Advertisement

ಆಹಾರ ಧಾನ್ಯ ಖರೀದಿಗೂ ಲಾಕ್‌ಡೌನ್‌ ಬಿಸಿ

10:44 AM Apr 20, 2020 | mahesh |

ಬೆಂಗಳೂರು: ಬೆಲೆ ಕುಸಿತ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯ ಖರೀದಿಗೂ ಕೋವಿಡ್-19 ಲಾಕ್‌ಡೌನ್‌ ಬಿಸಿ ತಟ್ಟಿದ್ದು, ಪೂರ್ಣ ಪ್ರಮಾಣದ ಖರೀದಿ ನಡೆದಿಲ್ಲ. ಹಳೇ ಮೈಸೂರು ಭಾಗದಲ್ಲಿ ಬೆಳೆದಿರುವ ರಾಗಿ, ಭತ್ತ, ಕಡಲೆಕಾಳು, ಶೇಂಗಾ, ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಹೆಚ್ಚು ಬೆಳೆದಿರುವ ತೊಗರಿ ಖರೀದಿಗೆ ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿ ಎರಡೂವರೆ ತಿಂಗಳು ಕಳೆದರೂ ಖರೀದಿ ಆಗಿಲ್ಲ. ಲಾಕ್‌ಡೌನ್‌ನಿಂದ ಕೃಷಿಚಟುವಟಿಕೆಗಳಿಗೆ ಆಹಾರ ಧಾನ್ಯ ಸಾಗಾಟ ಮಾರಾಟಕ್ಕೆ ರಿಯಾಯಿತಿ ಇದ್ದರೂ ಖರೀದಿ ಕೇಂದ್ರಗಳು ಬಹುತೇಕ ಕಡೆ ಬಂದ್‌ ಆಗಿವೆ. ಖರೀದಿ ಕೇಂದ್ರಗಳಲ್ಲಿ ರೈತರ ಆಹಾರಧಾನ್ಯ ಖರೀದಿಗೆ ಮೊದಲಿಗೆ ಮಾರ್ಚ್‌ 25 ರವರೆಗೆ ಗಡುವು ನೀಡಿ ನಂತರ ಅದನ್ನು ಮಾ.31ರವರೆಗೂ ವಿಸ್ತರಿ ಸಲಾಗಿತ್ತಾದರೂ ಲಾಕ್‌ ಡೌನ್‌ನಿಂದ ಅದೂ “ಲಾಕ್‌’ ಆದಂತಾಯಿತು.

Advertisement

ಬರ ಹಾಗೂ ಪ್ರವಾಹದ ನಡುವೆಯೂ ಉತ್ತಮ ಬೆಳೆ ತೆಗೆದಿದ್ದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿ ಕೊನೆಗೆ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಗೆ ಮುಂದಾದರೂ ನಾನಾ ಕಾರಣಗಳಿಂದಾಗಿ ರೈತರ ನೋಂದಣಿ ಪೂರ್ಣ ಪ್ರಮಾಣದಲ್ಲಿ ಆಗಲಿಲ್ಲ. ನೋಂದಣಿಯಾದ ರೈತರ ಉತ್ಪನ್ನವೂ ಸಕಾಲದಲ್ಲಿ ಖರೀದಿ ಆಗಲಿಲ್ಲ. ದಿಢೀರ್‌ ಎದುರಾದ ಲಾಕ್‌ಡೌನ್‌ ರೈತರಿಗೆ ಮತ್ತಷ್ಟು ಸಂಕಟ ತಂದೊಡ್ಡಿತು. ಹೀಗಾಗಿ ಆಹಾರ ಧಾನ್ಯ ತಮ್ಮಲ್ಲೇ ಇಟ್ಟುಕೊಂಡು ಕೂರುವಂತಾಗಿದೆ. ಕೆಲವೆಡೆ ಖರೀದಿಯಾಗಿದ್ದರೂ ಇನ್ನೂ ಹಣ ಪಾವತಿಯಾಗಿಲ್ಲ. ಪೂರ್ಣ ಪ್ರಮಾಣದಲ್ಲಿ  ಖರೀದಿಯೂ ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 2019-20 ಮುಂಗಾರು ಹಂಗಾ ಮಿ ನಲ್ಲಿ 13.35 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 12.02 ಲಕ್ಷ ಮೆಟ್ರಿಕ್‌ ಟನ್‌ ತೊಗರಿ ಬೆಳೆಯಲಾಗಿತ್ತು. ಸರ್ಕಾರ ಪ್ರತಿ ರೈತರಿಂದ ಹತ್ತು ಕ್ವಿಂಟಾಲ್‌ ಮಾತ್ರ ಕ್ವಿಂಟಾಲ್‌ಗೆ 6100 ರೂ.ನಂತೆ ಖರೀದಿಸಿದೆ.

ರೈತರು ಹಾಗೂ ಆ ಭಾಗದ ಜನಪ್ರತಿನಿಧಿಗಳ ಬೇಡಿಕೆ ಇದ್ದದ್ದು ಪ್ರತಿ ರೈತರಿಂದ ಕನಿಷ್ಠ 20 ಕ್ವಿಂಟಾಲ್‌, 8500 ರೂ.ನಂತೆ ಖರೀದಿಸಬೇಕು ಎಂಬುದು. ಕೇಂದ್ರ ಸರ್ಕಾರ 2.84 ಲಕ್ಷ ಮೆಟ್ರಿಕ್‌ ಟನ್‌ ಖರೀದಿಗೆ ಅನುಮತಿ ನೀಡಿದೆ. ಅಷ್ಟು ಪ್ರಮಾಣವೂ ಖರೀದಿ ಆಗಿಲ್ಲ. ಇದೇ ರೀತಿ ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಧಾರವಾಡ ಭಾಗದಲ್ಲಿ 2.67 ಲಕ್ಷ ಮೆಟ್ರಿಕ್‌ ಟನ್‌ ಶೇಂಗಾ ಬೆಳೆಯಲಾಗಿತ್ತು. 6.18 ಲಕ್ಷ ಮೆಟ್ರಿಕ್‌ ಟನ್‌ ಕಡಲೇಕಾಳು ಬೆಳೆಯಲಾಗಿತ್ತು. ಭತ್ತ ಮತ್ತು ರಾಗಿ ಸಹ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿತ್ತು. ಬೆಂಬಲ ಬೆಲೆಯಡಿ ರೈತರ ಆಹಾರ ಧಾನ್ಯ ಖರೀದಿಗಾಗಿ ಒಂದು ಸಾವಿರ ಕೋಟಿ ರೂ. ನಷ್ಟು ಹಣ ಅಗತ್ಯವಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಖರೀದಿ ದಿನಾಂಕ ವಿಸ್ತರಿಸಬೇಕೆಂಬ ಬೇಡಿಕೆಯೂ ಇದೆ. ಲಾಕ್‌ಡೌನ್‌ ನಿಂದ ಮಾರುಕಟ್ಟೆಯಲ್ಲಿ ಮಾರಾಟ ಸಾಧ್ಯವಿಲ್ಲ, ರಾಜ್ಯ ಸರ್ಕಾರ ಮಿತಿ ಬಿಟ್ಟು ರೈತರ ಬಳಿ ಇರುವ ಒಟ್ಟು ಪ್ರಮಾಣದ ಆಹಾರಧಾನ್ಯ ಖರೀದಿಸಬೇಕೆಂಬ ಬೇಡಿಕೆಯೂ ಇದೆ.

ಅಗತ್ಯ ಕ್ರಮ: ಸಚಿವ ಎಸ್‌.ಟಿ. ಸೋಮಶೇಖರ್‌
ಈ ಕುರಿತು ಉದಯವಾಣಿ ಜತೆ ಮಾತನಾಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ರಾಜ್ಯ ಸರ್ಕಾರ ಲಾಕ್‌ಡೌನ್‌ ಆರ್ಥಿಕ ಸಂಕಷ್ಟದ ನಡುವೆ ರೈತರಿಗೆ ಸ್ಪಂದಿಸಲು ಕ್ರಮ ಕೈಗೊಂಡಿದೆ. ತೊಗರಿ ಖರೀದಿ ಸಂಬಂಧ 3.17 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ 2.57 ಲಕ್ಷ ಮೆಟ್ರಿಕ್‌ ಟನ್‌ ಖರೀದಿಸಲಾಗಿದೆ. ಇನ್ನೂ 33.16 ಸಾವಿರ ಮೆಟ್ರಿಕ್‌ ಟನ್‌
ಖರೀದಿಸಬೇಕಿದೆ. 963 ಕೋಟಿ ರೂ .ಪೈಕಿ 643 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದ ತೊಗರಿ ಖರೀದಿ ಹಾಗೂ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಕಡಲೆಕಾಳು 77,969 ರೈತರಿಂದ 7 ಲಕ್ಷ ಕ್ವಿಂಟಾಲ್‌ ಖರೀದಿಸಬೇಕಿದೆ. ಈಗಾಗಲೇ ಖರೀದಿ ಮಾಡಿರುವವರಿಗೆ 92 ಕೋಟಿ ರೂ. ಪಾವತಿಸಲಾಗಿದೆ. ಶೇಂಗಾ 66,800 ಮೆಟ್ರಿಕ್‌ ಟನ್‌ ಪೈಕಿ 38 ಸಾವಿರ ಮೆಟ್ರಿಕ್‌ ಟನ್‌ ಖರೀದಿಸಲಾಗಿದ್ದು ಉಳಿದದ್ದು ಖರೀದಿಸಲಾಗುವುದು ಎಂದು ಹೇಳುತ್ತಾರೆ. ಭತ್ತ ಖರೀದಿ ದಿನಾಂಕ ಮೇ 15 ರವರೆಗೂ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸುತ್ತಾರೆ.

ರೈತರಿಂದ ಬೆಂಬಲ ಬೆಲೆಯಡಿ ಆಹಾರಧಾನ್ಯ ಖರೀದಿಯಲ್ಲಿ ವ್ಯತ್ಯಯ ಆಗಿರುವುದು ನಿಜ. ಖರೀದಿ ದಿನಾಂಕ ವಿಸ್ತರಣೆ ಬೇಡಿಕೆಯಿದ್ದು ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಅನುಕೂಲವಾಗುವಂತೆ ಗಡುವು ವಿಸ್ತರಿಸಲಾಗುವುದು. ನೋಂದಣಿ ಆಗಿರುವ ಎಲ್ಲ ರೈತರಿಂದ ಖರೀದಿ ಮಾಡಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು.
ಎಸ್‌.ಟಿ.ಸೋಮಶೇಖರ್‌, ಸಹಕಾರ ಸಚಿವ

Advertisement

ಬೆಂಬಲ ಬೆಲೆಯಡಿ ಸರ್ಕಾರ ಹೇಳಿದಂತೆ ರೈತರಿಂದ ಆಹಾರ ಧಾನ್ಯ ಖರೀದಿಸಿಲ್ಲ. ಎಷ್ಟೋ ಕಡೆ ಖರೀದಿ ಕೇಂದ್ರಗಳೇ ಇನ್ನೂ ತೆರೆದಿಲ್ಲ. ಲಾಕ್‌ ಡೌನ್‌ ನಿಂದ ಸಮಸ್ಯೆ ಆಗಿದ್ದು ಸರ್ಕಾರ ಗಡುವು ವಿಸ್ತರಿಸಬೇಕು.
ಕುರುಬೂರು ಶಾಂತಕುಮಾರ್‌, ರೈತ ಮುಖಂಡ

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next