Advertisement

ಸ್ಥಳೀಯ ಕುಚ್ಚಲಕ್ಕಿ ಅಲಭ್ಯ: ಹೊಸ ತಳಿ ಅಕ್ಕಿ ವಿತರಣೆಗೆ ಚಿಂತನೆ

12:54 AM Apr 01, 2023 | Team Udayavani |

ಉಡುಪಿ: ಪಡಿತರ ವ್ಯವಸ್ಥೆಯಡಿ ಸ್ಥಳೀಯ ಕುಚ್ಚಲಕ್ಕಿ ಈ ವರ್ಷವೂ ಸಿಗದು. ಕಾರಣ ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರಲ್ಲಿ ಅಕ್ಕಿ ನೀಡಿರುವವರು ಕೇವಲ ಒಬ್ಬರು. ಅದು ಕೂಡ 31 ಕ್ವಿಂಟಾಲ್‌ ಮಾತ್ರ. ಹೀಗಾಗಿ 1001 ಹೆಸರಿನ ಹೊಸ ತಳಿಯ ಅಕ್ಕಿ ಹಂಚಿಕೆಗೂ ಚಿಂತನೆ ನಡೆಯುತ್ತಿದೆ.
ಉಭಯ ಜಿಲ್ಲೆಗಳಿಗೆ ಪ್ರತೀ ತಿಂಗಳು ಸರಾಸರಿ 1 ಲಕ್ಷ ಕ್ವಿಂಟಾಲ್‌ ಅಕ್ಕಿ ವಿತರಣೆಗೆ ಆವಶ್ಯಕತೆಯಿದೆ. ಸದ್ಯ ಬೆಳ್ತಿಗೆ ಅಕ್ಕಿಯ ಜತೆಗೆ ಹೊರ ರಾಜ್ಯದ ಕುಚ್ಚಲು ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ಅದೇ ಪ್ರಕ್ರಿಯೆ ವರ್ಷಪೂರ್ತಿ ಮುಂದುವರಿಯಲಿದೆ.

Advertisement

ಭತ್ತ ಖರೀದಿ ಕೇಂದ್ರ ಆರಂಭಿಸಿರುವ ಜತೆಗೆ ಕೇಂದ್ರ ಸರಕಾರದ ಬೆಂಬಲ ಬೆಲೆಗೆ ರಾಜ್ಯ ಸರಕಾರ 500 ರೂ.ಗಳನ್ನು ಹೆಚ್ಚುವರಿಯಾಗಿ ಸೇರಿಸಿತ್ತು. ದ.ಕ. ಜಿಲ್ಲೆಯಲ್ಲಿ ಯಾವುದೇ ರೈತರು ಭತ್ತ ನೀಡಲು ನೋಂದಣಿ ಮಾಡಿರಲಿಲ್ಲ. ಉಡುಪಿ ಜಿಲ್ಲೆಯಲ್ಲಿ 42 ಮಂದಿ ರೈತರು ನೋಂದಣಿ ಮಾಡಿದ್ದರು. ಅವರಲ್ಲಿ ಅಕ್ಕಿ ನೀಡಿದವರು ಓರ್ವರು ಮಾತ್ರ. ಈಗ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರು ಭತ್ತ ನೀಡಲು ಅವಕಾಶವಿದೆ.

ಖರೀದಿ ವಿಳಂಬ
ಭತ್ತ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಯನ್ನು ಕೊಯ್ಲಿನ ಸಂದರ್ಭದಲ್ಲೇ ಆರಂಭಿಸಬೇಕು. ಕೊಯ್ಲು ಪೂರ್ಣಗೊಂಡ ಅನಂತರ ಈ ಭಾಗದಲ್ಲಿ ಯಾವ ರೈತರೂ ಭತ್ತ ಶೇಖರಿಸಿಟ್ಟು ಕೊಳ್ಳುವುದಿಲ್ಲ. ಬಹುತೇಕ ಎಲ್ಲರೂ ಖಾಸಗಿ ಮಿಲ್‌ಗ‌ಳಿಗೆ ನೀಡುತ್ತಾರೆ. ಹೀಗಾಗಿ ಮುಂದಿನ ವರ್ಷವಾದರೂ ವಿಳಂಬವಿಲ್ಲದೆ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಆಗಬೇಕು.

1001 ಹೆಸರಿನ ತಳಿ
ಈಗಾಗಲೇ ಹಂಚಿಕೆ ಮಾಡುತ್ತಿರುವ ಹೊರ ರಾಜ್ಯದ ಅಕ್ಕಿಯ ಜತೆಗೆ ಕಾರವಾರ ಭಾಗದಲ್ಲಿ ಬೆಳೆಯುವ 1001 ಹೆಸರಿನ ತಳಿಯನ್ನು ನೀಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. 1001 ಹೆಸರಿನ ತಳಿಯು ಕುಚ್ಚಲಕ್ಕಿ ರೀತಿಯಲ್ಲೇ ಇದೆ. ಸ್ಥಳೀಯವಾಗಿ ಇರುವಷ್ಟು ಕೆಂಪು ಬರುವುದಿಲ್ಲ. ಅನ್ನ ಮಾಡಿದ ಅನಂತರ ಸ್ವಲ್ಪ ಬಿಳಿ ಬರುತ್ತದೆ. ಈಗ ಹಂಚಿಕೆ ಮಾಡುತ್ತಿರುವ ರೀತಿಯಲ್ಲೇ ಇರುತ್ತದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ನಿರ್ಧಾರ ಆಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next