ಚೆನ್ನೈ: ಹೊಟೇಲ್, ರೆಸ್ಟೋರೆಂಟ್, ಸಿನೆಮಾಗಳಿಗೆ ರೇಟಿಂಗ್ ನೀಡುವುದನ್ನು ನೀವು ಕೇಳಿರುತ್ತೀರಿ. ಹಾಗೆಯೇ ಈ ರೇಟಿಂಗ್ ಆಧಾರದಲ್ಲಿಯೇ ಯಾವ ಸಿನೆಮಾ ನೋಡಬೇಕು, ಯಾವ ಹೊಟೇಲ್ ನಲ್ಲಿ ತಂಗಬೇಕು, ಯಾವ ರೆಸ್ಟೋರೆಂಟ್ ನಲ್ಲಿ ಡಿನ್ನರ್ ಮಾಡಬೇಕು ಎಂಬುದನ್ನು ಹೆಚ್ಚಿನವರು ನಿರ್ಧರಿಸುತ್ತಾರೆ.
ಹಾಗೆಯೇ ಪೊಲೀಸ್ ಠಾಣೆಯೊಂದರ ಲಾಕಪ್ ಹೇಗಿರಬಹುದೆಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಲಾಕಪ್ ಗೆ ಹೋಗಿ ಬಂದವರು ಈ ಕುರಿತು ಬಾಯಿಬಿಡುವುದು ಅಪರೂಪವೇ! ಇನ್ನು ಎಲ್ಲರಿಗೂ ಅಲ್ಲಿಗೆ ಪ್ರವೇಶ ಇಲ್ಲದೇ ಇರುವುದರಿಂದ ಜಗತ್ತಿನಲ್ಲಿರುವ ಕುತೂಹಲಕಾರಿ ಸ್ಥಳಗಳಲ್ಲಿ ಪೊಲೀಸ್ ಲಾಕಪ್ ಸಹ ಒಂದಾಗಿದೆ ಎಂದರೆ ತಪ್ಪಾಗಲಾರದೇನೋ?
ಆದರೆ ಚೆನ್ನೈನಲ್ಲೊಬ್ಬ ಭೂಪ ತಾನು ಒಂದು ರಾತ್ರಿ ಕಳೆದ ಪೊಲೀಸ್ ಲಾಕಪ್ ಗೆ ರೇಟಿಂಗ್ ನೀಡಿ ಗಮನ ಸೆಳೆದಿದ್ದಾನೆ. ಹೀಗೆ ಲಾಕಪ್ ಕುರಿತಾಗಿ ಆ ವ್ಯಕ್ತಿ ನೀಡಿರುವ ಫೊರ್ ಸ್ಟಾರ್ ರೇಟಿಂಗ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮಾತ್ರವಲ್ಲದೇ ಇದರಿಂದ ಸ್ಪೂರ್ತಿ ಪಡೆದ ಹಲವರು ಪೊಲೀಸ್ ಠಾಣೆ ಮತ್ತು ಲಾಕಪ್ ಸಂಬಂಧವಾಗಿ ತಮ್ಮ ತಮ್ಮ ಅನುಭವಗಳನ್ನೂ ಸಹ ಪೋಸ್ಟ್ ಮಾಡುತ್ತಿದ್ದಾರೆ.
ಲೋಗೇಶ್ವರನ್ ಎಂಬ ಸ್ಥಳೀಯ ಗೈಡ್ ಒಬ್ಬರನ್ನು ತಿರುಮುಲ್ಲೈವೊಯಲ್ ಪೊಲೀಸರು ದಾಖಲೆಪತ್ರ ಇಲ್ಲದೇ ವಾಹನ ಚಲಾಯಿಸಿದರೆಂಬ ಕಾರಣಕ್ಕೆ ಹಿಡಿದು ಪೊಲೀಸ್ ಠಾಣೆಯಲ್ಲಿ ರಾತ್ರಿಯಿಡೀ ಕುಳ್ಳಿರಿಸಿದ್ದರು. ಮರುದಿನ ಬೆಳಿಗ್ಗೆ ಸೂಕ್ತ ದಾಖಲೆಪತ್ರ ತೋರಿಸಿದ ಬಳಿಕ ಲೋಗೇಶ್ವರನ್ ಅವರು ಪೊಲೀಸರು ಬಿಟ್ಟು ಕಳಿಸಿದ್ದರು.
ಠಾಣೆಯಿಂದ ಬಿಡುಗಡೆಗೊಂಡ ಬಳಿಕ ಲೋಗೆಶ್ವರನ್ ಅವರು ಗೂಗಲ್ ರಿವ್ಯೂ ಮೂಲಕ ತಾನು ಒಂದು ರಾತ್ರಿ ಕಳೆದ ಪೊಲೀಸ್ ಠಾಣೆಯ ಬಗ್ಗೆ ಪಾಸಿಟಿವ್ ಕಮೆಂಟ್ ಹಾಕಿ 4 ಸ್ಟಾರ್ ನೀಡಿದ್ದಾರೆ. ಚೆನ್ನೈ ನಗರದ ಮುಖ್ಯ ರಸ್ತೆಯಲ್ಲಿರುವ ಈ ಪೊಲೀಸ್ ಠಾಣೆ ಸ್ವಚ್ಛವಾಗಿದೆ. ಇಲ್ಲಿನ ಸಿಬ್ಬಂದಿ ಮೃದುಸ್ವಭಾವದವರಾಗಿದ್ದು ತನಗೆ ಯಾವುದೇ ಕಿರುಕುಳ ನೀಡಲಿಲ್ಲ ಎಂಬುದನ್ನು ಲೋಗೇಶ್ವರ್ ತಮ್ಮ ರಿವ್ಯೂನಲ್ಲಿ ಬರೆದುಕೊಂಡಿದ್ದಾರೆ.
ಲೋಗೇಶ್ವರನ್ ಅವರು ಬರೆದಿರುವ ಈ ರಿವ್ಯೂ ಇದೀಗ ಹಲವರಿಗೆ ಪ್ರೇರಣೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ತಮಗಾದ ಅನುಭವಗಳ ಕುರಿತಾಗಿ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಶ್ರೀಲಂಕಾದಲ್ಲಿ ವಿಜೆಶೇಖರ ಎಂಬುವವರು ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ಫೈವ್ ಸ್ಟಾರ್ ರೇಟಿಂಗ್ ನೀಡಿದ್ದು ವೈರಲ್ ಆಗಿತ್ತು.