Advertisement

ಮೋದಿ ಮುಂದೆ ಚಿಲ್ರೆ ಪಕ್ಷಗಳು ನಮಗ್ಯಾವ ಲೆಕ್ಕ

07:51 AM Mar 13, 2019 | Team Udayavani |

ಮೈಸೂರು: ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಮಂತ್ರಿ ಮಾಡಲು ಇಡೀ ದೇಶದ ಜನರೇ ಒಂದಾದ ಮೇಲೆ ಚಿಲ್ಲರೆ ಪಕ್ಷಗಳು ನಮಗ್ಯಾವ ಲೆಕ್ಕ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ , ಪ್ರತಿಪಕ್ಷಗಳ ಬಗ್ಗೆ ಹರಿಹಾಯ್ದಿದ್ದಾರೆ. 

Advertisement

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಮೈಸೂರು-ಕೊಡಗು ಕ್ಷೇತ್ರ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಕೋಟ್ಯಂತರ ಯುವಕರು ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿ ಮಾಡಬೇಕು ಎಂದು ಕಾತರಿಸುತ್ತಿದ್ದಾರೆ. ಬಿಜೆಪಿ ಪಕ್ಷದ ಸಂಘಟನೆ ಶಕ್ತಿಯ ಜತೆಗೆ “ಮೋದಿ’ ಎಂಬ ಪದ ರೈತರು, ಯುವಕರು, ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿದೆ ಎಂದರು. 

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಪಕ್ಷದ ಸಂಘಟನೆ ಬಲಿಷ್ಠವಾಗಿದೆ. ಇದರಿಂದಾಗಿಯೇ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಪಡೆದಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ರಾಜ್ಯದ 28 ಕ್ಷೇತ್ರಗಳ ಪೈಕಿ 20 ರಿಂದ 25 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿದ್ದೇವೆ ಎಂದು ಹೇಳಿದರು. 

ಎಚ್‌.ಡಿ.ಕುಮಾರಸ್ವಾಮಿಯವರು ಮಾಡಿಕೊಂಡ ಮಹಾಘಟಬಂಧನ್‌ ಛಿದ್ರ ಆಗುತ್ತಿದೆ. ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಗೆ ಮೋದಿಯೊಬ್ಬರೇ. ಆದರೆ, ಮಹಾಘಟಬಂಧನ್‌ನಲ್ಲಿರುವವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ? ಮಮತಾ ಬ್ಯಾನರ್ಜಿ, ರಾಹುಲ್‌ ಗಾಂಧಿ, ಮಾಯಾವತಿ, ಅಖೀಲೇಶ್‌ ಯಾದವ್‌, ಚಂದ್ರಬಾಬು ನಾಯ್ಡು ಹೀಗೆ ಅವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕುರ್ಚಿಗಾಗಿ ಸೆಣಸಾಡಿದ್ದನ್ನು ಬಿಟ್ಟರೆ ಬೇರ್ಯಾವ ಸಾಧನೆಯೂ ಆಗಿಲ್ಲ. ರಾಜ್ಯದ ಜನತೆ ಸಮ್ಮಿಶ್ರ ಸರ್ಕಾರದಿಂದ ರೋಸಿಹೋಗಿದ್ದು, ಈ ಎರಡೂ ಪಕ್ಷಗಳ ಬಗ್ಗೆ ತಿರಸ್ಕಾರ ಭಾವನೆ ಬೆಳಸಿಕೊಂಡು, ಮೋದಿಯವರತ್ತ ಒಲವು ತೋರಿದ್ದಾರೆ ಎಂದರು.

Advertisement

ಕುಟುಂಬ ರಾಜಕಾರಣ: ದೇವೇಗೌಡರಿಗೆ 28 ಜನ ಮಕ್ಕಳಿದ್ದಿದ್ದರೆ ಒಂದೊಂದು ಕ್ಷೇತ್ರಕ್ಕೆ ಒಬ್ಬರನ್ನು ಕಣಕ್ಕಿಳಿಸುತ್ತಿದ್ದರು. ಇಲ್ಲವೇ 14 ಮಕ್ಕಳು, 14 ಸೊಸೆಯಂದಿರಿದ್ದರೂ 28 ಕ್ಷೇತ್ರಗಳಿಗೆ ಅಭ್ಯರ್ಥಿ ಸಿಕ್ಕಿ ಬಿಡುತ್ತಿದ್ದರು. ದುರಾದೃಷ್ಟವಶಾತ್‌ ಅವರಿಗೆ ಅಷ್ಟು ಮಕ್ಕಳಿಲ್ಲದಿರುವುದರಿಂದ ಇಬ್ಬರು ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಚಿಹ್ನೆ ಬದಲಿಸಲಿ: ಸಹೋದರಿ ಸುಮಲತಾ ಅವರ ಬಗ್ಗೆ ತುತ್ಛವಾಗಿ ಮಾತನಾಡಿರುವು ಸಚಿವ ಎಚ್‌.ಡಿ.ರೇವಣ್ಣ ಈವರೆಗೆ ಕ್ಷಮೆ ಕೇಳಿಲ್ಲ. ಅವರ ಬದಲಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪುತ್ರ ನಿಖೀಲ್‌ ಕುಮಾರಸ್ವಾಮಿ ಅವರೆಲ್ಲಾ ಕ್ಷಮೆ ಕೇಳಿದ್ದಾರೆ.

ರೇವಣ್ಣ ಅವರಿಗೆ ಕ್ಷಮೆ ಕೇಳುವುದಕ್ಕೆ ಬರೋದಿಲ್ವ ಎಂದು ಹರಿಹಾಯ್ದ ಅವರು, ಎಚ್‌.ಡಿ.ದೇವೇಗೌಡರು ಈ ಕೂಡಲೇ ರೇವಣ್ಣ ಅವರಿಂದ ಕ್ಷಮೆ ಕೇಳಿಸಲಿ, ಇಲ್ಲವಾದರೆ ನಿಮ್ಮ ಪಕ್ಷದ ಚಿಹ್ನೆಯನ್ನು ಬದಲಾಯಿಸಿ. ಯಾವುದಾದರೂ ಪ್ರಾಣಿಯ ಚಿಹ್ನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಟೀಕಾ ಪ್ರಹಾರ ನಡೆಸಿದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್‌.ನಾಗೇಂದ್ರ, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ಮತ್ತಿತರರು ಹಾಜರಿದ್ದರು.  

ಸಿದ್ದು ಪೇಪರ್‌ ಟೈಗರ್‌: ತಮ್ಮನ್ನು ತಾವು ಹಿಂದುಳಿದ ವರ್ಗಗಳ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಪೇಪರ್‌ ಟೈಗರ್‌ ಇದ್ದಂತೆ, ಪೇಪರ್‌ ಟೈಗರ್‌ ಎನ್ನುವ ಪದ ಅವರಿಗೆ ಹೇಳಿ ಮಾಡಿಸಿದಂತಿದೆ. ಸಿದ್ದರಾಮಯ್ಯನವರು ನನ್ನ ವಿಚಾರಕ್ಕೆ ಪದೇ ಪದೆ ಸಹನೆ ಕಳೆದುಕೊಳ್ಳುತ್ತಾರೆ. ಯಾಕೆ ಎಂಬುದನ್ನು ಅವರನ್ನೇ ಕೇಳಬೇಕು. ನನಗಂತೂ ಬಿ.ಪಿ., ಶುಗರ್‌ ಇಲ್ಲ. ನನ್ನ ಬಗ್ಗೆ ಮಾತನಾಡುವವರಿಗೆಲ್ಲ ಬಿಪಿ, ಶುಗರ್‌ ಬರುತ್ತದೆ ಎಂದು ಕೆ.ಎಸ್‌. ಈಶ್ವರಪ್ಪ ತಿರುಗೇಟು ನೀಡಿದರು.

ಸವಾಲು: ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಮುಂಬರುವ ಚುನಾವಣೆಯಲ್ಲಿ ಬಾದಾಮಿ ಅಥವಾ ಚಾಮುಂಡೇಶ್ವರಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡೂ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದರಲ್ಲಿ ಗೆದ್ದು ತೋರಿಸಲಿ. ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next