ಎಲ್ಲರೂ ನಮ್ಮ ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿದೆ ಅಂತಿದ್ರು ಒಂದು ಕಾಲದಲ್ಲಿ. ಆದರೇ, ಈಗ ಟ್ರೆಂಡ್ ಬದಲಾಗಿದೆ, ಸ್ವರ್ಗವೇ ನಾಚುವಂತಹ ಅದ್ದೂರಿ ಮದುವೆಗಳಿಗೆ ಬ್ರೇಕ್ ಬಿದ್ದು, ಸಿಂಪಲ್ಲಾಗಿ ಮದುವೆ ಸ್ಟೋರಿಯನ್ನು ಮುಗಿಸಿಬಿಡ್ತಾರೆ ನಮ್ಮ ಜನ. ಮೊದಲೆಲ್ಲಾ ಮನೆಯಲ್ಲಿ ಮದುವೆ ಎನ್ನುವ ಪ್ರಸ್ತಾಪವೇ ಇರುತ್ತಿರಲಿಲ್ಲ ಕಾರಣ ಲಿಸ್ಟ್ ನಲ್ಲಿರುವ ಸಂಬಂಧಿಕರನ್ನು, ಸ್ನೇಹಿತರ ಬಳಗವನ್ನು ಸಣ್ಣ ಜಾಗದಲ್ಲಿ ಸಂಭಾಳಿಸುವುದು ಕಷ್ಟವೇ ಸರಿ. ಅದರ ಜತೆಗೆ ಮದುವೆ ಎನ್ನುವುದೊಂದು ಪ್ರತಿಷ್ಠೆಯ ವಿಚಾರವೂ ಆಗಿತ್ತು.
ತಿಂಗಳ ಮೊದಲೇ ಹಾಲ್ ಬಾಡಿಗೆ, ಛತ್ರ ಬುಕಿಂಗ್ ಎಲ್ಲವೂ ಆಗಬೇಕಿತ್ತು. ಕಲರ್ಫುಲ್ ವಸ್ತ್ರಾಭರಣಗಳು, ಅದಕ್ಕೆ ಹೊಂದುವ ಡೆಕೋರೇಷನ್, ಅಲಂಕಾರಕ್ಕೆ ಒಂದಿಷ್ಟು ಬ್ಯೂಟಿಶಿಯನ್ಸ್, ಬಾಯಿ ಚಪಲ ತೀರಿಸಲು ಭೋಜನ ವ್ಯವಸ್ಥೆ.. ಹೀಗೆ ಏನಿಲ್ಲವೆಂದರೂ ಇನ್ನೊಬ್ಬನ ಕಣ್ಣು ಕುಕ್ಕಿಸುವಷ್ಟು ಗ್ರಾಂಡ್ ಕಾರ್ಯಕ್ರಮ ಮಾಡಲು ಪ್ರಯತ್ನಿಸಿರುತ್ತಾರೆ.
ಇದನ್ನೂ ಓದಿ : ಕೋವಿಡ್ ಸಮಯದಲ್ಲಿ ಮಕ್ಕಳಿಗೆ ಪತ್ರ ಬರೆದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಈ ಶಿಕ್ಷಕಿ
ಬಡವರ ಮನೆಯ ಮದುವೆಯಾದರೆ ಒಂದೆರಡು ಲಕ್ಷ, ಮಧ್ಯಮ ವರ್ಗದ್ದಾದರೆ ಎಂಟ್ಹತ್ತು ಲಕ್ಷ, ಇನ್ನೂ, ಶ್ರೀಮಂತರಾದರೆ ಒಂದು ಕೋಟಿ ದಾಟಿದರೂ ಆಶ್ಚರ್ಯವಿಲ್ಲ. ವಧುವಿನ ಮೈಮೇಲೆ ಮಣ ಭಾರದ ಬಾಡಿಗೆ ಒಡವೆಗಳು, ಬಗೆ ಬಗೆ ಸ್ವೀಟುಗಳು, ಬಂದವರಿಗೆ- ಹೋದವರಿಗೆ, ಉಂಡವರಿಗೆ ಎಲ್ಲರಿಗೂ ತಾಂಬೂಲ ಅಥವಾ ರಿಟರ್ನ್ ಗಿಫ್ಟ್ ಇವೆಲ್ಲಾ ಇರಲೇಬೇಕಾದ ನೀತಿಯ ಕಟ್ಟುಪಾಡುಗಳಾಗಿದ್ದವು.
ಲಾಕ್ಡೌನ್ ಬಂತು ನೋಡ್ರಿ… ಹೇಗೆಲ್ಲಾ ಬದಲಾಯಿತು, ಮದುವೆಗೆ ಅಗತ್ಯ ಇರುವವರು ಯಾರೆಂಬುದರ ಜ್ಞಾನೋದಯ ಬಹುಶಃ ಈಗೀಗ ಜನರಿಗೆ ಆಗುತ್ತಿದೆ. 50 ಜನ ದಾಟುವ ಹಾಗಿಲ್ಲ ಎಂಬ ಸರಕಾರದ ಆದೇಶಕ್ಕೆ ಸರಿಯಾಗಿ ಮದುವೆಗಳೆಲ್ಲಾ ಸಿಂಪಲ್ ಆಗಿಬಿಟ್ಟವು. ಸಿಂಪಲ್ಲಾಗೊಂದು ಮದುವೆ ಮಾಡಿ ಬಿಡೋಣ ಎಂಬ ಯೋಚನೆ ಬಂದು ಬಿಟ್ಟಿದೆ. ಮದುವೆಗಳ ಆಮಂತ್ರಣ ಪತ್ರಿಕೆಗಳು ಈಗ ಕೇವಲ ಮಾಹಿತಿ ಪತ್ರಿಕೆಯಾಗಿ ಪರಿವರ್ತನೆ ಕಂಡು ಡಿಜಿಟಲ್ ಆಗಿವೆ. ಅದರಲ್ಲಿ ನೀವಿದ್ದಲ್ಲೇ ಆಶೀರ್ವದಿಸಿ ಎಂಬ ಉಲ್ಲೇಖವನ್ನೂ ಮಾಡಲಾಗುತ್ತದೆ. ಮದುಮಕ್ಕಳೂ, ಅವರ ತಂದ- ತಾಯಿ, ಅಕ್ಕ- ಭಾವ,ಅಣ್ಣ ತಂಗಿಯಂದಿರು, ಅತ್ತೆ, ಮಾವಂದಿರು, ಮಂತ್ರ ಹೇಳೋಕೊಬ್ಬ ಪುರೋಹಿತ, ನಾಮಾವಸ್ಥೆಗೊಬ್ಬ ಫೋಟೋಗ್ರಾಫರ್ (ಜನ ಕಡಿಮೆಯಾದ ಕಾರಣ ಯಾರ ಫೋಟೋ ತೇಗ್ದಾನು ಪಾಪ) ಇದ್ದರೆ ಮದುವೆ ಸಕ್ಸಸ್. ಮನೆಯಲ್ಲೇ ಮದುವೆ, ಅಗತ್ಯವಿದ್ದಷ್ಟೇ ಖರ್ಚು ಎಷ್ಟು ಸಿಂಪಲ್ ನೋಡಿ..!
ಅದ್ದೂರಿ ಮದುವೆಯಿಂದ ಹಣದ ಚಲಾವಣೆಯಾಗಿ ಎಷ್ಟೋ ಮಂದಿಗೆ ದುಡಿಮೆ ಸಿಗುವುದೇನೋ ಸರಿ. ಆದರೆ ಮದುವೆಯ ಎಲ್ಲಾ ವೆಚ್ಚಗಳ ಹೆಸರಿನಲ್ಲಿ ಬಡ ಮತ್ತು ಮಧ್ಯಮ ವರ್ಗಕ್ಕೆ ಆಗುತ್ತಿದ್ದ ಹಿಂಸೆ ಅಷ್ಟಿಷ್ಟಲ್ಲ. ಎಷ್ಟೋ ಫ್ಯಾಮಿಲಿಗಳು ಮಗಳಿಗೆ ಮದುವೆ ಮಾಡಿ ದಿವಾಳಿಯಾದ ಉದಾಹರಣೆಗಳೂ ಇವೆ. ಸದ್ಯ ಲೋಕದ ಕಣ್ಣಿಗೆ ಅದ್ದೂರಿ ಮದುವೆ ಮಾಡಿ ಪಾಪರ್ ಆಗುವುದು ಇಲ್ಲದಿರುವುದರಿಂದ ಹೆಚ್ಚಿನವರು ಈ ಲಾಕ್ಡೌನ್ ಟೈಮಲ್ಲೇ ಮದುವೆ ಮಾಡಿ ಬಿಡೋಣ ಅಂತ ಅವಸರದಲ್ಲಿದ್ದಾರಂತೆ..! ಖರ್ಚು ಕಡಿಮೆ ಉಳಿತಾಯವೂ ಹೌದು. ಹೀಗಾಗಿಯೇ ಲಾಕ್ಡೌನ್ ಮದುವೆಗಳು ಟ್ರೆಂಡಿಂಗ್ನಲ್ಲಿವೆ.
ಒಟ್ಟಿನಲ್ಲಿ, ಮದುವೆ ಸಿಂಪಲ್ಲಾದಂತೆ ಮನುಷ್ಯನ ಒಟ್ಟಾರೆ ಜೀವನ ಶೈಲಿಯೂ ಸಿಂಪಲ್ಲಾಗಿ ಬದಲಾಗುತ್ತಿದೆ. ಈ ಲಾಕ್ಡೌನ್ ಅದೆಂತಹ ಸಂಕಷ್ಟದ ಪರಿಸ್ಥಿತಿಯನ್ನು ತಂದೊಡ್ಡಿದರೂ ಕೂಡ ಸರಳತೆಯೇ ಜೀವನೆ ಎಂಬ ನೀತಿ ಪಾಠವೊಂದನ್ನು ಕಲಿಸಿಕೊಟ್ಟಿದ್ದಂತೂ ಸತ್ಯ.
ದುರ್ಗಾ ಭಟ್, ಕೆದುಕೋಡಿ
ಇದನ್ನೂ ಓದಿ : ಉ. ಪ್ರ : ಮಾದರಿ ಸಂಗ್ರಹಿಸದೇ ಆರ್ ಟಿ-ಪಿಸಿಆರ್ ಪರೀಕ್ಷಾ ಕಿಟ್ ಗಳು ಪ್ಯಾಕ್..!