು ಉತ್ತಮ ಬೆಳೆ ಬರಬಹುದೆಂಬ ನಿರೀಕ್ಷೆಯಲ್ಲಿ ಜಮೀನು ಹದಗೊಳಿಸಲು ಸಜ್ಜಾಗಿದ್ದೇವೆ. –ಶಿವಯೋಗಿ ಬೆನ್ನೂರು, ರೈತ
–ಎಚ್.ಕೆ. ನಟರಾಜ