ಚಿತ್ರದುರ್ಗ: ರಾಜ್ಯದ ಮಧ್ಯ ಭಾಗದಲ್ಲಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮೂರ್‍ನಾಲ್ಕು ವರ್ಷಕ್ಕೊಮ್ಮೆ ಬರ, ನೀರು-ಮೇವಿಗೂ ಹಾಹಾಕಾರದ ಸ್ಥಿತಿ ತಲೆದೋರುತ್ತಲೇ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಹಾಗೂ ಸರ್ಕಾರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸರ್ಕಾರದಿಂದಲೇ ಗೋಶಾಲೆ ತೆರೆದು ಮೇವು, ನೀರಿನ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ.
ಬರಗಾಲದಲ್ಲಿ ಸರ್ಕಾರ ತೆರೆಯುವ ಗೋಶಾಲೆಗಳಲ್ಲಿ ರೈತರು ತಮ್ಮ ರಾಸುಗಳೊಂದಿಗೆ ಬಂದು ಬೆಳಗಿನಿಂದ ಸಂಜೆವರೆಗೆ ಇದ್ದು ಮೇಯಿಸಿಕೊಂಡು ಮನೆಗೆ ಹೋಗಬಹುದು. ಒಂದು ವೇಳೆ ಊರು ದೂರವಿದ್ದರೆ ಅಲ್ಲಿಯೇ ತಂಗಲು ಅವಕಾಶ ನೀಡಿ ರೈತರಿಗೂ ಊಟೋಪಚಾರ ವ್ಯವಸ್ಥೆ ಮಾಡಿದ ಉದಾಹರಣೆಗಳಿವೆ.
9 ಖಾಸಗಿ ಗೋಶಾಲೆಗಳು: ಸಾಮಾನ್ಯ ಸಂದರ್ಭಗಳಲ್ಲಿ ಇಳಿವಯಸ್ಸಿನ, ರೈತರಿಗೆ ಬೇಡವಾದ ದನಗಳನ್ನು ತಂದು ಬಿಡಲು ಸರ್ಕಾರದ್ದೇ ಆದ ಯಾವುದೇ ಗೋಶಾಲೆಗಳಿಲ್ಲ. ಖಾಸಗಿಯಾಗಿ ವಿವಿಧ ಸಂಘ-ಸಂಸ್ಥೆಗಳು 9 ಗೋಶಾಲೆಗಳನ್ನು ನಡೆಸುತ್ತಿದ್ದು, ಅಲ್ಲಿ ಪರಿತ್ಯಕ್ತ ದನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಬಿಡಾಡಿ ಅಥವಾ ಅನಾಥ ದನಗಳು, ನಿತ್ರಾಣಗೊಂಡ ಗೋವು, ರಾಸುಗಳನ್ನು ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಗೋಶಾಲೆಗಳಲ್ಲಿ ಸಾಕಲು ವ್ಯವಸ್ಥೆ ಇದೆ. ಜಿಲ್ಲೆಯ 9 ಗೋಶಾಲೆಗಳ ಪೈಕಿ ಐದು ಗೋಶಾಲೆಗಳಿಗೆ ಕಳೆದ ಸಾಲಿನಲ್ಲಿ ಸರ್ಕಾರದಿಂದ ನೆರವೂ ಸಿಕ್ಕಿದೆ.
ಗೋವು ಸಾಕಣೆ ಸಾಮರ್ಥ್ಯ: ಜಿಲ್ಲೆಯಲ್ಲಿರುವ 9 ಖಾಸಗಿ ಗೋಶಾಲೆಗಳಲ್ಲಿ ಒಟ್ಟಾರೆ 1450 ರಾಸುಗಳನ್ನು ಸಾಕುವಷ್ಟು ಸಾಮರ್ಥಯವಿದೆ. ಚಿತ್ರದುರ್ಗ-ದಾವಣಗೆರೆ ರಾಷ್ಟ್ರೀಯ ಹೆದ್ದಾರಿ4ರಲ್ಲಿ ಆದಿಚುಂಚನಗಿರಿ ಮಠದಿಂದ ನಿರ್ವಹಣೆ ಮಾಡುತ್ತಿರುವ ಚಿತ್ರದುರ್ಗದ ಕಬೀರಾನಂದ ಶ್ರೀಗಳನೇತೃತ್ವದಲ್ಲಿ ನಡೆಯುತ್ತಿರುವ ಗೋಶಾಲೆಯಲ್ಲಿ 200 ರಾಸುಗಳನ್ನು ಸಾಕಲಾಗುತ್ತಿದೆ. ಹಿರಿಯೂರು ತಾಲೂಕಿನ ಸ್ವರ್ಣಭೂಮಿ ಗೋಶಾಲೆಯಲ್ಲಿ 207, ಯರದಕಟ್ಟೆ ಸಮೃದ್ಧಿ ಗೋಶಾಲೆಯಲ್ಲಿ 53, ಮೊಳಕಾಲ್ಮೂರು ತಾಲೂಕು ಸಿದ್ದಾಪುರ ಬಳಿ ಇರುವ ದೇವರ ಎತ್ತುಗಳ ಗೋಶಾಲೆಯಲ್ಲಿ 150, ಬೊಮ್ಮದೇವರಹಟ್ಟಿಯ ಗೋ ಸಂರಕ್ಷಣಾ ಸಂಸ್ಥೆಯವರು ನಡೆಸುತ್ತಿರುವ ಗೋಶಾಲೆಯಲ್ಲಿ 300, ಚಳ್ಳಕೆರೆ ತಾಲೂಕಿನ ಬಾವೂಜಿ ಗೋಶಾಲೆಯಲ್ಲಿ 60, ದೊಡ್ಡೇರಿ ಕನ್ನೇಶ್ವರ ಗೋಶಾಲೆಯಲ್ಲಿ 63, ಹಿರೆಕೆರೆ ಚೌಡೇಶ್ವರಿ ಗೋಶಾಲೆಯಲ್ಲಿ 213 ಹಾಗೂ ಮುತ್ತಿಗಾರಹಳ್ಳಿ ಶ್ರೀಶೈಲ ಮಲ್ಲಿಕಾರ್ಜುನ ಗೋಶಾಲೆಯಲ್ಲಿ 204 ರಾಸುಗಳನ್ನು ಸಾಕುವಷ್ಟು ಸಾಮರ್ಥ್ಯವಿದೆ.
ತಿಪ್ಪೇಸ್ವಾಮಿ ನಾಕೀಕೆರೆ