Advertisement

ಉಪ ಕದನ ಮುನ್ನ ಲೋಕಲ್‌ ಫೈಟ್‌ ಟೆಸ್ಟ್‌

11:27 PM Oct 21, 2019 | Lakshmi GovindaRaju |

ಬೆಂಗಳೂರು: ಅನರ್ಹಗೊಂಡವರ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌-ಜೆಡಿಎಸ್‌ಗೆ ಹದಿನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ “ಟೆಸ್ಟ್‌’ನಂತಾಗಿದ್ದು, ಸಮ್ಮಿಶ್ರ ಸರ್ಕಾರ ಪತನದ ನಂತರ ಎದುರಾಗಿರುವ ಈ ಟೆಸ್ಟ್‌ನಲ್ಲಿ ಶಕ್ತಿ ಪ್ರದರ್ಶನ ಅನಿವಾರ್ಯವಾಗಿದೆ.

Advertisement

ಉಪ ಚುನಾವಣೆ ನಡೆಯುವ ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳೂ ಸೇರಿ ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆಗೂ ಚುನಾವಣೆ ಇದೆ. ಇತ್ತೀಚೆಗಷ್ಟೇ ಉಪ ಚುನಾವಣೆ ಎದುರಿಸಿದ ಕುಂದಗೋಳ, ಡಿ.ಕೆ.ಶಿವಕುಮಾರ್‌ ಪ್ರಾಬಲ್ಯದ ಕನಕಪುರ, ಎಚ್‌.ಡಿ.ಕುಮಾರಸ್ವಾಮಿ ಪ್ರತಿಷ್ಠೆಯ ಮಾಗಡಿ ಪುರಸಭೆಗಳಿಗೂ ಚುನಾವಣೆ ನಡೆಯುತ್ತಿರುವುದರಿಂದ ಜಿದ್ದಾಜಿದ್ದಿ ಕಣವಾಗಲಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಆಡಳಿತಾರೂಢ ಬಿಜೆಪಿಗೆ ಸೆಡ್ಡು ಹೊಡೆದು ತಮ್ಮ ಶಕ್ತಿ ಪ್ರದರ್ಶನದ ಸವಾಲಾದರೆ, ಬಿಜೆಪಿಗೆ ಇಲ್ಲೂ ಪ್ರತಿಪಕ್ಷಗಳನ್ನು ಮಣಿಸಿ ತಮ್ಮ ಸರ್ಕಾರಕ್ಕೆ ಜನಮನ್ನಣೆ ಇದೆ ಎಂದು ಸಾಬೀತುಪಡಿಸುವ ತವಕ ಎಂಬಂತಾಗಿದೆ.

ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಅವರಿಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಹೆಚ್ಚು ಸ್ಥಾನ ಗೆಲ್ಲಿಸಿಕೊಳ್ಳುವ ಹೊಣೆಗಾರಿಕೆಯಿದೆ. ಮಂಗಳವಾರ ಅಥವಾ ಬುಧವಾರ ಚುನಾವಣೆ ನಡೆಯುವ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರ ಸಭೆ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೆಡಿಎಸ್‌ನಲ್ಲಿ ಖುದ್ದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು “ಅಖಾಡ’ ಪ್ರವೇಶಿಸಿದ್ದು ಜಿಲ್ಲಾ ನಾಯಕರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ.

ಮೈತ್ರಿ ಡೌಟ್‌: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬಹುತೇಕ ಪ್ರತ್ಯೇಕವಾಗಿಯೇ ಸ್ಪರ್ಧೆ ಮಾಡುವುದು ಖಚಿತ. ಸ್ಥಳೀಯ ಮಟ್ಟದಲ್ಲೂ ಯಾವುದೇ ರೀತಿಯ ಮೈತ್ರಿ ಅಸಾಧ್ಯ ಎಂಬ ಪರಿಸ್ಥಿತಿಯಿದೆ. ಆದರೆ, ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ಅದರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ ಜತೆಗೂ ಡಿಯೇ ಹೋರಾಟ ಮಾಡಿದ್ದರು. ಇದೀಗ ಕನಕಪುರ ಹಾಗೂ ಮಾಗಡಿಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರತ್ಯೇಕವಾಗಿ ಸ್ಪರ್ಧೆ ಮಾಡಬೇಕಾಗಿದೆ. ಮಾಗಡಿಯಲ್ಲಿ ಮಾಜಿ ಶಾಸಕ ಎಚ್‌. ಸಿ.ಬಾಲಕೃಷ್ಣ ಕಾಂಗ್ರೆಸ್‌ ನೇತೃತ್ವ ವಹಿಸಬೇಕಾಗಿದೆ.

Advertisement

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಇದೇ ರೀತಿಯ ಸನ್ನಿವೇಶ. ಸ್ಥಳೀಯ ಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರು ಇದೀಗ ತಮ್ಮ ತಮ್ಮ ಪಕ್ಷದ ಪರ ಕೆಲಸ ಮಾಡಬೇಕಾಗಿದೆ. ಎರಡೂ ಪಕ್ಷಗಳಲ್ಲಿಯೂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಇಲ್ಲಿ ಎರಡೂ ಪಕ್ಷಗಳಲ್ಲಿ ಟಿಕೆಟ್‌ ಸಿಗದವರು ಬಿಜೆಪಿ ಕದ ತಟ್ಟುವ ಸಾಧ್ಯತೆ ಹೆಚ್ಚಾಗಿದೆ. ಗಟ್ಟಿ ಮಾಡಿಕೊಳ್ಳಲು ಬಿಜೆಪಿ ಸಹ ಕೆಲವೆಡೆ ಸ್ಥಳೀಯ ಮಟ್ಟದ ಆಪರೇಷನ್‌ ಕಮಲ ಮಾಡಬಹುದೆಂದು ಹೇಳಲಾಗುತ್ತಿದೆ.

ದಾವಣಗೆರೆ, ಮಂಗಳೂರಿನಲ್ಲಿ ಬಿಜೆಪಿಯ ಹಿಡಿತ ಹೆಚ್ಚಾಗಿರುವುದರಿಂದ ಕಾಂಗ್ರೆಸ್‌ ಅಲ್ಲಿ ಹೆಚ್ಚು ಗಮನಹರಿಸಲು ನಿರ್ಧರಿಸಿದ್ದು, ಮಂಗಳೂರಿನಲ್ಲಿ ಯು.ಟಿ.ಖಾದರ್‌, ರಮಾನಾಥ್‌ ರೈ, ಐವಾನ್‌ ಡಿಸೋಜಾ ಸೇರಿ ಸ್ಥಳೀಯ ನಾಯಕರಿಗೆ ಹೆಚ್ಚು ಹೊಣೆಗಾರಿಕೆ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ತಲೆನೋವು: ಈ ಮಧ್ಯೆ, ಕಾಂಗ್ರೆಸ್‌ಗೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪಕ್ಷದಲ್ಲಿನ ಆಂತರಿಕ ಭಿನ್ನಮತ ತಲೆನೋವಾಗಿ ಪರಿಣಮಿಸಿದೆ. ಕೋಲಾರ, ಮುಳಬಾಗಿಲು, ಕೆಜಿಎಫ್ ನಗರಸಭೆಗೆ ಚುನಾವಣೆ ನಡೆಯುತ್ತಿದ್ದು, ಪ್ರತಿ ಕ್ಷೇತ್ರದಲ್ಲೂ ಎರಡರಿಂದ ಮೂರು ಬಣಗಳು ಹುಟ್ಟಿಕೊಂಡಿವೆ. ಕೋಲಾರದಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷದಿಂದ ಅಮಾನತು ಮಾಡಿರುವುದರಿಂದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ದಿನೇಶ್‌ ಗುಂಡೂರಾವ್‌ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದೀಗ ಟಿಕೆಟ್‌ ನೀಡುವ ವಿಚಾರದಲ್ಲಿ ಕೆ.ಎಚ್‌.ಮುನಿಯಪ್ಪ ವರ್ಸಸ್‌ ನಸೀರ್‌ ಅಹಮದ್‌ ಎಂಬಂತಾಗಲಿದೆ. ಕೆಜಿಎಫ್ ಹಾಗೂ ಮುಳಬಾಗಿಲಿನಲ್ಲೂ ಇದೇ ರೀತಿಯ ಪರಿಸ್ಥಿತಿಯಿದೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮತ್ತು ಚಿಂತಾಮಣಿ ನಗರಸಭೆ ಚುನಾವಣೆ ವಿಚಾರದಲ್ಲೂ ಮಾಜಿ ಸಚಿವ ಶಿವಶಂಕರರೆಡ್ಡಿ ಹಾಗೂ ಮಾಜಿ ಸಂಸದ ವೀರಪ್ಪ ಮೊಯ್ಲಿ ಬಣಗಳ ನಡುವೆ ಟಿಕೆಟ್‌ಗೆ ಕಿತ್ತಾಟ ನಡೆಯಬಹುದೆಂದು ಹೇಳಲಾಗುತ್ತಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜೆಡಿಎಸ್‌ ಶಕ್ತಿಯುತ ವಾಗಿದ್ದು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳ ಆಯ್ಕೆಗೆ ಸೂಚನೆ ನೀಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಜೆಡಿಎಸ್‌ ಹೆಚ್ಚಿನ ಪರಿಶ್ರಮ ಹಾಕಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯಗೆ “ಟಾಸ್ಕ್’: ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾದ ನಂತರ ಎದುರಾಗುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ತೋರಿಸಬೇಕಾಗಿದೆ. ಹೈಕಮಾಂಡ್‌ ಸಹ ನಿಮ್ಮ ಹೋರಾಟ ಬಿಜೆಪಿ ವಿರುದ್ಧ ಇರಲಿ ಎಂದು ನೇರವಾಗಿಯೇ ಹೇಳಿರುವುದರಿಂದ ಜೆಡಿಎಸ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಆಡಳಿತಾರೂಢ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲಬೇಕಾದ “ಟಾಸ್ಕ್’ ಎದುರಾಗಿದೆ. ಜೆಡಿಎಸ್‌ಗೂ ಈ ಚುನಾವಣೆ ಸೀಮಿತ ಕ್ಷೇತ್ರಗಳಲ್ಲಾದರೂ ಶಕ್ತಿ ಪ್ರದರ್ಶನ ಮಾಡಿ ತೋರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next