Advertisement

ಲಾಕ್‌ಡೌನ್‌ ಸಂಕಷ್ಟದಲ್ಲೂ ಮಾವಿನಿಂದ 5 ಲ.ರೂ. ಆದಾಯ!

10:43 PM May 18, 2020 | Sriram |

ಉಡುಪಿ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಖಾಸಗಿ ಕಂಪೆನಿಗಳು ಸೇರಿದಂತೆ ಸರಕಾರದ ವಿವಿಧ ಇಲಾಖೆ ನಷ್ಟ ಅನುಭವಿಸುತ್ತಿದ್ದರೆ, ಜಿಲ್ಲೆಯ ತೋಟಗಾರಿಕೆ ಇಲಾಖೆ ಸಂಕಷ್ಟದ ಕಾಲದಲ್ಲೂ 5 ಲ.ರೂ. ಆದಾಯ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.

Advertisement

ತೋಟಗಾರಿಕೆ ಇಲಾಖೆಯಡಿ ವಿಶೇಷ ಆರೈಕೆಯಲ್ಲಿರುವ ದೊಡ್ಡಣಗುಡ್ಡೆ ಶಿವಳ್ಳಿಯ 120, ಕುಕ್ಕಂದೂರು 60, ರಾಮಸಮುದ್ರ 12, ಕುಂಭಾಶಿ 18, ಕೆದೂರು 30 ಮಾವಿನ ಮರ ಸೇರಿದಂತೆ ಒಟ್ಟು 240 ಮರಗಳು ಫ‌ಸಲುಕೊಡುತ್ತದೆ. ಕಳೆದ ಬಾರಿಗಿಂತ ಈ ಬಾರಿ ಫ‌ಸಲಿನ ಪ್ರಮಾಣ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಮಾವಿಗೆ ಉತ್ತಮ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಮಾವಿನ ಹಣ್ಣುಗಳು 5 ಲ.ರೂ. ಹರಾಜು ಆಗಿದೆ.

ಯಾವ ಮಾವು?
ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಅಪೂಸ್‌, ಕಾಲಪಾಡಿ, ಬಾದಾಮಿ ತಳಿಗಳ ಮಾವು ಬೆಳೆಯಲಾಗಿದೆ.ಕಾಲಪಾಡಿ 150 ರೂ., ಅಪೂಸ್‌ಗೆ 150 170 ರೂ., ಬಾದಾಮಿ 100 80 ರೂ., ಪ್ರತಿ ಕೆ.ಜಿಗೆ ಮಾರಾಟ ದರವಿದ್ದು, ಜಿಲ್ಲೆಯ ಮಾವಿಗೆ ಮಂಗಳೂರಿನಲ್ಲಿ ಉತ್ತಮ ಬೇಡಿಕೆ ಇದೆ.

ಮಾರಾಟ ಹೇಗೆ?
ತೋಟಗಾರಿಕೆ ಇಲಾಖೆ ತನ್ನ ಹಾರೈಕೆಯಲ್ಲಿ ಬೆಳೆದ ಯಾವುದೇ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದಿಲ್ಲ. ಸರಕಾರದ ನಿಯಾಮಾನುಸಾರ ಹರಾಜಿನ ಮೂಲಕ ಮಾರಾಟ ಮಾಡಬೇಕು. ಈ ಹಾರಾಜಿನಲ್ಲಿ ಜಿಲ್ಲೆಗಳ ದೊಡ್ಡ ವ್ಯಾಪಾರಿಗಳು ಭಾಗವಹಿಸಿ ಮಾವಿನ ಮರವನ್ನು ವಹಿಸಿಕೊಳ್ಳುತ್ತಾರೆ.

ವೆಚ್ಚವಿಲ್ಲದ ಆದಾಯ!
ಮಾವಿನ ಮರವನ್ನು ಹಾರಾಜಿನಲ್ಲಿ ಪಡೆದುಕೊಂಡ ವ್ಯಾಪಾರಿಗಳು ಬೆಳೆ ಕಟಾವು ಪರಿಕರ, ಕಾರ್ಮಿಕರು, ಸಾಗಣೆ ಸೇರಿದಂತೆ ಎಲ್ಲ ವೆಚ್ಚವನ್ನು ಅವರೇ ಭರಿಸಲ್ಲಿದ್ದಾರೆ. ಇದರಿಂದಾಗಿ ಇಲಾಖೆಗೆ ಯಾವುದೇ ಕೆಲಸ ಹಾಗೂ ಖರ್ಚು ಇಲ್ಲದೆ ಉತ್ತಮ ಆದಾಯ ಬರುತ್ತಿದೆ. ಕಳೆದ ವರ್ಷ ಅಕ್ಟೋಬರ್‌ ಸೆಪ್ಟಂಬರ್‌ವರೆಗೂ ಮಳೆಯಾದ್ದರಿಂದ ಹೊಸ ಚಿಗುರು, ಹೂ ಬರಲು ವಿಳಂಬವಾದ ಹಿನ್ನೆಲೆಯಲ್ಲಿ ಫೆಬ್ರವರಿ ಮಾರ್ಚ್‌ ತಿಂಗಳಲ್ಲಿ ಆಗಬೇಕಿದ್ದ ಮಾವಿನ ಕಟಾವು ತಡವಾಗಿದೆ. ಪ್ರಸ್ತುತ ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರಗಳಲ್ಲಿ ಕೊಯ್ಲು ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದೆ.

Advertisement

ಉತ್ತಮ ಆದಾಯ
ಜಿಲ್ಲೆಯಲ್ಲಿ 6 ತೋಟಗಾರಿಕೆ ಕ್ಷೇತ್ರಗಳಿದ್ದು, ಸಮೃದ್ದ ತೋಟಗಾರಿಕೆ ವಲಯವಾಗಿ ರೂಪುಗೊಂಡಿದೆ. ಮಾವು, ತೆಂಗು, ಚಿಕ್ಕು, ಗೇರು, ತರಕಾರಿ ಸಸಿ, ವಾಣಿಜ್ಯ ಸಸಿಗಳ ಉತ್ಪಾದನೆ, ಫಾರ್ಮ್, ರೈತ ಸೇವಾ ಕೇಂದ್ರವನ್ನು ಹೊಂದಿದೆ. ಇದರಲ್ಲಿ ಮಾವು ಉತ್ತಮ ಆದಾಯ ಬೆಳೆಯಾಗಿದೆ. ದೊಡ್ಡಣಗುಡ್ಡೆ 1.75 ಲಕ್ಷ ರೂ., ಕುಕ್ಕಂದೂರು 1.42 ಲಕ್ಷ ರೂ., ರಾಮಸಮುದ್ರ 48 ಸಾವಿರ ರೂ., ಕುಂಭಾಶಿ 72 ಸಾವಿರ ರೂ., ಕೆದೂರು 66 ಸಾವಿರ ರೂ.ಗೆ ಮಾವು ಮಾರಾಟವಾಗಿದೆ.

ಉತ್ತಮ ಬೆಲೆಗೆ ಮಾರಾಟ
ಈ ಬಾರಿ ಆಫ್ ಸೀಸನ್‌ ಆಗಿರುವುದರಿಂದ ಮಾವು ಉತ್ತಮ ಬೆಲೆಗೆ ಮಾರಾಟವಾಗಿದೆ.ಗುತ್ತಿಗೆದಾರರು ಮಾವು ಕಟಾವು ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊಯ್ಲು ಕೆಲಸ ನಡೆಸುತಿದ್ದಾರೆ. ಫಾರ್ಮ್ ಒಳಗೆ ಕಾರ್ಮಿಕರು ಮಾಸ್ಕ್, ಸ್ಯಾನಿಟೈಸರ್‌ ಕಡ್ಡಾಯ ಮಾಡಲಾಗಿದೆ.
 - ನಿದೀಶ್‌ ಕೆ.ಜೆ., ಸಹಾಯಕ ನಿರ್ದೇಶಕ,
ತೋಟಗಾರಿಕೆ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next