Advertisement

ಲಾಕ್‌ಡೌನ್‌ ಸಡಿಲಿಕೆ: ಕಡಲ ಮಕ್ಕಳಿಂದ ಮೀನುಗಾರಿಕೆ

02:31 AM May 17, 2020 | Sriram |

ಮಂಗಳೂರು: ಕೋವಿಡ್-19 ಲಾಕ್‌ಡೌನ್‌ ಸಂಕಷ್ಟದ ಬಳಿಕ ಮಂಗಳೂರಿನಲ್ಲಿ ಸಣ್ಣ ಯಾಂತ್ರೀಕೃತ ಮೀನುಗಾರಿಕೆಗೆ ಸದ್ಯ ಅವಕಾಶ ಸಿಕ್ಕಿದೆ.

Advertisement

ಸಮಾಧಾನಕರ ಎನಿಸುವಷ್ಟುಮೀನುಗಳು ಬಲೆಗೆ ಬೀಳುತ್ತಿದ್ದು, ಇದೇ ಕಸುಬನ್ನು ಆಶ್ರಯಿಸಿದ ಮಂದಿಗೆ ತುಸು ನೆಮ್ಮದಿ ನೀಡಿದೆ.

ಲಾಕ್‌ಡೌನ್‌ ಘೋಷಣೆಯಿಂದಾಗಿ ಒಂದೂವರೆ ತಿಂಗಳಿನಿಂದ ಮೀನುಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಜೀವನೋಪಾಯಕ್ಕೆ ನಿತ್ಯದ ದುಡಿಮೆಯನ್ನು ಆಧರಿಸಿದ್ದ ಸಾವಿರಾರು ಮಂದಿ ಕಡಲ ಮಕ್ಕಳು ಸಂಕಷ್ಟಕ್ಕೀಡಾಗಿದ್ದರು.

ಈಗ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆಯಿಂದ ಮೀನುಗಾರಿಕೆ ಇಲಾಖೆಯು ಜಿಲ್ಲೆಯಲ್ಲಿ 110 ಅಶ್ವಶಕ್ತಿ ಸಾಮರ್ಥ್ಯದ ಸಣ್ಣ ಯಾಂತ್ರೀಕೃತ ಮೀನುಗಾರಿಕೆಗೆ ಅನುಮತಿ ನೀಡಿದ್ದು, 3 ದಿನಗಳಿಂದ ಕಡಲಮಕ್ಕಳು ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚು ಮೀನು ದೊರಕುತ್ತಿರುವುದರಿಂದ ಮೀನುಗಾರರು, ಮೀನು ವ್ಯಾಪಾರಸ್ಥರಿಗೆ ಸ್ವಲ್ಪ ಮಟ್ಟಿನ ಖುಷಿ ತಂದಿದೆ.

ಉತ್ತಮ ದರ
ಸದ್ಯ ಸಮುದ್ರದಲ್ಲಿ ಸಿಗಡಿ, ಏಡಿ ಮತ್ತು ನಂಗು ಮೀನುಗಳು ಅಧಿಕ ಸಂಖ್ಯೆಯಲ್ಲಿ ಸಿಗುತ್ತಿದೆ. ಕೆ.ಜಿ. ಲೆಕ್ಕದಲ್ಲಿ ಸಿಗಡಿಗೆ 220 ರೂ., ಏಡಿಗೆ 100 ರೂ., ನಂಗು ಮೀನಿಗೆ 130 ರೂ. ಗಳಷ್ಟು ದರ ಇದೆ.

Advertisement

125ಕ್ಕೆ ಅನುಮತಿ
ಇಲಾಖೆಯಿಂದ 110 ಅಶ್ವಶಕ್ತಿ ಸಾಮರ್ಥ್ಯದ ಒಟ್ಟು 125 ಸಣ್ಣ ಯಾಂತ್ರೀಕೃತ ಬೋಟ್‌ಗಳಿಗೆ ಅವಕಾಶ ಸಿಕ್ಕಿದ್ದು, ಪ್ರಸ್ತುತ ಸುಮಾರು 70 ಬೋಟುಗಳು ಮೀನುಗಾರಿಕೆಗೆ ತೆರಳುತ್ತಿವೆ. ಉಳಿದ ಬೋಟ್‌ಗಳೂ ಸದ್ಯದಲ್ಲಿ ಸಾಗರಕ್ಕಿ ಳಿಯಲಿವೆ. ಆಳ ಸಮುದ್ರ ಮೀನು ಗಾರಿಕೆಗೆ ಸದ್ಯ ಅವಕಾಶ ಲಭಿಸಿಲ್ಲ.

ನಿಯಮದೊಂದಿಗೆ ಮೀನುಗಾರಿಕೆ
ಮೀನುಗಾರಿಕೆ ಇಲಾಖೆ ಹೊರಡಿಸಿದ ಆದೇಶದಂತೆ, ತೋಟ ಬೆಂಗ್ರೆ ಮತ್ತು ಉಳ್ಳಾಲ ಕೋಡಿಯಲ್ಲಿ ನಿಗದಿತ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ಮೀನುಗಾರಿಕೆ ಬೋಟುಗಳು ಬಂದು ತಲುಪಬೇಕು. ನಿಗದಿತ ಮೀನುಗಾರಿಕೆ ಇಳಿದಾಣಗಳಿಗೆ ಹಂತ ಹಂತವಾಗಿ 5 ಬೋಟುಗಳು ಮೀರದಂತೆ ಹಿಂತಿರುಗಬೇಕು.

ಯಾವುದೇ ಕಾರಣಕ್ಕೂ ಬೇರೆ ರಾಜ್ಯದ ಮೀನುಗಾರಿಕೆ ಬಂದರು/ಇಳಿದಾಣ ಕೇಂದ್ರಗಳಿಗೆ ಪ್ರವೇಶಿಸಬಾರದು. ಜೂ. 1ರಿಂದ ಜು. 31ರ ವರೆಗೆ ಮೀನು ಗಾರಿಕೆ ನಿಷೇಧ ಅವಧಿ ಇರುವುದರಿಂದ ಎಲ್ಲ ಯಾಂತ್ರೀಕೃತ ಬೋಟ್‌ಗಳು ಮೇ 31ರೊಳಗೆ ಬಂದರು/ಇಳಿದಾಣಗಳಿಗೆ ಮರಳಬೇಕು ಎಂದು ಆದೇಶ ನೀಡಿದೆ.

ನಿಯಮ ಪಾಲನೆ
ಕಳೆದ 3 ದಿನಗಳಿಂದ ಸಣ್ಣ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಿದೆ. ಇಲಾಖೆ ನೀಡಿರುವ ಎಲ್ಲ ಮಾರ್ಗ ಸೂಚಿಗಳನ್ನು ಪಾಲಿಸಿಕೊಂಡೇ ಮೀನುಗಾರಿಕೆ ನಡೆಸಲಾಗುತ್ತಿದೆ. ಮೀನಿನ ದರ ಉತ್ತಮವಾಗಿದ್ದು, ಮೀನುಗಳು ಹೆಚ್ಚು ಸಿಗುವುದರಿಂದ ಮೀನುಗಾರರು ಸ್ವಲ್ಪ ಖುಷಿಯಾಗಿದ್ದಾರೆ.
-ಮೋಹನ್‌ ಬೆಂಗ್ರೆ,ಮೀನುಗಾರರ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next