Advertisement

“ಲೋಕ’ಸಮರದವರೆಗೆ “ಲೋಕಲ್‌’ಚುನಾವಣೆ ಅನುಮಾನ 

12:30 AM Jan 30, 2019 | Team Udayavani |

ಬೆಂಗಳೂರು: ಮೈತ್ರಿ ಪಕ್ಷಗಳಲ್ಲಿನ ಆಂತರಿಕ ಕಚ್ಚಾಟದಿಂದ ಕೆಂಗೆಟ್ಟಿರುವ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆ ತನಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಾಗ ಹಾಕಲು ನಿರ್ಧರಿಸಿದಂತಿದೆ. ನ್ಯಾಯಾಲಯದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸರ್ಕಾರದ “ಜಾಣಮೌನ’ ಗಮನಿಸಿದರೆ, ಸದ್ಯದ
ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆವರೆಗೆ 101 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದು ಅನುಮಾನ ಎನಿಸುತ್ತಿದೆ.

Advertisement

ಈ ವರ್ಷ ಮಾರ್ಚ್‌ಗೆ ಅವಧಿ ಕೊನೆಗೊಳ್ಳಲಿರುವ ರಾಜ್ಯದ 26 ಜಿಲ್ಲೆಗಳ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳು ಸೇರಿ 101ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಪೈಕಿ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಮರುನಿಗದಿಗೊಳಿಸಿ ಜ.28ರೊಳಗೆ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸುವಂತೆ ಹೈಕೋರ್ಟ್‌ ಜ. 14ರಂದು ಆದೇಶ ನೀಡಿತ್ತು. ಆದೇಶ ಪಾಲಿಸುವ ಬದಲು ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಈ ಮಧ್ಯೆ ಕಳೆದ ವರ್ಷ ಆಗಸ್ಟ್‌ನಲ್ಲಿ ಚುನಾವಣೆ ನಡೆದ 105ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿಗೆ ಐದು ತಿಂಗಳು ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ
ಮಾಡುವ ಗೋಜಿಗೂ ಸರ್ಕಾರ ಹೋಗುತ್ತಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿದ್ದ ಹೈಕೋರ್ಟ್‌ ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿ 10 ದಿನ ಆಗಿದೆ. ಆದರೆ, ಸರ್ಕಾರ ಮಾತ್ರ ಇಲ್ಲಿತನಕ ಯಾವುದೇ ಕ್ರಮ ಕೈಗೊಂಡಿಲ್ಲ.

ಚುನಾವಣೆ ಮುಗಿದಿರುವ 105 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಕೈಗೆ ಅಧಿಕಾರ ಸಿಕ್ಕಿಲ್ಲ. ಇಲ್ಲಿ ಐದು ತಿಂಗಳಿಂದ ಆಡಳಿತಾಧಿಕಾರಿಗಳ ದರ್ಬಾರು ನಡೆಯುತ್ತಿದೆ. ಇನ್ನು ಮಾರ್ಚ್‌ನಲ್ಲಿ ಅವಧಿ ಪೂರ್ಣಗೊಳ್ಳಲಿರುವ 101 ನಗರ ಸ್ಥಳೀಯ ಸಂಸ್ಥೆಗಳಿಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಸಬೇಕಿತ್ತು. ಆದರೆ, ಸರ್ಕಾರದ ಈಗಿನ ನಡೆ ಗಮನಿಸಿದರೆ ಚುನಾವಣೆ ನಡೆಯುವುದು ಅನುಮಾನ. ಹಾಗಾಗಿ, ಈ 101 ನಗರ ಸ್ಥಳೀಯ ಸಂಸ್ಥೆಗಳಲ್ಲೂ ಆಡಳಿತಾಧಿಕಾರಿಗಳು ಬರುವ ಕಾಲ ಸನ್ನಿಹಿತವಾಗಿದೆ.

“ಅಡಕತ್ತರಿಯಲ್ಲಿ’ ಆಯೋಗ: ಫೆಬ್ರವರಿ ಅಂತ್ಯಕ್ಕೆ ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಳ್ಳುವು ಸಾಧ್ಯತೆಗಳು ಇರುವುದರಿಂದ ಹಾಗೂ ಮಾರ್ಚ್‌ನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳು ನಡೆಯಲಿರುವುದರಿಂದ ಫೆಬ್ರವರಿ ತಿಂಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಚಿಂತನೆಯಾಗಿತ್ತು. ಅದರಂತೆ, ಹೈಕೋರ್ಟ್‌ನಲ್ಲಿ
ಆಯೋಗ ಮನವಿ ಸಹ ಮಾಡಿಕೊಂಡಿತ್ತು. ಆದರೆ, ಜ.28ರೊಳಗೆ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ಮೀಸಲಾತಿ ಪರಿಷ್ಕೃತ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಬೇಕಿದ್ದ ಸರ್ಕಾರ, ಅದನ್ನು ಸಲ್ಲಿಸಿಲ್ಲ.

ಈ 13 ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಚಿಂತನೆ ಆಯೋಗಕ್ಕಿತ್ತು. ಈ ಮಧ್ಯೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಬಳ್ಳಾರಿ, ಕಲಬುರಗಿ, ಗದಗ, ಹೊಸಪೇಟೆ ಮತ್ತಿತರ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ಮೀಸಲಾತಿ ಪ್ರಶ್ನಿಸಿ ಕಲಬುರಗಿ ನ್ಯಾಯಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ
ರಾಜ್ಯ ಚುನಾವಣಾ ಆಯೋಗ “ಅಡಕತ್ತರಿ’ಯಲ್ಲಿ ಸಿಕ್ಕಿಕೊಂಡಂತಾಗಿದೆ. ಸರ್ಕಾರ ಪಟ್ಟಿ ಸಲ್ಲಿಸಿದ ಮೇಲೆ ವೇಳಾಪಟ್ಟಿ ಪ್ರಕಟಿಸಿ ಚುನಾವಣೆ ನಡೆಸಲು ಆಯೋಗಕ್ಕೆ ಕನಿಷ್ಠ 45 ದಿನ ಬೇಕು. ಈಗಿನ ಪರಿಸ್ಥಿತಿ ಗಮನಿಸಿದರೆ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ವೇಳೆ ಫೆಬ್ರವರಿಯಲ್ಲಿ ಆಗಿದ್ದರೆ, ಮುಂದೆ ಚುನಾವಣೆ ನಡೆಸುವುದು ಕಷ್ಟಸಾಧ್ಯ ಎಂದು
ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಹೇಳುತ್ತಾರೆ.

Advertisement

ಲೋಕಸಭೆ ಚುನಾವಣೆ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾರ್ಚ್‌ನಲ್ಲಿ ಅವಧಿ ಕೊನೆಗೊಳ್ಳಲಿರುವ 101 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂ ಡಿದೆ. ಆದರೆ, ನ್ಯಾಯಾಲಯದಲ್ಲಿ ಪ್ರಕರಣಗಳು ಇರುವುದರಿಂದ ಮತ್ತು ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದರಿಂದ ಆಯೋಗಕ್ಕೆ
ಮುಂದುವರಿಯಲು ಆಗುತ್ತಿಲ್ಲ. ಹಾಗಾಗಿ ಮತ್ತೂಮ್ಮೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು. 

● ಪಿ.ಎನ್‌. ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯುಕ್ತ

ರಫಿಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next