Advertisement

ಲಾಕ್‌ಡೌನ್‌: ಉಡುಪಿ ಜಿಲ್ಲೆ ಬಹುತೇಕ ಸ್ತಬ್ಧ

11:59 PM Jul 05, 2020 | Sriram |

ಉಡುಪಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ ಸೋಂಕು ಮಟ್ಟ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ರವಿವಾರ ಲಾಕ್‌ಡೌನ್‌ ಘೋಷಣೆ ಮಾಡಿರುವುದಕ್ಕೆ ಉಡುಪಿ ಜಿಲ್ಲೆಯಾ ದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಬಂದ್‌ ಆಚರಿಸಿ ಸರಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.

Advertisement

ನಗರದ ಪ್ರಮುಖ ಭಾಗಗಳಾದ ಕಲ್ಸಂಕ, ಸಿಟಿ ಬಸ್‌ ನಿಲ್ದಾಣ, ಸರ್ವಿಸ್‌ ಬಸ್‌ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಕೆ.ಎಂ. ಮಾರ್ಗ, ಕರಾವಳಿ ಬೈಪಾಸ್‌, ಬ್ರಹ್ಮಗಿರಿ ವೃತ್ತಗಳಲ್ಲಿ ಜನರ ಓಡಾಟ ಬಹುತೇಕ ವಿರಳವಾಗಿತ್ತು. ಆಸ್ಪತ್ರೆ, ಮೆಡಿಕಲ್‌ ಶಾಪ್‌ ಗಳು, ಆ್ಯಂಬುಲೆನ್ಸ್‌, ಪೆಟ್ರೋಲ್‌ ಬಂಕ್‌ಗಳು, ಸರಕು ಸಾಗಾಣಿಕೆ ವಾಹನ, ಪೊಲೀಸ್‌, ಅಗ್ನಿಶಾಮಕ ಸೇವೆಗಳು ಲಭ್ಯವಾಗಿದ್ದವು. ಉಳಿದಂತೆ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿತ್ತು.

ಎಲ್ಲ ಮಳಿಗೆಗಳೂ ಬಂದ್‌
ನಗರದ ಮಾಲ್‌ಗ‌ಳು, ಜುವೆಲರಿ ಶಾಪ್‌ಗಳು, ತರಕಾರಿ, ಮಾಂಸದ ಅಂಗಡಿ, ಬೇಕರಿ, ಹೊಟೇಲ್‌, ಎಲೆಕ್ಟ್ರಾನಿಕ್‌ ಮಳಿಗೆ, ಫ್ಯಾನ್ಸಿ ಅಂಗಡಿ, ಝೆರಾಕ್ಸ್‌ ಅಂಗಡಿ, ಶೋರೂಂಗಳೆಲ್ಲ ಬಂದ್‌ ಆಗಿದ್ದವು. ರವಿವಾರ ಸದಾ ಜನರಿಂದ ತುಂಬಿರುತ್ತಿದ್ದ ಸಂತೆಕಟ್ಟೆಯ ಸಂತೆಯೂ ಇರಲಿಲ್ಲ. ಶನಿವಾರವೇ ಸಂತೆ ನಡೆದ ಕಾರಣ ಗ್ರಾಹಕರು ಅಗತ್ಯ ವಸ್ತು ಗಳನ್ನೆಲ್ಲ ಅಂದೇ ಖರೀದಿ ಮಾಡಿದ್ದರು. ಈ ಮೂಲಕ ಎಲ್ಲರೂ ಬಂದ್‌ಗೆ ಬೆಂಬಲ ಸೂಚಿಸಿದರು.

ವಾಹನ ಸಂಚಾರ ಸಂಪೂರ್ಣ ಸ್ತಬ್ಧ
ರವಿವಾರ ಬಸ್‌, ಆಟೋರಿಕ್ಷಾ ಸಹಿತ ಯಾವುದೇ ವಾಹನಗಳ ಸಂಚಾರ ಇರಲಿಲ್ಲ. ವೈದ್ಯರು ಸಹಿತ ಕೆಲವೊಂದು ತುರ್ತು ಕಾರಣಗಳಿಗೆ ತೆರಳುವವರು ಮಾತ್ರ ಸಂಚಾರ ಮಾಡುತ್ತಿದ್ದರು.

ಉಳಿದಂತೆ ಇಡೀ ನಗರವೇ ಸಂಪೂರ್ಣ ಸ್ತಬ್ಧವಾಗಿತ್ತು. ಸಿಟಿ, ಸರ್ವೀಸ್‌, ಕೆಎಸ್ಸಾರ್ಟಿಸಿ ಬಸ್ಸುಗಳ ಸಂಚಾರವೂ ಇರಲಿಲ್ಲ.

Advertisement

ವಲಸೆ ಕಾರ್ಮಿಕರಿಗಿಲ್ಲ ನೆಲೆ
ಈ ಹಿಂದೆ ಇದ್ದ ತಿಂಗಳ ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಊಟ-ವಸತಿಗಳನ್ನು ಒದಗಿಸಲಾಗಿತ್ತು. ಆದರೆ ರವಿವಾರ ಹಲವೆಡೆಗಳಲ್ಲಿ ವಲಸೆ ಕಾರ್ಮಿಕರು-ಭಿಕ್ಷುಕರು ಬಸ್‌ಸ್ಟಾಂಡ್‌, ಕರಾವಳಿ ಬೈಪಾಸ್‌ಗಳಲ್ಲಿ ಕಂಡುಬಂದರು.

ಮಣಿಪಾಲ
ಮಣಿಪಾಲ ಆಸ್ಪತ್ರೆಯಲ್ಲಿ ತುರ್ತು ಸೇವೆಗೆ ಒಪಿಡಿ ಸೇವೆ ಲಭ್ಯವಿತ್ತು. ಟ್ಯಾಕ್ಸಿ, ಆಟೋ, ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟವಿರಲಿಲ್ಲ. ಪೇಟೆಯಲ್ಲಿ ಜನ ಸಂಚಾರ, ವಾಹನ ಓಡಾಟವಿರಲಿಲ್ಲ. ಮಣಿಪಾಲ-ಉಡುಪಿ ಮಧ್ಯೆ ಸರಕಾರಿ ಖಾಸಗಿ ವಾಹನಗಳು ಓಡಾಡಲಿಲ್ಲ. ಅಂಗಡಿ ಮುಂಗಟ್ಟು, ಹೊಟೇಲು ತೆರೆದಿರಲಿಲ್ಲ.

ಪಡುಬಿದ್ರಿ
ಜನತೆ ಸಂಪೂರ್ಣ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದ್ದರು. ಹೆಜಮಾಡಿ ಟೋಲ್‌ಗೇಟ್‌ನಲ್ಲೂ ವಾಹನ ಸಂಚಾರ ವಿರದೆ ಬಿಕೋ ಅನ್ನುತ್ತಿತ್ತು.

ಬ್ರಹ್ಮಾವರ
ಅಗತ್ಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್‌, ಪೆಟ್ರೋಲ್‌ ಪಂಪ್‌ ಇತ್ಯಾದಿ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಮುಚ್ಚಿದ್ದವು.

ಕಾಪು
ಆಯಕಟ್ಟಿನ ಪ್ರದೇಶಗಳಲ್ಲಿ ಬಿಗು ಪೊಲೀಸ್‌ ಬಂದೊಬಸ್ತ್ ಏರ್ಪಡಿಸ ಲಾಗಿದ್ದು ಅಂಗಡಿ- ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದವು.

ಮಲ್ಪೆ
ಒಂದೆರಡು ಮೆಡಿಕಲ್‌ ಶಾಪ್‌ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವಾಹನ ಮತ್ತು ಜನರು ರಸ್ತೆಗೆ ಇಳಿಯಲಿಲ್ಲ.

ಕಟಪಾಡಿ
ಉದ್ಯಾವರ, ಕೋಟೆ, ಕುರ್ಕಾಲು, ಮಣಿಪುರ ವ್ಯಾಪ್ತಿಯಲ್ಲಿ ಹಾಲು, ಮೆಡಿಕಲ್‌, ದಿನಪತ್ರಿಕೆ ಮಾರಾಟ ಹೊರತು ಪಡಿಸಿ ಬಹುತೇಕ ಬಂದ್‌ ಮೂಲಕ ಜನಜೀವವೇ ಸ್ತಬ್ಧಗೊಂಡಿದ್ದು, ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕೋಟ
ಸಾಸ್ತಾನ, ಸಾಲಿಗ್ರಾಮ, ಕೋಟ, ಮಧುವನ, ಸಾೖಬ್ರಕಟ್ಟೆ, ಶಿರಿಯಾರ, ಶಿರೂರುಮೂರುಕೈ ಪ್ರದೇಶದ ಪ್ರದೇಶದ ಎಲ್ಲ ಅಂಗಡಿ ಮುಂಗಟ್ಟು ಬೆಳಗ್ಗೆಯಿಂದ ಬಂದ್‌ ಆಗಿದ್ದವು. ಮೆಡಿಕಲ್‌ ಸ್ಟೋರ್, ಹಾಲು, ಮಾಂಸದಂಗಡಿಗಳ ಕಾರ್ಯಾ ಚರಣೆಗೆ ಅವಕಾಶವಿದ್ದರೂ ಕೂಡ ಭಾಗಶಃ ಮುಚ್ಚಿದ್ದವು.

ಸಿದ್ದಾಪುರ
ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಕಮಲಶಿಲೆ, ಆಜ್ರಿ, ಅಂಪಾರು, ಶಂಕರನಾರಾಯಣ, ಅಮಾಸೆಬೈಲು, ಹಾಲಾಡಿ, ಗೋಳಿಯಂಗಡಿ, ಆವರ್ಸೆ, ವಂಡಾರು, ಹಿಲಿಯಾಣ, ಬೆಳ್ವೆ, ಆರ್ಡಿ, ಶೇಡಿಮನೆ, ಅರಸಮ್ಮಕಾನು, ಹೆಂಗವಳ್ಳಿ, ತೊಂಬತ್ತು, ಮಡಾಮಕ್ಕಿ, ಉಳ್ಳೂರು-74 ಸೇರಿದಂತೆ ಇನ್ನಿತರ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿ ಸಂಪೂರ್ಣ ಸ್ವಯಂಕೃತ ಬೆಂಬಲ ಸೂಚಿಸಿದರು.

ಪೊಲೀಸರಿಂದ ಎಚ್ಚರಿಕೆ
ನಗರದ ಆಯಕಟ್ಟಿನ ಕೆಲವು ಭಾಗಗಳಲ್ಲಿ ಪೊಲೀಸರು ಗಸ್ತು ನಿರತರಾಗಿ ದ್ದರು. ವಿನಾ ಕಾರಣ ತೆರಳುತ್ತಿದ್ದವರಿಗೆ ಎಚ್ಚರಿಕೆ ನೀಡುತ್ತಿದ್ದರು. ಸಂತೆಕಟ್ಟೆ, ಕಲ್ಸಂಕ ವೃತ್ತ, ಸಿಟಿ ಬಸ್‌ ನಿಲ್ದಾಣದ ಬಳಿ ಪೊಲೀಸರು ಕರ್ತವ್ಯ ನಿರತರಾಗಿದ್ದರು. ಬೆಳಗ್ಗೆ ಅಂಗಡಿ-ಮುಂಗ್ಗಟ್ಟುಗಳನ್ನು ಮುಚ್ಚುವಂತೆ ಪೊಲೀಸ್‌ ಗಸ್ತು ವಾಹನದಲ್ಲಿ ಜಾಗೃತಿ ಮೂಡಿಸ ಲಾಯಿತು.

ಕಾರ್ಕಳ ತಾಲೂಕು: ಸಂಪೂರ್ಣ ಯಶಸ್ವಿ
ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ರವಿವಾರ ಲಾಕ್‌ಡೌನ್‌ ಸಂಪೂರ್ಣ ಯಶಸ್ವಿಯಾಗಿತ್ತು. ನಗರದಲ್ಲಿ ಯಾವುದೇ ಬಸ್‌, ಆಟೋರಿಕ್ಷಾ ಸಹಿತ ಇತರ ವಾಹನ ಸಂಚಾರ ಇರಲಿಲ್ಲ. ಔಷಧ ಅಂಗಡಿಗಳು ಮಾತ್ರ ತೆರೆದಿದ್ದವು. ಮುಂಡ್ಕೂರು, ಬೆಳ್ಮಣ್‌, ಬೋಳ, ನಂದಳಿಕೆ ಇನ್ನಾ ಭಾಗಗಳಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪರಿಪಾಲನೆ ಗೊಂಡಿದೆ. ಬೆಳ್ಮಣ್‌, ಮುಂಡ್ಕೂರಿನಲ್ಲಿ ಔಷಧಾಲಯ ಮಾತ್ರ ತೆರೆದಿದ್ದು ಕೆಲವೆಡೆ ಹಾಲು ಮಾರಾಟ ಇತ್ತು. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿ ಹಾಗೂ ಸಿಬಂದಿಗಳು ವಿಶೇಷ ಗಸ್ತು ನಡೆಸಿದ್ದರು. ಮುಂಡ್ಕೂರಿನ ಕೆಲವೆಡೆ ಕೃಷಿಕರು ಕೋವಿಡ್‌ ಲೆಕ್ಕಿಸದೆ ಕೃಷಿಯಲ್ಲಿ ತೊಡಗಿದ್ದರು.

ಹೆಬ್ರಿ ಸರ್ಕಲ್‌ ಬಳಿ ಯಾವುದೇಅಂಗಡಿ, ವಾಹನ ಹಾಗೂ ಜನಸಂಚಾರ ವಿಲ್ಲದೆ ಸ್ತಬ್ಧವಾಗಿತ್ತು. ದಿನವಿಡಿ ಮಳೆ ಆರ್ಭಟ ಒಂದೆಡೆಯಾದರೆ ಬಿಕೋ ಎನ್ನುತ್ತಿರುವ ರಸ್ತೆಗಳು ಕಂಡುಬಂತು.

ಕುಂದಾಪುರ: ಸಂಪೂರ್ಣ ಬಂದ್‌
ಕುಂದಾಪುರ: ರಾಜ್ಯ ಸರಕಾರದ ಆದೇಶದಂತೆ ರವಿವಾರದ ಒಂದು ದಿನದ ಲಾಕ್‌ಡೌನ್‌ಗೆ ಕುಂದಾಪುರ – ಬೈಂದೂರು ಭಾಗದ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತ ವಾಗಿದೆ. ನಗರದಲ್ಲಿ ರವಿವಾರ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್‌ ಅನುಷ್ಠಾನ ಆಗಿದೆ.

ಸಂಗಮ್‌ ಬಳಿಯಿಂದ ಚಿಕನ್‌ ಸಾಲ್‌ ರಸ್ತೆ ಮೂಲಕ ನಗರ ಪ್ರವೇಶಿಸುವಲ್ಲಿ ಪೊಲೀಸ್‌ ಸಿಬಂದಿ ನಿಯೋಜಿಸಲಾಗಿತ್ತು. ಉಳಿದಂತೆ ಈ ಹಿಂದಿನ ಲಾಕ್‌ಡೌನ್‌ ಸಂದರ್ಭದಂತೆ  ಶಾಸ್ತ್ರೀ  ಸರ್ಕಲ್‌ ಬಳಿ ಪೊಲೀಸ್‌ ಗಸ್ತು ಇರಲಿಲ್ಲ. ಅಡೆತಡೆಯೂ ಇರಲಿಲ್ಲ. ಹಾಗಿದ್ದರೂ ಜನ ಸ್ವಯಂ ಆಗಿ ಲಾಕ್‌ಡೌನ್‌ ನಿಯಮ ಪಾಲಿಸಿದ್ದರು.

ಚಿಕನ್‌ಸಾಲ್‌ ರಸ್ತೆಯಲ್ಲಿ ಮಾಂಸದಂಗಡಿಯೊಂದು ತೆರೆದು ಜನಜಂಗುಳಿ ಸೇರಿದ್ದಾಗ ಅಲ್ಲಿಗೆ ಆಗಮಿಸಿದ ಹೊಯ್ಸಳ ಗಸ್ತುವಾಹನದ ಪೊಲೀಸರು ಅಂಗಡಿ ಬಾಗಿಲು ಹಾಕಿಸಿದರು. ಉಳಿದಂತೆ ಮೆಡಿಕಲ್‌ ಹೊರತಾಗಿ ಬೇರೆ ಯಾವುದೇ ಅಂಗಡಿ, ಮಳಿಗೆಗಳು ಬಾಗಿಲು ತೆರೆಯಲಿಲ್ಲ. ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ, ತ್ರಾಸಿ, ಮರವಂತೆ, ಗುಜ್ಜಾಡಿ, ಮುಳ್ಳಿಕಟ್ಟೆ, ಹಕ್ಲಾಡಿ, ಆಲೂರು, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಅಮಾಸೆಬೈಲು ಸೇರಿದಂತೆ ಎಲ್ಲ ಕಡೆಗಳಲ್ಲಿ ಬಹುತೇಕ ಎಲ್ಲ ಅಂಗಡಿ – ಮುಂಗಟ್ಟುಗಳು ಮುಚ್ಚಿದ್ದವು. ಜನ, ವಾಹನ ಸಂಚಾರವು ಹೆಚ್ಚಿರಲಿಲ್ಲ.

ನಾಟಿ ಕಾರ್ಯ ಬಿರುಸು
ರವಿವಾರದ ಲಾಕ್‌ಡೌನ್‌ ಮುಂಗಾರು ಹಂಗಾಮಿನ ನಾಟಿ ಕಾರ್ಯಕ್ಕೆ ತೊಡಕಾಗಿಲ್ಲ. ಅನೇಕ ಕಡೆಗಳಲ್ಲಿ ಗದ್ದೆ ನಾಟಿ ಕೆಲಸ ಎಂದಿನಂತಿತ್ತು. ಕೆಲವೆಡೆಗಳಲ್ಲಿ ನೇಜಿ ನೆಡುವ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡುತ್ತಿದ್ದುದು ವಿಶೇಷವಾಗಿತ್ತು.

ತೆಕ್ಕಟ್ಟೆ
ತೆಕ್ಕಟ್ಟೆ/ಕೊಲ್ಲೂರು: ತಾಲೂಕಿನ ಗ್ರಾಮೀಣ ಭಾಗಗಳಾದ ಬಿದ್ಕಲ್‌ಕಟ್ಟೆ, ಹುಣ್ಸೆಮಕ್ಕಿ, ಮೊಳಹಳ್ಳಿ, ದಬ್ಬೆಕಟ್ಟೆ,ಹೆಸ್ಕಾತ್ತೂರು,  ಕೊರ್ಗಿ, ಬೇಳೂರು, ಕೆದೂರು, ಕುಂಭಾಸಿ, ತೆಕ್ಕಟ್ಟೆ, ಕೊಲ್ಲೂರಿನ ಜಡ್ಕಲ್‌, ಮುಧೂರು, ವಂಡ್ಸೆ, ಕೆರಾಡಿ, ಇಡೂರು, ಹೊಸೂರು, ಚಿತ್ತೂರು, ಕೋಟೇಶ್ವರ, ಬೀಜಾಡಿ, ಗೋಪಾಡಿ, ವಕ್ವಾಡಿ, ಕಾಳಾವರ ಸುತ್ತಮುತ್ತ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್‌ ಆಗಿತ್ತು.

ಗಂಗೊಳ್ಳಿ/ ಬಸ್ರೂರು
ಗಂಗೊಳ್ಳಿ: ಲಾಕ್‌ಡೌನ್‌ನಿಂದಾಗಿ ಗಂಗೊಳ್ಳಿ, ಬಸ್ರೂರಿನ ಬಳ್ಕೂರು, ಬಸ್ರೂರು, ಕಂಡ್ಲೂರು, ಗುಲ್ವಾಡಿ, ಕೋಣಿ, ಕಂದಾವರ, ಜಪ್ತಿ, ಆನಗಳ್ಳಿ ಮತ್ತಿತರ ಪ್ರದೇಶಗಳಲ್ಲಿ, ಜನ ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಉಳಿದರು. ಬಸ್ರೂರು, ಕಂಡ್ಲೂರಿನಲ್ಲಿ ಔಷಧ ಅಂಗಡಿ, ಆಸ್ಪತ್ರೆ ಖಾಸಗಿ ವೈದ್ಯರು ಬಾಗಿಲು ತೆರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next