ಸುರಪುರ: ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆ ಅಡಿ ಟೇಲರ್ ಮಂಜಿಲ್ ಹತ್ತಿರ ನಿರ್ಮಿಸುತ್ತಿರುವ ಓವರ್‌ಹೆಡ್ ಟ್ಯಾಂಕ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ನೀಲ ನಕ್ಷೆಯಲ್ಲಿ ಗುರುತಿಸಿದಂತೆ ನಿಗ ದಿತ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸಬೇಕು ಎಂದು ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕುಡಿಯುವ ನೀರು ಸರಬರಾಜು ಯೋಜನೆ ಅಡಿ ಕ್ರಿಯಾಯೋಜನೆ ಮತ್ತು ನೀಲನಕ್ಷೆಯಲ್ಲಿ ಗುರುತಿಸಿರುವ ಸ್ಥಳಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸುತ್ತಿಲ್ಲ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಬೇರೆಡೆ ಟ್ಯಾಂಕ್ ನಿರ್ಮಿಸುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.
ಟ್ಯಾಂಕ್ ನಿರ್ಮಾಣಕ್ಕೆ ತಹಶೀಲ್ದಾರ್ ಕಚೇರಿ ಹತ್ತಿರ ಸ್ಥಳ ಗುರುತಿಸಲಾಗಿದೆ. ಆದರೆ ಯಾರದೋ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಟೇಲರ್ ಮಂಜಿಲ್ ಹತ್ತಿರ ಟ್ಯಾಂಕ್ ನಿರ್ಮಿಸುತ್ತಿರುವುದು ಸರಿಯಲ್ಲ. ಇದರಿಂದ ಸಮರ್ಪಕ ನೀರು ಸರಬರಾಜು ಆಗದೆ ಜನರಿಗೆ ತೊಂದರೆಯಾಗಲಿದೆ. ಸರಕಾರದ ಕೋಟ್ಯಂತರ ರೂ. ನಷ್ಟವಾಗಲಿದೆ ಎಂದು ಆರೋಪಿಸಿದರು.
ಟೇಲರ್ ಮಂಜಿಲ್ ಸ್ಥಳ ಹುಲಕಲ್ ಗುಡ್ಡಕ್ಕಿಂತಲೂ ಎತ್ತರದಲ್ಲಿದೆ. ಮುಖ್ಯ ಟ್ಯಾಂಕ್‌ನಿಂದ ಟೇಲರ್ ಮಂಜಿಲ್ ಬಳಿ ನಿರ್ಮಿಸುತ್ತಿರುವ ಟ್ಯಾಂಕ್ ಗೆ ನೀರು ಹರಿಸಲು ಸಾಧ್ಯವೇ ಇಲ್ಲ. ಎತ್ತರ ಪ್ರದೇಶ ಆಗದ್ದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಯೋಜನೆಯ ಉದ್ದೇಶ ಈಡೇರುವುದಿಲ್ಲ. ಜನರಿಗೆ ನೀರು ದೊರಕುವುದಿಲ್ಲ. ಆದ್ದರಿಂದ ಈ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಈ ಮೊದಲು ಗುರುತಿಸಿದಂತೆ ತಹಶೀಲ್ದಾರ್ ಕಚೇರಿ ಬಳಿ ನಿರ್ಮಿಸಬೇಕು. ಇಲ್ಲದಿದ್ದರೆ ನಗರಸಭೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಸದಸ್ಯರಾದ ಜುಮ್ಮಣ್ಣ ಕೆಂಗುರಿ, ನಾಸೀರಹುಸೇನ್ ಕುಂಡಾಲೆ, ಖಮುರುದ್ದೀನ್, ಪ್ರಮುಖರಾದ ಶಕೀಲ ಐಮದ್, ಸಿದ್ರಾಮ ಎಲಿಗಾರ, ಜಹೀರ್, ಸಣ್ಣ ಮಲ್ಕಪ್ಪ ಬಿರಾದಾರ, ಲಿಯಾಖತ್ ಹುಸೇನ್ ಇದ್ದರು.