ಬೆಳಗಾವಿ: ಲಾಕ್‌ಡೌನ್‌ದಿಂದ ಸ್ವೀಟ್ ಮಾರ್ಟ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ಮಹಿಳೆ ತನ್ನ ಮಗನೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಗಾ ಗ್ರಾಮದಲ್ಲಿ ಗುರುವಾರ ನಡೆದಿದೆ.
ಹಲಗಾ ಗ್ರಾಮದ ಭಾರತಿ ಶೇಖರ ದೇಸಾಯಿ(35) ಹಾಗೂ ಪುತ್ರ ಪ್ರಜ್ವರ ಶೇಖರ ದೇಸಾಯಿ(15) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಾಕ್‌ಡೌನ್‌ಕ್ಕಿಂತ ಮುಂಚೆಯಷ್ಟೇ ಹಲಗಾದಲ್ಲಿ ಸ್ವೀಟ್ ಮಾರ್ಟ್ ಅಂಗಡಿ ಇಟ್ಟುಕೊಂಡು ಮಹಿಳೆ ತನ್ನ ಉಪಜೀವನ ನಡೆಸುತ್ತಿದ್ದಳು. ಲಾಕ್‌ಡೌನ್‌ದಿಂದಾಗಿ ಉದ್ಯೋಗದಲ್ಲಿ ಭಾರೀ ನಷ್ಟವಾಗಿದೆ. ಹೀಗಾಗಿ ಲಾಕ್‌ಡೌನ್ ಬರೆಗೆ ಎರಡು ಜೀವಗಳು ಬಲಿಯಾಗಿರುವುದು ದುರದೃಷ್ಟಕರವಾಗಿದೆ.
ಭಾರತಿಯನ್ನು ಹುಕ್ಕೇರಿ ತಾಲೂಕಿನ ಹತ್ತರಗಿಗೆ ಶೇಖರ ದೇಸಾಯಿ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ ೯ ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಮಗ ಪ್ರಜ್ವಲ್‌ನನ್ನು ಕರೆದುಕೊಂಡು ವ್ಯಕ್ತಿಯೊಬ್ಬನೊಂದಿಗೆ ಪ್ರೇಮವಾಗಿ ಹಲಗಾ ಗ್ರಾಮದಲ್ಲಿ ಇದೇ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ಇವರೆಲ್ಲರೂ ಚೆನ್ನಾಗಿ ಇದ್ದರೂ ವ್ಯಾಪರ ಸರಿಯಾಗಿ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಸಣ್ಣಪುಟ್ಟ ಜಗಳವಾಗುತ್ತಿತ್ತು.
ಸ್ವೀಟ್ ಮಾರ್ಟ್ ಅಂಗಡಿಯಲ್ಲಿ ನಷ್ಟವಾಗಿದ್ದರಿಂದ ಕಷ್ಟ ಅನುಭವಿಸುತ್ತಿದ್ದ ಭಾರತಿ ಜೀವನದಲ್ಲಿ ಜಿಗುಪ್ಸೆಗೊಂಡು ಆಗಾಗ ಸಾಯುವ ಬಗ್ಗೆಯೂ ಮಾತನಾಡುತ್ತಿದ್ದಳು. ಸ್ವೀಟ್ ಮಾರ್ಟ್ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈಕೆಯ ಸಹೋದರ ರಾಜು ಕಬಾಡಗಿ ದೂರು ನೀಡಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.