ನನ್ನ ದಿನಚರಿ ಬೆಳಗ್ಗೆ 4. 45ಕ್ಕೆ ಶುರು ಆಗುತ್ತದೆ. ಮೊದಲ ಕೆಲಸ, ವಾಟ್ಸ್ ಆಪ್ ಫ್ರೆಂಡ್ಸ್ ಗೆ ಗುಡ್ ಮಾರ್ನಿಂಗ್ ಮೆಸೇಜ್ ಕಳಿಸೋದು. ನಂತರ ಅಡುಗೆ ಮನೆಗೆ ಹೋಗಿ, ಹಾಲು ಕಾಯಿಸಿ, ಕಾಫಿ ಡಿಕಾಕ್ಷನ್ ಮಾಡೋದು. 7 ಗಂಟೆ ಆಗುತ್ತಿದ್ದಂತೆಯೇ, ಪಾತ್ರೆ ತೊಳೆಯಲು ಸ್ಟಾರ್ಟ್ ಮಾಡ್ತೇನೆ. ಮೊದ ಮೊದಲು ಸರಿಯಾಗಿ ಪಾತ್ರೆ ತೊಳೆಯಲು ಬರ್ತಾ ಇರಲಿಲ್ಲ! ಆದರೆ, ದಿನಾಲೂ ಅದೇ ಕೆಲಸ ಮಾಡಲು ಸ್ಟಾರ್ಟ್ ಮಾಡಿದೆ ನೋಡಿ; ಈಗ ಕೈ ಕುದುರಿಕೊಂಡಿದೆ! ಇಷ್ಟಾದಮೇಲೆ ತಿಂಡಿ ತಿಂದು, ಪೇಪರ್ ಓದಿ ಮುಗಿಸುವುದರೊಳಗೆ 10 ಗಂಟೆ ಆಗಿಬಿಡುತ್ತೆ.
ಬಾಲ್ಕನಿಯಲ್ಲಿ ಇರುವ ಗಿಡಗಳಿಗೆ ನೀರು ಹಾಕಲು, ನಮ್ಮ ಹೋಂ ಮಿನಿಸ್ಟರ್ ಕಡೆಯಿಂದ ಈಗ ಅನುಮತಿ ಸಿಕ್ಕಿದೆ. ಅದೀಗ, ಸಂಪೂರ್ಣವಾಗಿ ನನ್ನ ಕೆಲಸ. ಮನೆಯಲ್ಲಿ ಕಸ ಗುಡಿಸಬೇಕು ಅನ್ನುವುದು ನನ್ನ ಇನ್ನೊಂದು ಆಸೆ. ಆದರೆ, ಪೊರಕೆ ಹಿಡಿಯಲು ನನ್ನ ಹೆಂಡತಿ ಪರ್ಮಿಷನ್ ಕೊಟ್ಟಿಲ್ಲ. ಹಾಗಂತ ಸುಮ್ನೆ ಇರೋಕ್ಕಾಗುತ್ತಾ? ಅವಳಿಗೆ ಗೊತ್ತಾಗದ ಹಾಗೆ, ಅವಳು ರೆಸ್ಟ್ ಮಾಡ್ತಾ ಇರುವಾಗ, ನಾನು ಕದ್ದು ಮುಚ್ಚಿ ಈ ಕೆಲಸ ಮಾಡ್ತೇನೆ!
ನಂತರ ಸ್ನಾನ ಮಾಡಿ, ಪೂಜೆಗೆ ಕೂರುತ್ತೇನೆ. ರಾಘವೇಂದ್ರ ಸ್ವಾಮಿಗಳು ಹಾಗೂ ನಮ್ಮ ಮನೆದೇವರಾದ ನರಸಿಂಹ ಸ್ವಾಮಿಯ ಸ್ತೋತ್ರ ಹೇಳ್ತೀನಿ. ಇದರಿಂದ ಮನಃಶಾಂತಿ ಸಿಗುತ್ತೆ. ನಂತರ ಊಟ, ನಂತರ, ಸ್ಕೂಲ್- ಕಾಲೇಜಿನ ಹಳೆಯ ಗೆಳೆಯರಿಗೆ ಕಾಲ್ ಮಾಡುವುದು, ಹಳೆಯ ದಿನಗಳನ್ನು ಮೆಲುಕು ಹಾಕುವುದು, ಅದರಲ್ಲಿ ಸ್ವಾರಸ್ಯಕರ ಅನಿಸಿದ್ದನ್ನು ನೋಟ್ಸ್ ಮಾಡಿಕೊಳ್ಳುವುದು, ಸಿನಿಮಾ ಜರ್ನಿಯ ನೋವು-ನಲಿವಿನ ಕ್ಷಣಗಳನ್ನು ನೆನಪು ಮಾಡಿಕೊಂಡು, ಅದನ್ನೂ ಬರೆದಿಡುವುದು…ಇದರಲ್ಲೇ ದಿನ ಕಳೆದುಹೋಗುತ್ತಿದೆ.
ಈಗ ಮೊಬೈಲ್ ಇರುವುದರಿಂದ, ದೇಶ-ವಿದೇಶದ ಎಲ್ಲಾ ಗೆಳೆಯರನ್ನೂ ಸಂಪರ್ಕಿಸಲು ಸಾಧ್ಯ ಆಗುತ್ತಿದೆ. ಹಾಗಾಗಿ, ದಿನ ಕಳೆಯುವುದು ಬೋರ್ ಅನಿಸ್ತಾ ಇಲ್ಲ. ನನ್ನ ಎಷ್ಟೋ ಜನ ಆತ್ಮೀಯರು, ಈ ಲೋಕದ ವ್ಯವಹಾರ ಮುಗಿಸಿಕೊಂಡು ಹೋಗಿಬಿಟ್ಟಿದ್ದಾರೆ. ಅದು ನೆನಪಾದಾಗ ನೋವಾಗುತ್ತೆ. ಆಗೆಲ್ಲಾ ನನಗೆ ನಾನೇ ಸಮಾಧಾನ ಹೇಳ್ಕೊತೇನೆ. ಕೋವಿಡ್ ಕಾರಣಕ್ಕೆ, ದಿನಕ್ಕೆ 20 ಕ್ಕೂ ಹೆಚ್ಚು ಬಾರಿ ಕೈ ತೊಳೆಯುವುದು, ಎಲ್ಲರಿಂದ ಅಂತರ ಕಾಯ್ದುಕೊಂಡು ಬದುಕುವುದೂ ಈಗ ಅಭ್ಯಾಸ ಆಗಿದೆ. ಎಲ್ಲರ ನೋವಿಗೆ ಸ್ಪಂದಿಸುವಂಥ ಶಕ್ತಿ ಕೊಡು ದೇವರೇ ಎಂಬ ಪ್ರಾರ್ಥನೆಯೊಂದಿಗೆ, ದಿನಗಳು ಉರುಳುತ್ತಿವೆ…
“ಪ್ರಣಯರಾಜ’ ಶ್ರೀನಾಥ್, ಹಿರಿಯ ಚಿತ್ರನಟ