Advertisement

ಬೇಳೂರು: ಕೋಣಬಗೆಯಲ್ಲೊಂದು ಅಪಾಯಕಾರಿ ಸೇತುವೆ

07:22 PM Nov 05, 2020 | mahesh |

ತೆಕ್ಕಟ್ಟೆ: ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಿರೆ ಹೊಳೆಗೆ ಅಡ್ಡಲಾಗಿರುವ ಕೋಣಬಗೆ -ಅಚ್ಲಾಡಿ ಸಂಪರ್ಕ ಸೇತುವೆ ಅಪಾಯದಲ್ಲಿದ್ದು, ಕುಸಿಯುವ ಸಾಧ್ಯತೆ ಇದೆ. ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸೇತುವೆ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಮಾಹಿತಿ ಕಲೆಹಾಕಿದ್ದರೂ ಹೊಸ ಸೇತುವೆ ಕಾಮಗಾರಿ ಮಾತ್ರ ಕನಸಾಗಿಯೇ ಉಳಿದಿದೆ.

Advertisement

40 ವರ್ಷ ಹಳೆಯದು
ಸೇತುವೆ ಸುತ್ತ ಮುತ್ತಲ ಪ್ರದೇಶದಲ್ಲಿ ಬೇಸಗೆಯಲ್ಲಿ ಅವ್ಯಾಹತ ಮರಳುಗಾರಿಕೆ ಮತ್ತು ಮಳೆಗಾಲದಲ್ಲಿ ತೀವ್ರ ನೀರ ರಭಸದಿಂದಾಗಿ ಸೇತುವೆ ಮಧ್ಯಭಾಗ ಮುರಿದು ಹೋಗಿದೆ. ಇದರಲ್ಲಿ ನಡೆದಾಡುವುದೂ ತೀವ್ರ ಅಪಾಯಕಾರಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ಬೇಳೂರು -ಅಚ್ಲಾಡಿ ಸಂಪರ್ಕ ಕೊಂಡಿ
ಬೇಳೂರು ಗ್ರಾಮದಿಂದ ಅಚ್ಲಾಡಿ ಗ್ರಾಮಕ್ಕೆ ಪ್ರಮುಖ ಸಂಪರ್ಕ ಸೇತುವೆ ಇದು. ಇದು ಸುಸ್ಥಿತಿಯಲ್ಲಿದ್ದಿದ್ದೇ ಆದರೆ 1.5 ಕಿ.ಮೀ. ಸಮೀಪದ ಅಂತರದಲ್ಲಿ ಎರಡೂ ಗ್ರಾಮಗಳನ್ನು ಸಂಧಿಸಲು ಸಾಧ್ಯ. ಇಲ್ಲದಿದ್ದರೆ ಸುಮಾರು 8 ಕಿ.ಮೀ. ಸುತ್ತು ಬಳಸಿ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದು.

ಅಪಾಯದ ನಡುವೆ ಸಂಚಾರ
ಬೇಳೂರು ಗ್ರಾಮದ ಜಲ ಮೂಲಗಳಲ್ಲಿ ಒಂದಾದ ಹಿರೆ ಹೊಳೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಏರಿಕೆಯಾಗಿ ಸುತ್ತಲಿನ ತಗ್ಗು ಪ್ರದೇಶಗಳಿಗೆ ನೆರೆ ಆವರಿಸುತ್ತದೆ. ಈ ನಡುವೆ ತುರ್ತು ಜೀವ ರಕ್ಷಣೆಗಾಗಿ ಆಸರೆಯಾಗಿರುವ ಕಿರುಸೇತುವೆ ಮುರಿದಿದ್ದರಿಂದ ಗ್ರಾಮೀಣ ಭಾಗದ ಕೃಷಿಕರು ಹಾಗೂ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದು ಅಪಾಯದ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ಇದೆ.
– ಸ್ವಾಗತ್‌, ಕಾರ್ತಿಕ್‌ ಬೇಳೂರು, ಸ್ಥಳೀಯರು

ತುರ್ತು ಕ್ರಮ
ಸಂಪೂರ್ಣ ಶಿಥಿಲಗೊಂಡ ಬೇಳೂರು- ಅಚ್ಲಾಡಿ ಕಿರು ಸಂಪರ್ಕ ಸೇತುವೆ ಬಗ್ಗೆ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವೆ. ಅಪಾಯದ ನಡುವೆ ಸಾರ್ವಜನಿಕರು ಸೇತುವೆ ಮೇಲೆ ಸಂಚರಿಸದ ಹಾಗೆ ಎಚ್ಚರಿಕೆಯ ಫ‌ಲಕ ಅಳವಡಿಸಿ ತುರ್ತು ಕ್ರಮ ಕೈಗೊಳ್ಳುತ್ತೇವೆ.
– ಜಯಂತ್‌ ಎನ್‌., ಪಿಡಿಒ ಬೇಳೂರು ಗ್ರಾ.ಪಂ.

Advertisement

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next