Advertisement

ಸ್ಥಳೀಯರಿಂದಲೇ ಗುತ್ತಿಗಾರು –ಕಮಿಲ –ಬಳ್ಪ ರಸ್ತೆ ದುರಸ್ತಿ

01:15 PM Jul 24, 2018 | Karthik A |

ಸುಬ್ರಹ್ಮಣ್ಯ: ಗುತ್ತಿಗಾರು ಕಮಿಲ ಬಳ್ಪ ರಸ್ತೆ ತೀರಾ ಹದಗೆಟ್ಟಿದ್ದು, ಸಂಬಂಧಪಟ್ಟವರಿಗೆ ಮನವಿ ನೀಡಿದ್ದರೂ ಸ್ಪಂದಿಸದ ಕಾರಣ 2ನೇ ವರ್ಷವೂ ಸ್ಥಳೀ ಯರೇ ಶ್ರಮದಾನದ ಮೂಲಕ ರಸ್ತೆಯ ತಾತ್ಕಾಲಿಕ ದುರಸ್ತಿಯನ್ನು ಮಾಡಿದರು. ಸ್ಥಳೀಯ ಯುವಕರ ತಂಡ ಮತ್ತು ಕಮಿಲದ ಬಾಂಧವ್ಯ ಗೆಳೆಯರ ಬಳಗದ 30ಕ್ಕೂ ಅಧಿಕ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.

Advertisement

ಮನವಿಗೂ ಸ್ಪಂದನೆ ಇಲ್ಲ
ಸುಮಾರು 5.4 ಕಿ.ಮೀ. ದೂರ ಇರುವ ಗುತ್ತಿಗಾರು – ಕಮಿಲ – ಬಳ್ಪ ರಸ್ತೆ ಹದಗೆಟ್ಟು 10 ವರ್ಷಗಳೇ ಕಳೆದಿವೆ. ಎರಡು ಪ್ರಮುಖ ರಾಜ್ಯ ಹೆದ್ದಾರಿಗಳನ್ನು ಸಂಪರ್ಕ ಮಾಡುವ ರಸ್ತೆ ಇದಾಗಿದೆ. ಸ್ಥಳೀಯರು ಸಂಬಂಧಪಟ್ಟವರಿಗೆ ಮನವಿ ನೀಡುತ್ತಲೇ ಇದ್ದಾರೆ. ಜಿಲ್ಲಾ ಪಂಚಾಯತ್‌ ರಸ್ತೆ ಇದಾಗಿದೆ. ಶಾಸಕರಿಗೆ, ಜಿಲ್ಲಾ ಪಂಚಾಯತ್‌ ಗೆ, ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಸಚಿವರಿಗೆ ಹೀಗೆ ಎಲ್ಲರಿಗೂ ಮನವಿ ನೀಡಿಯಾಗಿದೆ. ಯಾವುದೇ ರೀತಿಯ ಸ್ಪಂದನೆ ಇಲ್ಲ.

ಶ್ರಮದಾನಕ್ಕೆ ಮುನ್ನುಡಿ ಬರೆದರು
ಇಲಾಖೆಗಳು ಯಾವುದೇ ಸ್ಪಂದನ ನೀಡದ ಕಾರಣ ಕಳೆದ ವರ್ಷ ಜನರೇ ಶ್ರಮದಾನದ ಮೂಲಕ ಈ ರಸ್ತೆಯನ್ನು ದುರಸ್ತಿ ಮಾಡಿದ್ದರು. ಈ ವರ್ಷವೂ ಸಾರ್ವಜನಿಕರು, ಯುವಕರು ಹಾಗೂ ಕಮಿಲದ ಬಾಂಧವ್ಯ ಗೆಳೆಯರ ಬಳಗದ ಸದಸ್ಯರು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಗುಂಡಿ ಇರುವ ಕಡೆಗಳಲ್ಲಿ ಕಲ್ಲು, ಮರಳು ತುಂಬುವ ಮೂಲಕ ‘ನಮ್ಮ ರಸ್ತೆ-ನಮ್ಮ ಕೆಲಸ’ ಎನ್ನುವ ಧ್ಯೇಯ ಇಟ್ಟುಕೊಂಡು ಇಡೀ ದಿನ ಕೆಲಸ ಮಾಡಿ ರಸ್ತೆ ದುರಸ್ತಿ ಮಾಡಿದ್ದಾರೆ. ಸುಮಾರು 30ಕ್ಕೂ ಅಧಿಕ ಮಂದಿಯ ಶ್ರಮದಿಂದ ರಸ್ತೆ ಈ ಮಳೆಗಾಲದಲ್ಲಿ ಸಂಚಾರ ಯೋಗ್ಯವಾಗಿದೆ.

ಸಂಪೂರ್ಣ ಡಾಮರು ಆಗಿಯೇ ಇಲ್ಲ
ಈ ರಸ್ತೆಯ ದುರಸ್ತಿಗಾಗಿ 8 ವರ್ಷಗಳ ಹಿಂದೆಯೇ ಪ್ರತಿಭಟನೆ ನಡೆದಿತ್ತು. ಹೀಗಿದ್ದರೂ 5.4 ಕಿ.ಮೀ. ಉದ್ದದ ರಸ್ತೆಗೆ ಸಂಪೂರ್ಣ ಡಾಮರು ಕಾಮಗಾರಿ ನಡೆದೇ ಇಲ್ಲ. ಬಹು ಒತ್ತಾಯದ ಮೇರೆಗೆ ಎರಡು ವರ್ಷದ ಹಿಂದೆ 1.5 ಕಿ.ಮೀ. ರಸ್ತೆಯನ್ನು ಭೂಸೇನಾ ನಿಗಮದ ಮೂಲಕ ರಸ್ತೆ ಅಗೆದು ದುರಸ್ತಿ ಮಾಡಿದ್ದರು. ಅದು ಕೂಡ ಒಂದೇ ವರ್ಷದಲ್ಲಿ ಕಿತ್ತು ಹೋಗಿತ್ತು. ಈ ಬಗ್ಗೆ ಜಿ.ಪಂ.ನಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೂ ತಿಳಿಸಿದರೂ ಪ್ರಯೋಜನ ಶೂನ್ಯ. 

ತೇಪೆಯೂ ಮಂಗಮಾಯ!
ಕಳೆದ ವರ್ಷ 1.5 ಕಿ.ಮೀ. ರಸ್ತೆಯನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಮೂಲಕ ದುರಸ್ತಿ ಮಾಡಲಾಗಿತ್ತು. ಉಳಿದ ಸುಮಾರು 2 ಕಿ.ಮೀ. ರಸ್ತೆ ತೇಪೆ ಹಾಕುವ ಕಾರ್ಯ ಮಾಡಿದ್ದರು. ಇದೀಗ ಮಳೆಗೆ ಅಲ್ಲಲ್ಲಿ ತೇಪೆಯೂ ಎದ್ದು ಹೋಗುತ್ತಿದೆ. 2 ಕಿ.ಮೀ. ರಸ್ತೆಯಂತು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next