ಮಂಗಳೂರು: ನಗರದ ಹೊರವಲಯದ ಅಡ್ಯಾರ್ ರೈಲ್ವೇ ಟ್ರ್ಯಾಕ್ ನಲ್ಲಿ ಕಡವೆಯೊಂದು ರೈಲು ಢಿಕ್ಕಿ ಹೊಡೆದು ಗಂಭೀರ ಸ್ವರೂಪದ ಗಾಯಗೊಂಡು ರೈಲು ಹಳಿಯಲ್ಲಿಯೇ ಸಾವನ್ನಪ್ಪಿರುವುದು ಗುರುವಾರ ಬೆಳಗ್ಗೆ ಕಂಡು ಬಂದಿದೆ. ಇದು ಬುಧವಾರ ರಾತ್ರಿ ಗೂಡ್ಸ್ ರೈಲಿಗೆ ಢಿಕ್ಕಿಯಾಗಿ ಸತ್ತಿರಬಹುದೆಂದು ಶಂಕಿಸಲಾಗಿದೆ. ಗುರುವಾರ ಬೆಳಗ್ಗೆ ಕಡವೆಯೊಂದು ಸತ್ತು ಬಿದ್ದಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಬಂದಿದ್ದು, ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಡವೆಯ ಶವ ಮಹಜರು ನಡೆಸಿ, ವರದಿ ಸಿದ್ಧಪಡಿಸಿದರು. ಬಳಿಕ ದಫನ ಕ್ರಿಯೆ ನೆರವೇರಿಸಿದರು. ಕಡವೆ ಎಲ್ಲಿಂದ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ.
ಪರಿಸರವಾದಿಗಳ ಆಕ್ರೋಶ: ಸಾಮಾನ್ಯವಾಗಿ ಪಶ್ಚಿಮಘಟ್ಟದ ಅರಣ್ಯನಲ್ಲಿರ ಬೇಕಾದ ಕಡವೆ ನಗರ ಪ್ರದೇಶಕ್ಕೆ ಬಂದು ರೈಲ್ವೆ ಹಳಿಯಲ್ಲಿ ಸತ್ತು ಬಿದ್ದಿರುವ ಬಗ್ಗೆ ಪರಿಸರವಾದಿಗಳು ಗರಂ ಆಗಿದ್ದಾರೆ.
ಎಲ್ಲಿಯ ಪಶ್ಚಿಮ ಘಟ್ಟ …? ಎಲ್ಲಿಯ ಅಡ್ಯಾರ್….? ಎಂದು ಪರಿಸರವಾದಿ, ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಪ್ರಶ್ನಿಸಿದ್ದಾರೆ. ಕಾಡಿನಲ್ಲಿ ಕಡವೆಗೆ ಬೇಕಾದ ಆಹಾರ ಲಭಿಸುತ್ತಿಲ್ಲ….ಕಡವೆಯ ಬದುಕಿಗೆ ಅಲ್ಲಿನ ಕಾಡು ವ್ಯವಸ್ಥೆ ಸರಿಯಾದ ಹೊಂದಾಣಿಕೆ ಆಗುತ್ತಿಲ್ಲ. ಕಾಡು ಪ್ರಾಣಿಗಳ ಆವಾಸ ಸ್ಥಳಗಳೆಲ್ಲಾ ಅತಿಕ್ರಮಣ ಮಾಡಲು ಸರಕಾರಗಳೇ ಕಾರಣವಾಗಿದ್ದು, ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿವೆ’ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.