ಬೆಂಗಳೂರು: ಏಪ್ರಿಲ್ 14ರ ವರೆಗೆ ಆದೇಶಿಸಲಾಗಿದ್ದ ಲಾಕ್ ಡೌನ್ ಅನ್ನು ಮುಂದಿನ ಎರಡು ವಾರಗಳ ಕಾಲ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ 30ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಏಪ್ರಿಲ್ 14ರ ನಂತರ ಲಾಕ್ ಡೌನ್ ಭಿನ್ನವಾಗಿರಲಿದೆ. ಅದರ ಮಾರ್ಗಸೂಚಿಯನ್ನು ಎರಡು ದಿನಗಳ ನಂತರ ತಿಳಿಸಲಾಗುವುದು ಎಂದರು
ಇಂದು ಬೆಳಿಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಲಾಕ್ ಡೌನ್ ಕುರಿತ ಬಗ್ಗೆ ಚರ್ಚೆ ನಡೆಸಿದ ಬಿ ಎಸ್ ಯಡಿಯೂರಪ್ಪ ಅವರು ಮಾಹಿತಿಗಳನ್ನು ಹಂಚಿದರು.
ಇನ್ನೂ ಎರಡು ವಾರ ಲಾಕ್ ಡೌನ್ ಅನಿವಾರ್ಯ. ಜೊತೆಗೆ ಎರಡು ವಾರದ ಲಾಕ್ ಡೌನ್ ಭಿನ್ನವಾಗಿರಲಿದೆ. ಜನತೆ ಸಹಕರಿಸಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿ ಬಂದ ನಂತರ ಅನುಮತಿ ಸಿಕ್ಕರೆ ಎಂಎಸ್ ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಹಾಗೂ ಸಮುದಾಯದಲ್ಲಿ ಹರಡುವ ಸಾಧ್ಯತೆಗಳ ಕುರಿತು ಪ್ರಧಾನ ಮಂತ್ರಿಯವರು ಕಳವಳ ವ್ಯಕ್ತಪಡಿಸಿದರು. ಹಾಟ್ ಸ್ಪಾಟ್ ಗಳನ್ನು ಗುರುತಿಸಿ, ಸೀಲ್ ಡೌನ್ ಮಾಡುವ ಮೂಲಕ ಹಾಗೂ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯಗಳು ಮಾಡುತ್ತಿರುವ ನಿಯಂತ್ರಣದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರವೇ ಯಶಸ್ವಿಯಾಗಲು ಸಾಧ್ಯ ಎಂದು ಪ್ರಧಾನಿ ಹೇಳಿದರು ಎಂದು ಬಿ ಎಸ್ ವೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಈ ವರೆಗೆ 2.84 ಲಕ್ಷ ಪಿಪಿಇ ಕಿಟ್ ಗಳನ್ನು ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲಾಗುವುದು. ಪ್ರತಿ ಎರಡು ದಿನಗಳಿಗೊಮ್ಮೆ 2 ಲಕ್ಷ ಮಾಸ್ಕ್ ಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 220 ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಏಪ್ರಿಲ್ 30 ರ ವೇಳೆಗೆ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು 300 ಕ್ಕೆ ಹೆಚ್ಚಿಸಲಾಗುವುದು. ಮೇ 31ರ ವೇಳೆಗೆ ಪ್ರತಿ ದಿನ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಲಾಗಿದೆ ಎಂದರು.