Advertisement

ರಾಯರ ಹೇರ್‌ ಸಲೂನ್‌

12:20 PM Apr 15, 2020 | mahesh |

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ, ಎಲ್ಲರೂ ಮನೆಯೊಳಗೇ ಕುಳಿತಿದ್ದೇವೆ. ಮಾಡೋಕೆ ಹೆಚ್ಚು ಕೆಲಸವೂ ಇಲ್ಲ. ಇರುವ ಅನಿವಾರ್ಯ ಕೆಲಸಗಳನ್ನು, ಮನೆಯವರೆಲ್ಲ ಹಂಚಿಕೊಂಡು ಮಾಡುತ್ತಿದ್ದೇವೆ. ಕಳೆದ ವಾರ ನನಗೆ ಇದ್ದಕ್ಕಿದ್ದಂತೆ, ಕ್ಲಿಪ್‌ ಹಾಕಿಕೊಳ್ಳುವಂತೆ ಕೂದಲು ಕತ್ತರಿಸಿಕೊಳ್ಳಬೇಕು ಎನ್ನಿಸಿತು. ಆದರೆ, ಲಾಕ್‌ಡೌನ್‌ನಿಂದಾಗಿ ಬ್ಯೂಟಿಪಾರ್ಲರ್‌ಗಳೆಲ್ಲಾ ಬಾಗಿಲು ಹಾಕಿದ್ದವು. ಯಾವಾಗಲೋ ಒಮ್ಮೆ ಗೆಳತಿ- “ಅದು ಸುಲಭ ಕಣೆ. ಕಿವಿ ಮೇಲುಗಡೆ ಎರಡು ಜುಟ್ಟು ಬರುವ ಹಾಗೆ ಕೂದಲು ಕಟ್ಟಿಕೊಳ್ಳೋದು. ಅದನ್ನು ಒಂದೇ ಲೆವೆಲ್‌ ಬರುವ ಹಾಗೆ ಕಟ್‌ ಮಾಡೋದು. ನಂತರ ಹಿಂದಕ್ಕೆ ಬಾಚಿದರೆ ಖೀ ಶೇಪ್‌ನಲ್ಲಿ ನಿಲ್ಲುತ್ತೆ. ನೀನೇ ಮಾಡಿಕೊಳ್ಳಬಹುದು. ನಾನೂ ಹಾಗೇ ಎಷ್ಟು ಚಂದ ಕತ್ತರಿಸಿಕೊಂಡಿದೀನಿ ನೋಡು’ ಎಂದದ್ದು ನೆನಪಾಯಿತು.

Advertisement

ನಾನೂ ಟ್ರೈ ಮಾಡೇ ಬಿಡುವೆ ಅಂತ, ಕಿವಿಯ ಮೇಲಕ್ಕೆ ಜುಟ್ಟು ಕಟ್ಟಿ, ಕತ್ತರಿಸಿಯೂ ಬಿಟ್ಟೆ. ಕೂದಲನ್ನು ಹಿಂದಕ್ಕೆ ಬಾಚಿ ಕ್ಲಿಪ್‌ ಹಾಕಿಕೊಂಡೆ. ಆದರೆ, ಕೂದಲು ಒಂದೇ ಮಟ್ಟದಲ್ಲಿಯೂ ಇರಲಿಲ್ಲ; ಖೀ ಶೇಪಿನಂತೆಯೂ ಕಾಣಲಿಲ್ಲ. ಒಂದು ಜುಟ್ಟು ಗಿಡ್ಡ, ಇನ್ನೊಂದು ಜುಟ್ಟು ಉದ್ದ ಆಗಿತ್ತು! “ಈಗಲೇ ಏನು ಅರ್ಜೆಂಟಿತ್ತು? ಲಾಕ್‌ಡೌನ್‌ ಮುಗಿದ ಮೇಲೆ ಬ್ಯೂಟಿಪಾರ್ಲರ್‌ಗೆ ಹೋಗಿ ಕಟ್‌ ಮಾಡಿಸಿಕೊಂಡು ಬರಬಾರದಾಗಿತ್ತಾ?’ ಎನ್ನುತ್ತಾ ದುರುಗುಟ್ಟಿ ನೋಡಿದರು ರಾಯರು! “ಇಂದು ಇದ್ದಕ್ಕಿದ್ದಂತೆ ಹೇರ್‌ಸ್ಟೈಲ್‌ ಬದಲಿಸಿಕೊಳ್ಳಬೇಕು ಅನ್ನಿಸ್ತು. ಕತ್ತರಿಸಿಕೊಂಡೆ. ಬ್ಯೂಟಿಪಾರ್ಲರ್‌ ತೆರೆಯುವುದು ಇನ್ನೂ ತಿಂಗಳ ನಂತರವೇ ಇರಬಹುದು. ಈಗ ಮನೆ ಯೊಳಗೇ ಇರೋದಲ್ವಾ ನಡೀತದೆ ಬಿಡಿ’ ಅಂದೆ. ಆದರೂ ರಾಯರಿಗೆ ಸಮಾಧಾನವಿಲ್ಲ. “ನಿನ್ನನ್ನೇ ಬಿಟ್ರೆ ಹೇಗೆಗೋ ಕತ್ತರಿಸಿಕೊಳ್ಳುತ್ತೀ’
ಎನ್ನುತ್ತಾ ಒಂದು ಪೇಪರ್‌ ಹಾಸಿ, ಕತ್ತರಿ ಹಿಡಿದು  ಕೂತದ್ದೂ ಆಯ್ತು; ನನ್ನ ತಲೆಗೂದಲನ್ನು ಟ್ರಿಮ್‌ ಮಾಡಿದ್ದೂ ಆಯ್ತು. ಹೇಗಿದೆ ಲಾಕ್‌ ಡೌನ್‌ ಎಫೆಕ್ಟ್?

– ಸುರೇಖಾ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next