ಬೆಂಗಳೂರು: ಕೋವಿಡ್ 19 ನಿಯಂತ್ರಿಸುವಲ್ಲಿ ಸರ್ಕಾರ ಶಕ್ತಿ ಮೀರಿ ಶ್ರಮಿಸುತ್ತಿದ್ದು ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಅವಶ್ಯಕತೆ ಇಲ್ಲ. ಪ್ರಧಾನಿ ಅವರೊಂದಿಗಿನ ಸಂವಾದ ವೇಳೆ ಇನ್ನಷ್ಟು ಸಡಿಲಿಕೆಗೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಸ್ವಾಮಿ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಮಂಗಳವಾರ ಕೋವಿಡ್ 19 ಮುಕ್ತಿಗಾಗಿ ಶಂಕರ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀಧನ್ವಂತರಿ ಮಹಾ ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದನಡೆಸಲಿದ್ದಾರೆಂದರು. ಅಲ್ಲದೇ, ಕೋವಿಡ್ ಕಾಟದಿಂದ ತಪ್ಪಿಸಿಕೊಳ್ಳಲು ಸಲುವಾಗಿ ಸರ್ಕಾರ ಬೀಗಿ ಕ್ರಮ ಕೈಗೊಂಡಿದ್ದು ಕೋವಿಡ್ 19 ಪರೀಕ್ಷೆ ಹೆಚ್ಚಳ ಮಾಡಿದೆ. ಇನ್ನು ಕೋವಿಡ್ ಹೆಚ್ಚು ಪರೀಕ್ಷೆ ಮಾಡಿರುವ ರಾಜ್ಯ ಕರ್ನಾಟಕ ಎಂದರು.
ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲ. ಆದರೂ ರೈತರು ನೆಮ್ಮದಿಯಿಂದ ಬದುಕಲು ಸರ್ಕಾರ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 50 ಲಕ್ಷ ರೈತರಿಗೆ ತಲಾ 2 ಸಾವಿರ ರೂ.ನೀಡಲಾಗುವುದು. ಕೇಂದ್ರ ಸರ್ಕಾರ ವೂ 6 ಸಾವಿರ ರೂ.ನೀಡಲಿದೆ ಎಂದರು. ಕೋವಿಡ್-19 ನಿಂದ ರಾಜ್ಯ ಮುಕ್ತ ವಾಗಬೇಕು. ಜನ ನೆಮ್ಮದಿಯಿಂದ ಜೀವನ ನಡೆಸಬೇಕು. ಹೀಗಾಗಿ ಪೂಜೆ ಸಲ್ಲಿಕೆ ಮಾಡಲಾಗಿದೆ ಎಂದರು.
ಪರಿಷತ್ ಸ್ಥಾನದ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿ, ಕೇಂದ್ರದ ನಾಯಕರು ಪರಿಷತ್ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆಂದರು. ವೇದ ಬ್ರಹ್ಮ ಭಾನುಪ್ರಕಾಶ ಶರ್ಮಾ ಮಾತನಾಡಿ, 25 ವೈದಿಕರ ತಂಡ ಮಹಾಯಾಗದಲ್ಲಿ ಭಾಗವಹಿಸಿ ಕೋವಿಡ್ 19 ಶಮನಕ್ಕೆ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು. ಸಚಿವರಾದ ಸಿ.ಟಿ.ರವಿ, ಡಾ.ಸುಧಾಕರ್, ಸಂಸದ ತೇಜಸ್ವಿಸೂರ್ಯ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮತ್ತಿತರರಿದ್ದರು.