Advertisement

ಕಲ್ಲು ಕೆತ್ತನೆಗಾರರಿಗೆ ಕೊರೊನಾ ಕಲ್ಲೇಟು ­

07:33 PM Jun 09, 2021 | Team Udayavani |

ವರದಿ: ಮಹಾದೇವ ಪೂಜೇರಿ

Advertisement

ಚಿಕ್ಕೋಡಿ: ಕೊರೊನಾ ಲಾಕ್‌ಡೌನ್‌ ಎಲ್ಲರನ್ನು ಸಂಕಷ್ಟಕ್ಕೆ ದೂಡಿದೆ. ಆದರೆ ಕಲ್ಲು ಕೆತ್ತನೆ ಮೂಲಕ ಜೀವನ ನಡೆಸುವ ಕಲ್ಲು ಕೆತ್ತನೆಗಾರರ ಕುಟುಂಬಗಳ ಜೀವನ ಬೀಸುಕಲ್ಲಿನಲ್ಲಿ ಬೀಸಿದ ಹಿಟ್ಟಿನಂತಾಗಿದೆ. ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವ ಕುಟುಂಬಗಳ ನೆರವಿಗೆ ಸರ್ಕಾರ ಧಾವಿಸಬೇಕಿದೆ.

ಚಿಕ್ಕೋಡಿ ತಾಲೂಕಿನ ಹತ್ತರವಾಟ ಕ್ರಾಸ್‌ ಬಳಿ ಸಂಕೇಶ್ವರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಮಾರು ಎಂಟು ಕುಟುಂಬಗಳು ಕಲ್ಲು ಕೆತ್ತನೆ ಮಾಡಿ ಜೀವನ ನಡೆಸುತ್ತಾ ಬಂದಿವೆ. ಕಳೆದ ಒಂದೂವರೆ ತಿಂಗಳಿಂದ ಲಾಕ್‌ಡೌನ್‌ ಇರುವುದರಿಂದ ಸಂತಿ-ಪ್ಯಾಟಿ ಇಲ್ಲ, ಜನ ಸಂಚಾರ ಇಲ್ಲವೇ ಇಲ್ಲ, ಹೀಗಾಗಿ ಕೆತ್ತನೆ ಮಾಡಿದ ಕಲ್ಲು ಖರೀದಿಸುವವರೇ ಇಲ್ಲವಾಗಿದ್ದರಿಂದ ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ.

ಮೂಲತ: ನಿಪ್ಪಾಣಿ ನಗರದಿಂದ ವಲಸೆ ಬಂದು ಹತ್ತರವಾಟ ಕ್ರಾಸ್‌ ಬಳಿ ರಸ್ತೆ ಬದಿಯಲ್ಲಿ ಕಳೆದ 15 ವರ್ಷಗಳಿಂದ ಕಲ್ಲು ಕೆತ್ತನೆ ಮೂಲಕ ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದರು. ಆದರೆ ಲಾಕಡೌನ್‌ ಪರಿಣಾಮ ಕಲ್ಲು ಕೆತ್ತನೆಗಾರರ ಹೊಟ್ಟೆ ಮೇಲೆ ಬರೆ ಎಳೆದಂತೆ ಮಾಡಿದೆ. ಕಳೆದ ವರ್ಷ ಎರಡು ತಿಂಗಳ ಲಾಕ್‌ಡೌನ್‌, ಪ್ರಸಕ್ತ ವರ್ಷವೂ ಲಾಕ್‌ಡೌನ್‌ ಇರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ ಎನ್ನುತ್ತಾರೆ ಕಲ್ಲು ಕೆತ್ತನೆಗಾರರು.

ಎಂಟು ಕುಟುಂಬದ ಸುಮಾರು 20 ಜನರು ಹುಕ್ಕೇರಿ ತಾಲೂಕಿನ ಬೋರಗಲ್ಲ ಗ್ರಾಮದಿಂದ ಕಲ್ಲು ತಂದು ಬೀಸುಕಲ್ಲು, ಒಳಕಲ್ಲು, ಹೂರಣಕಲ್ಲು, ಕಾರಕಲ್ಲು, ರುಬ್ಬು ಕಲ್ಲು ಹೀಗೆ ಹತ್ತು ಹಲವು ಬಗೆ ಕಲ್ಲು ಕೆತ್ತನೆ ಮಾಡಿ ಬೆಳಗಾವಿ, ಚಿಕ್ಕೋಡಿ, ಗೋಕಾಕ, ಮಹಾಲಿಂಗಪೂರ, ಕೊಲ್ಲಾಪೂರ, ಇಚಲಕರಂಜಿ, ಸಾಂಗ್ಲಿ, ಸಂಕೇಶ್ವರ ಹೀಗೆ ಹಲವು ಕಡೆ ಹೋಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದರು.

Advertisement

ಲಾಕ್‌ಡೌನ್‌ದಿಂದ ಎಲ್ಲವೂ ಸ್ಥಗಿತಗೊಂಡಿದೆ. ಪ್ರತಿ ಮಾರ್ಚ, ಎಪ್ರೀಲ್‌ ಮತ್ತು ಮೇ ತಿಂಗಳಲ್ಲಿ ನಡೆಯುವ ಮದುವೆ ಮುಹೂರ್ತದಲ್ಲಿ ಪ್ರತಿಯೊಂದು ಮದುವೆ ಮನೆಯಲ್ಲಿ ಬೀಸುಕಲ್ಲು, ಒಳಕಲ್ಲು ಪೂಜೆ ಮಾಡುವ ಸಂಪ್ರದಾಯ ಮೊದಲಿನಿಂದಲೂ ಬೆಳೆದು ಬಂದಿದೆ. ಕೊರೊನಾ ಲಾಕಡೌನ ಇರುವುದರಿಂದ ಮದುವೆಗಳು ನಿಂತಹೋಗಿವೆ. ಸದ್ದಿಲ್ಲದೆ ಕೆಲವು ಮದುವೆ ನಡೆದು ಹೋಗಿವೆ. ರಸ್ತೆಯಲ್ಲಿ ಸಂಚರಿಸುವ ಜನರು ವಾಹನ ನಿಲ್ಲಿಸಿ ಕೆತ್ತನೆ ಕಲ್ಲು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಈಗ ಅದೂ ಇಲ್ಲ. ಇದರಿಂದ ನಮ್ಮ ಹೊಟ್ಟೆ ತುಂಬಿಸಿಕೊಳ್ಳುವುದು ಭಾರಿ ಕಷ್ಟವಾಗಿದೆ ಎಂದು ಕಲ್ಲು ಕೆತ್ತನೆಗಾರ ಮಹಿಳೆ ಅಳಲು ವ್ಯಕ್ತಪಡಿಸಿದಳು.

ನೆರವಿಗೆ ಕೈಚಾಚಿದ ಬಡ ಕುಟುಂಬಗಳು: ಕಳೆದ ವರ್ಷ ಬೇಸಿಗೆಯಲ್ಲಿ ನಮ್ಮ ಬದುಕು ಮೂರಾಬಟ್ಟೆಯಾಗಿತ್ತು. ಈ ವರ್ಷವು ಅದೇ ಸ್ಥಿತಿ ಮುಂದುವರೆದಿದೆ. ಒಂದು ಕಲ್ಲು ಕೆತ್ತನೆ ಮಾಡಲು ಎರಡು ದಿನ ಬೇಕು. ಕೆತ್ತನೆ ಮಾಡಿದ ಕಲ್ಲು ಮಾರಾಟವಾದಾಗ ಮಾತ್ರ ನಮ್ಮ ಹೊಟ್ಟೆಗೆ ಅನ್ನ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಬದುಕು ದುಸ್ತರವಾಗಿದೆ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇರುವುದರಿಂದ ಹೊಟ್ಟೆ ತುಂಬಿಸಲು ಪರದಾಟುವ ಪರಿಸ್ಥಿತಿ ನಿರ್ಮಾನವಾಗಿದೆ. ಯಾರಾದರೂ ದಾನಿಗಳು ಇದ್ದರೆ ನಮ್ಮ ನೆರವಿಗೆ ಬರಬೇಕೆಂದು ಕೆತ್ತನೆಗಾರರ ಕುಟುಂಬಗಳು ಮನವಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next