Advertisement

ಲಾಕ್‌ಡೌನ್‌: ಗೃಹ ಸಚಿವರಿಂದ ನಗರ ಪರಿಶೀಲನೆ

09:07 AM Jul 13, 2020 | Suhan S |

ಬೆಂಗಳೂರು: ಮಂಗಳವಾರ ರಾತ್ರಿಯಿಂದ ಜಾರಿಗೆ ಬರಲಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಭಾನುವಾರ ನಗರಾದ್ಯಂತ ಸಂಚರಿಸಿ ಪರಿಶೀಲನೆ ನಡೆಸಿದರು. ಸಿರ್ಸಿ ವೃತ್ತ, ಮೆಜೆಸ್ಟಿಕ್‌, ಮಲ್ಲೇಶ್ವರಂ, ಯಶವಂತಪುರ, ಆರ್‌ಎಂಸಿ ಯಾರ್ಡ್‌, ಕಲಾಸಿಪಾಳ್ಯ, ಮಾರುಕಟ್ಟೆ, ಪೀಣ್ಯ ಸೇರಿ ನಗರದ ಪ್ರಮುಖ ಪ್ರದೇಶ ಹಾಗೂ ನಗರದ ಗಡಿ ಭಾಗಗಳಲ್ಲಿ ಸಂಚರಿಸಿ, ಕೆಲವೊಂದೆಡೆ ಸ್ಥಳ ಪರಿವೀಕ್ಷಣೆ ನಡೆಸಿದರು.

Advertisement

ಜು.14ರಿಂದ ಆರಂಭವಾಗುವ ಲಾಕ್‌ಡೌನ್‌ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು. ಈ ಹಿಂದಿನ ಲಾಕ್‌ ಡೌನ್‌ ವೇಳೆ ಏನೆಲ್ಲಾ ಕಾನೂನು ಕ್ರಮ ಕೈಗೊಳ್ಳಲಾಗಿತ್ತೋ ಎಲ್ಲವನ್ನೂ ಕೈಗೊಂಡು ಸೂಕ್ತ ನಿರ್ದೇಶನ ನೀಡಬೇಕು ಎಂದು ಪೊಲೀಸ್‌ ಆಯುಕ್ತರು, ಇತರೆ ಅಧಿಕಾರಿಗಳಿಗೆ ತಿಳಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸೋಂಕು ಹೆಚ್ಚಾಗುತ್ತಿದ್ದು, ಪೊಲೀಸ್‌ ಇಲಾಖೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಿಂದೆ ಮೊದಲ ಲಾಕ್‌ಡೌನ್‌ ವೇಳೆ ಹಾಗೂ ಲಾಕ್‌ ಡೌನ್‌ ತೆರವು ನಂತರ ಪೊಲೀಸರ ಜವಾಬ್ದಾರಿ ಹೆಚ್ಚಾಗಿದೆ. ಸರ್ಕಾರ ಆದೇಶದ ಅನ್ವಯ ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾನೂನು ಸುವ್ಯವಸ್ಥೆ –ಅಪರಾಧ ನಿಯಂತ್ರಣ ಮಹತ್ವದಾಗಿದೆ. ಈ ಕರ್ತವ್ಯದ ವೇಳೆ ಸಾರ್ವಜನಿಕರ ಸಂಪರ್ಕ ಹೆಚ್ಚಿರುತ್ತದೆ. ಹೀಗಾಗಿ ಪೊಲೀಸರ ಕಾರ್ಯ ವಿಧಾನದಲ್ಲಿ ಬದಲಾವಣೆ ಅನಿವಾರ್ಯ ಎಂದು ಹೇಳಿದರು.

2ನೇ ವಾರದ ಲಾಕ್‌ಡೌನ್‌ ಹಿನ್ನೆಲೆ ನಗರಾದ್ಯಂತ ಸಂಚರಿಸಲಾಯಿತು. ಕೋವಿಡ್ ಅಧಿಕ ಇರುವ ಜಿಲ್ಲೆಗಳಲ್ಲೂ ಲಾಕ್‌ಡೌನ್‌ ಕುರಿತು ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. 1 ವಾರ ಲಾಕ್‌ ಡೌನ್‌ ಬೇಕೋ ಬೇಡವೋ ಸೇರಿ ಎಲ್ಲಾ ವಿಚಾರ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

 

ಪೊಲೀಸರಿಗೆ ಕೆಲವು ಸೌಲಭ್ಯ :

  • ಆರೋಗ್ಯ ಭಾಗ್ಯದಡಿ ಹಣವನ್ನು ಎಲ್ಲಾ ನಿಯೋಜಿತ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಿ ನಿಯೋಜಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು.
  • ಪ್ರತಿಯೊಬ್ಬ ಪೊಲೀಸ್‌ ಸಿಬ್ಬಂದಿ ಪಾಳಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಬೇಕು.
  •  ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಠಾಣೆಗಳಿಗೆ ಅವಶ್ಯಕತೆ ಇರುವ ಸಿಬ್ಬಂದಿ ಮಾತ್ರ ನಿಯೋಜಿಸಬೇಕು.
  • ಸಾರ್ವಜನಿಕರ ದೂರುಗಳನ್ನು ಆನ್‌ ಲೈನ್‌ ಮೂಲಕ ಸ್ವೀಕರಿಸಿ ದಾಖಲಾದ ದೂರು ವಿಚಾರಣೆ ಮಾಡುವಂತೆ ಸೂಚಿಸಲಾಗಿದೆ.
  • 50 ವರ್ಷ ಮೇಲ್ಪಟ್ಟ ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಬೇಕು.
  • ಕರ್ತವ್ಯ ಮುಗಿದ ನಂತರ ಸಿಬ್ಬಂದಿ ಹಾಗೂ ಠಾಣೆಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಆಗಬೇಕು. ಅದಕ್ಕಾಗಿ ಬೇಕಾಗುವ ಹಣಕಾಸಿನ ನೆರವು ನೀಡಲಾಗುವುದು.
  •  ಠಾಣೆಗಳಲ್ಲಿ ಸ್ವಾಗತಕಾರರ ಸ್ಥಳಗಳಲ್ಲಿ ಗಾಜಿನ ಕ್ಯಾಬಿನೆಟ್‌ ಅಳವಡಿಸಿ ದೂರು ಸ್ವೀಕರಿಸುವಂತೆ ನಿರ್ದೇಶನ ನೀಡಲಾಗಿದೆ.
  •  ಆಸ್ಪತ್ರೆ ಹಾಗೂ ಸ್ಮಶಾನ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸ್ಕ್, ಹೆಡ್‌ ಗ್ಲೆರ್‌, ಗ್ಲೌಸ್‌ ಹಾಗೂ ಪಿಪಿಇ ಕಿಟ್‌ ಒದಗಿಸಲಾಗುವುದು.
  •  ಪೊಲೀಸರ ರೋಗ-ನಿರೋಧಕ ಶಕ್ತಿ ವೃದ್ಧಿಸಲು ಆಯುರ್ವೇದಿಕ್‌ ಔಷಧಿ ನೀಡಲು ಸೂಚಿಸಲಾಗಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next