ವರದಿ:ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಖನ್ನತೆ ಆವರಿಸದಂತೆ ಸದಾ ಚಟುವಟಿಕೆಗಳಲ್ಲಿ ತೊಡಗಿಸುವ ಕಾರಣಕ್ಕೆ ವಿವಿಧ ಮನರಂಜನಾ ಕ್ರೀಡೆಗಳಿಗೆ ಒತ್ತು ನೀಡಲಾಗಿದೆ. ಆದರೆ ಸೇವಾ ಭಾರತಿ ಟ್ರಸ್ಟ್ ಕೊಂಚ ಭಿನ್ನವಾಗಿ ಆಧುನಿಕ ಕ್ರೀಡೆಗಳ ಬದಲಿಗೆ ದೇಶಿ ಆಟಗಳಿಗೆ ಆದ್ಯತೆ ನೀಡಿದ್ದು, ಸೋಂಕಿತರು ಫಿದಾ ಆಗಿದ್ದಾರೆ.
ಕೊರೊನಾ ಲಕ್ಷಣ ರಹಿತ ಸೋಂಕಿತರು ಸಾಮಾನ್ಯರಂತೆ ಆರೋಗ್ಯವಾಗಿದ್ದರೂ ಅವರಿಂದ ಇತರರಿಗೆ ಸೋಂಕು ಹರಡಬಾರದು ಎನ್ನುವ ಕಾರಣಕ್ಕೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ. ಅಗತ್ಯ ಚಿಕಿತ್ಸೆ ಕೂಡ ನೀಡಲಾಗುತ್ತದೆ. ಓಡಾಡಿಕೊಂಡು ಇದ್ದವರನ್ನು ಒಂದೆಡೆ ಪ್ರತ್ಯೇಕವಾಗಿ ಇರಿಸಿದರೆ ಮಾನಸಿಕ ಖನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮನೋಸ್ಥೈರ್ಯ ತುಂಬಲು ಸರಕಾರ ಕೋವಿಡ್ ಕೇಂದ್ರಗಳಲ್ಲಿ ಕೇರಂ, ಚೆಸ್, ಕರೋಕೆಯಂತಹ ಮನೋರಂಜನಾ ಚಟುವಟಿಕೆಗಳಿಗೆ ಒತ್ತು ನೀಡಿದೆ. ಆದರೆ ಸೇವಾ ಭಾರತಿ ಟ್ರಸ್ಟ್ ಇಲ್ಲಿನ ಹಾಗೂ ಬೆಳಗಾವಿಯಲ್ಲಿರುವ ಕೋವಿಡ್ ಕೇರ್ ಕೇಂದ್ರಗಳಲ್ಲಿ ಗ್ರಾಮೀಣ ಆಟಗಳಿಗೆ ಒತ್ತು ನೀಡಿದೆ.
ಯಾವ ಯಾವ ಆಟಗಳು: ಸಾಮಾನ್ಯವಾಗಿ ಇಂತಹ ಕೇಂದ್ರಗಳಲ್ಲಿ ಹೆಚ್ಚಾಗಿ ಮೊಬೈಲ್ ಗಳಲ್ಲಿ ಕಾಲ ಕಳೆಯುತ್ತಾರೆ. ಅನಗತ್ಯ ಸುದ್ದಿಗಳಿಗೆ ಗಮನಕೊಟ್ಟು ಭೀತಿ ಹೆಚ್ಚಿಸಿಕೊಳ್ಳುತ್ತಾರೆ. ಹೀಗಾಗಿ ಅವುಗಳ ಬದಲು ಮಾನಸಿಕ ಸ್ಥೈರ್ಯ ಹೆಚ್ಚಿಸುವ ಚಕ್ಕಾ ವಚ್ಚಿ, ಹಾವು ಏಣಿ, ನವ ಕಂಕರಿ, ಹುಲಿ ಕುರಿ, ಆಕಳಪಟ್ಟಿ, ಅಳಗುಳಿ ಮನೆಯಂತಹ ಆಟಗಳಿಗೆ ಒತ್ತು ನೀಡಲಾಗಿದೆ.
ಸೋಂಕಿತರಿಗೆ ಅವರ ಬಾಲ್ಯ, ಗ್ರಾಮೀಣ ಬದುಕನ್ನು ಮೆಲಕು ಹಾಕಿಸುವ ಕೆಲಸ ಆಗುತ್ತಿದೆ. ಇದರೊಂದಿಗೆ ಕಾಲಕ್ಷೇಪಕ್ಕಾಗಿ ದೇಶ ಭಕ್ತಿ ಗೀತೆಗಳ ಗಾಯನ, ಯೋಗ, ವ್ಯಾಯಾಮ, ದಿನಪತ್ರಿಕೆ, ಕಥೆ-ಕಾದಂಬರಿ ಪುಸ್ತಕಗಳ ಸೌಲಭ್ಯ, ಅಂತ್ಯಾಕ್ಷರಿಯಂತಹ ಮೋಜಿನ ಆಟಗಳ ಮೂಲಕ ಮನೆಯ ವಾತಾವರಣ ಸೃಷ್ಟಿಸಲಾಗಿದೆ. ಏಳೆಂಟು ದಿನಗಳ ಕಾಲ ಲವಲವಿಕೆಯಿಂದ ಸದಾ ಚಟುವಟಿಕೆಗಳಲ್ಲಿ ತೊಡಗಿರುವಂತೆ ವ್ಯವಸ್ಥೆ ಮಾಡಲಾಗಿದೆ.