Advertisement

ದುರಸ್ತಿ ನೆಪದಲ್ಲಿ ಶೌಚಾಲಯಕ್ಕೆ ಬೀಗ: ಮಹಿಳೆಯರ ಸಂಕಟ

10:23 AM Jun 29, 2018 | |

ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ನೇತಾಜಿ ನಗರದಲ್ಲಿರುವ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಕಳೆದ 15 ದಿನಗಳಿಂದ ಬೀಗ ಬಿದ್ದಿದ್ದು, ಬಡಾವಣೆ ಮಹಿಳೆಯರು ಪರದಾಡುವಂತಾಗಿದೆ. ಶೌಚಾಲಯ ದುರಸ್ತಿಯಾಗುವ
ವರೆಗೆ ಮಹಿಳೆಯರು ಊಟ ಮಾಡಲು ಸಹ ಹಿಂದೆ ಮುಂದೆ ನೋಡುವಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ.

Advertisement

ಶುಚಿತ್ವವಿಲ್ಲದೆ ಶೌಚಾಲಯ ಗಬ್ಬು ನಾರುತ್ತಿದೆ. ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಹಾಗೂ
ವಾರ್ಡ್‌ ಸದಸ್ಯ ಭೀಮಶಾ ಜಿರೊಳ್ಳಿ ಸಲ್ಲಿಸಿದ ದೂರಿನ ಮೇರೆಗೆ ಪುರಸಭೆ ಅಧಿಕಾರಿಗಳು ಶೌಚಾಲಯಕ್ಕೆ ಬೀಗ
ಹಾಕಿದ್ದಾರೆ. ಶೌಚ ಕೋಣೆಗಳ ಪೈಪ್‌ಲೈನ್‌ ಕಾಮಗಾರಿ ನೆಲಕಚ್ಚಿದೆ. ಸೆಪ್ಟಿಕ್‌ ಟ್ಯಾಂಕ್‌ ಸ್ವತ್ಛವಾಗಿಲ್ಲ. ಮಲ ಮೂತ್ರಗಳಿಂದ ದುರ್ಗಂಧದ ತಾಣವಾಗಿರುವ ಶೌಚಾಲಯದೊಳಗಿನ ಆರು ಕೋಣೆಗಳು ದುರಸ್ತಿಗೊಳಿಸಲಾಗಿಲ್ಲ. ವಿವಿಧ ಕಾರಣಕ್ಕೆ ದುರಸ್ತಿ ಕಾರ್ಯ ವಿಳಂಬವಾಗುತ್ತಿದ್ದು, ನಾವು ದಿನವೂ ಹಿಂಸೆ ಅನುಭವಿಸುವಂತಾಗಿದೆ ಎಂದು ಮಹಿಳೆಯರು ದೂರಿದ್ದಾರೆ.

ದುರಸ್ತಿ ಹೆಸರಿನಲ್ಲಿ ಕಳೆದ ಎರಡು ವಾರದಿಂದ ಪುರಸಭೆಯವರು ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ
ಮಲ ಮೂತ್ರಕ್ಕೆ ತೊಂದರೆಯಾಗುತ್ತಿದೆ. ಮಲ್ಲಿಕಾರ್ಜುನ ಗುಡಿ ಏರಿಯಾ, ಪಿಲಕಮ್ಮ ಏರಿಯಾ ಹಾಗೂ ರಾಡಿಪಟ್ಟಿ
ಬಡಾವಣೆಗಳ ಮಹಿಳೆಯರು ನೇತಾಜಿ ನಗರದ ಸಾರ್ವಜನಿಕ ಶೌಚಾಲಯವನ್ನೆ ಅವಲಂಭಿಸಿದ್ದಾರೆ. ನಿರ್ವಹಣೆ
ಕೊರತೆಯಿಂದ ಶೌಚಾಲಯದಿಂದ ಪದೇ ಪದೇ ಗಬ್ಬುನಾತ ಹರಡುತ್ತದೆ. 

ಹಗಲು ಹೊತ್ತಿನಲ್ಲಿ ಸಂಕಟ ಅನುಭವಿಸಿ ರಾತ್ರಿ ವೇಳೆ ಬಯಲು ಪ್ರದೇಶಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಯುವತಿಯರು ಬಯಲು ಶೌಚಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸಂಜೆ ಕತ್ತಲಾಗುತ್ತಿದ್ದಂತೆ ಹಾಗೂ ಬೆಳಗಿನಜಾವ ಮುಖ್ಯ ರಸ್ತೆ ಬದಿಯಲ್ಲಿ ಮಲಬಾಧೆ ತೀರಿಸಿಕೊಳ್ಳಬೇಕಾದ ಹೀನಾಯ ಸ್ಥಿತಿ ಎದುರಾಗಿದೆ. ಪುರಸಭೆ ಅಧಿಕಾರಿಗಳು ದುರಸ್ತಿ ಕಾರ್ಯ ಬೇಗ ಪೂರ್ಣಗೊಳಿಸುತ್ತಿಲ್ಲ ಎಂದು ನೇತಾಜಿ ನಗರ ನಿವಾಸಿಗಳಾದ ಶಾರದಾಬಾಯಿ ಹೊನಗುಂಟಿಕರ, ಮುಮ್ತಾಜ್‌ ಬೇಗಂ, ಸಲ್ಮಾ ಬೇಗಂ, ಗಂಗಮ್ಮ ಚಿತ್ತಾಪುರ, ಮಲ್ಲಮ್ಮ ಅರಿಕೇರಿ, ಶೇಖ ಝೈರಾಬಿ, ಮಹೆಬೂಬೀ, ನರಸಪ್ಪ ಅರಿಕೇರಿ ದೂರಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next