ಮಂಡ್ಯ: ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಲಾಕ್‌ಡೌನ್ ನಿರ್ಧಾರ ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಟೀಕಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭದ ಪೂರ್ವಸಿದ್ಧತೆ ಕುರಿತು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರ ಸಭೆಯಲ್ಲಿ ಮಾತ ನಾಡಿ, ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು. ಅದೇ ರೀತಿ ಲಾಕ್‌ಡೌನ್ ಸಡಿಲಗೊಳಿಸುವ ಸಮ ಯದಲ್ಲೂ ಯೋಜನಾಬದ್ಧ ಕ್ರಮ ಅನುಸರಿಸಲಿಲ್ಲ ಎಂದು ದೂಷಿಸಿದರು.
ಪ್ಯಾಕೇಜ್ ಬೋಗಸ್: ಕೇಂದ್ರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಕೇವಲ ಬೋಗಸ್. ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ, 2 ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ಹೊರತರುವುದಾಗಿ ಸುಳ್ಳು ಹೇಳಿದ್ದ ಮೋದಿ, ಈಗಲೂ ಬೋಗಸ್ ಪ್ಯಾಕೇಜ್ ಘೋಷಿಸಿದ್ದಾರೆಂದು ಟೀಕಿಸಿದರು.
ಡಿಕೆಶಿ ಪದಗ್ರಹಣ: ಏ.7ರಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭ ನಡೆಯಲಿ ದ್ದು, 150 ಜನರು ಸೇರುವುದಕ್ಕೆ ಅನುಮತಿ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಮುಖಂಡರು, ಕಾರ್ಯಕರ್ತರು ನಗರ, ಪಟ್ಟಣ ಹಾಗೂ ಪ್ರತಿ ಗ್ರಾಪಂ ಮಟ್ಟದಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿ ಸಾಮಾಜಿಕ ಅಂತರದೊಂದಿಗೆ ಕಾರ್ಯಕ್ರಮ ವೀಕ್ಷಿಸುವಂತೆ ಹೇಳಿದರು.
ಸಭೆಯಲ್ಲಿ ಮಾಜಿ ಸಚಿವರಾದ ಆತ್ಮಾನಂದ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇ ಗೌಡ, ಯುವ ಮುಖಂಡ ರವಿಕುಮಾರ್ ಗಣಿಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಿದಂಬರ್, ಶಾರದಾಗೌಡ, ಜಿಪಂ ಮಾಜಿ ಅಧ್ಯಕ್ಷ ಗುರುಚರಣ್, ಜಯರಾಂ, ಮಹಮದ್ ಜಬೀವುಲ್ಲಾ, ಹಾಲಹಳ್ಳಿ ರಾಮಲಿಂಗಯ್ಯ, ರುದ್ರಪ್ಪ ಇತರರಿದ್ದರು.