Advertisement

ಸಾಲಿಗ್ರಾಮ ಪ.ಪಂ.: ಅಭಿವೃದ್ಧಿ ಇಲ್ಲಿನ ತುರ್ತು ಅಗತ್ಯ

02:20 AM Aug 24, 2018 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಸೇರಿದ ಏಕೈಕ ನಗರ ಸ್ಥಳೀಯಾಡಳಿತ ಸಂಸ್ಥೆ. ಸುತ್ತಲಿನ ಹತ್ತಾರು ಗ್ರಾಮಗಳಿಗೆ ಇದುವೇ ಪ್ರಮುಖ ವಾಣಿಜ್ಯ ತಾಣವಾಗಿದ್ದು ಇಲ್ಲಿ ಸಹಕಾರಿ,  ಬ್ಯಾಂಕಿಂಗ್‌ ಕ್ಷೇತ್ರ ಸಾಕಷ್ಟು ಬೆಳವಣಿಗೆಯಾಗಿದೆ. ಹಲವಾರು ಕ್ಷೇತ್ರಗಳ ಬೆಳವಣಿಗೆಗೆ ಇಲ್ಲಿ ಅವಕಾಶವಿದ್ದು, ಚುನಾವಣೆ ಹೊಸ್ತಿಲಲ್ಲಿ ಪ.ಪಂ.ನ ಇತಿಹಾಸ ಹಾಗೂ ಅಭಿವೃದ್ಧಿಗಿರುವ ಅವಕಾಶಗಳ ಕುರಿತು ಒಂದು ಸ್ಥೂಲ ನೋಟ ಇಲ್ಲಿದೆ.

Advertisement

ಪಂಚಾಯತ್‌ ಬೋರ್ಡ್‌ನಿಂದ ಪುರಸಭೆ, ಪ.ಪಂ. ಆಗಿ ಬದಲಾಯಿತು. 1975ಕ್ಕೆ ಮೊದಲು ಗುಂಡ್ಮಿ, ಕಾರ್ಕಡ, ಚಿತ್ರಪಾಡಿ, ಪಾರಂಪಳ್ಳಿ ಗ್ರಾಮಗಳನ್ನೊಳಗೊಂಡ ಪಂ. ಬೋರ್ಡ್‌ ಸಾಲಿಗ್ರಾಮದಲ್ಲಿ ಅಸ್ತಿತ್ವದಲ್ಲಿತ್ತು. ಅನಂತರ ಜನಸಂಖ್ಯೆ ಹೆಚ್ಚಿದಂತೆ 1975 ಜ.10ರಂದು ಪುರಸಭೆಯಾಗಿ ಮೇಲ್ದರ್ಜೆಗೇರಿತು. ಪಂ. ಬೋರ್ಡ್‌ನ ಸದಸ್ಯರು, ಅಧ್ಯಕ್ಷರನ್ನೇ ಪುರಸಭೆ ಸದಸ್ಯರನ್ನಾಗಿ, ಅಧ್ಯಕ್ಷರನ್ನಾಗಿ ಮುಂದುವರಿಸಲಾಯಿತು. ಆಗ ಗ್ರಾಮಸ್ಥರೋರ್ವರು ಸಾಲಿಗ್ರಾಮಕ್ಕೆ ಪುರಸಭೆ ಅರ್ಹತೆ ಇಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ 1997 ಜೂ.22ರಂದು ಮತ್ತೆ ಗ್ರಾ.ಪಂ. ಮಟ್ಟಕ್ಕೆ ಇಳಿಯಿತು. ಅನಂತರ ಐದೇ ತಿಂಗಳಲ್ಲಿ ಗ್ರಾ.ಪಂ. ಆದೇಶಕ್ಕೆ ತಡೆಯಾಜ್ಞೆ ಬಂದು 1999 ಮಾ. 10ರಂದು ಮತ್ತೂಮ್ಮೆ ಪುರಸಭೆಯಾಗಿ ಘೋಷಿಸಲ್ಪಟ್ಟಿತು. ಬಳಿಕವೂ 7ವರ್ಷ ಕಾರ್ಯ ನಿರ್ವಹಣಾಧಿಕಾರಿಗಳ ಆಡಳಿತ ನಡೆಯಿತು. 2001, ಡಿ.21ರಂದು ಸಾಲಿಗ್ರಾಮ ಪ.ಪಂ. ಅಸ್ತಿತ್ವಕ್ಕೆ ಬಂದಿದ್ದು 2002 ಎ.28ರಂದು ಚುನಾವಣೆ ನಡೆದಿತ್ತು. ಪ.ಪಂ.ನ ಮೊದಲ ಅವಧಿ 2002ರಿಂದ 2005ರ ವರೆಗೆ ಜಿ. ರಫಿಯುದ್ದೀನ್‌ ಅಧ್ಯಕ್ಷರಾಗಿದ್ದರು. 2017 ಮೇ ತಿಂಗಳಿಂದ ಪ್ರಸ್ತುತ ಅವಧಿಯ ತನಕ ರತ್ನಾ ನಾಗರಾಜ್‌ ಗಾಣಿಗ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸಿದ್ದಾರೆ.

ಅಭಿವೃದ್ಧಿಯ ನೋಟ 
ಪುರಸಭೆ ಆಗುವುದಕ್ಕಿಂತ ಮೊದಲು ಇಲ್ಲಿ ಸರಿಯಾದ ರಸ್ತೆಗಳಿರಲಿಲ್ಲ. ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ದಾರಿದೀಪ ಮುಂತಾದ ಸಮಸ್ಯೆಗಳಿದ್ದವು. ಆದರೆ ಪುರಸಭೆ, ಪ.ಪಂ. ಆಗಿ ಬದಲಾದಂತೆ ಅನುದಾನ ಹೆಚ್ಚಿ ಓಣಿಗಳು ರಸ್ತೆಗಳಾಗಿ ಬದಲಾದವು. ಕಚ್ಛಾ ರಸ್ತೆಗಳು ಕಾಂಕ್ರೀಟ್‌ಗೊಂಡವು. ಚರಂಡಿ ವ್ಯವಸ್ಥೆ, ಬೀದಿ ದೀಪ, ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ  ಮುಂತಾದ ಮೂಲ ಸೌಕರ್ಯ ಅಭಿವೃದ್ಧಿಗೊಂಡಿತು. ರಾಷ್ಟ್ರೀಯ ಹೆದ್ದಾರಿ ಸಮೀಪ ಹಳೆಯ ಹಂಚಿನ ಕಟ್ಟಡದಲ್ಲಿದ್ದ ಆಡಳಿತ ಕಚೇರಿ ತೆರವುಗೊಳಿಸಿ ಪಾರಂಪಳ್ಳಿ ರಸ್ತೆಯಲ್ಲಿ ನೂತನ ಆಡಳಿತ ಕಚೇರಿ ಸ್ಥಾಪನೆಗೊಂಡಿತು.

ಸಾಕಷ್ಟು ಅವಕಾಶಗಳು
ತ್ಯಾಜ್ಯ ವಿಲೇವಾರಿಗೆ ಡಂಪಿಂಗ್‌ ಯಾರ್ಡ್‌ ಇಲ್ಲದಿರುವುದು ಪ.ಪಂ.ನ ಬಹುದೊಡ್ಡ ಸಮಸ್ಯೆಯಾಗಿದೆ. ಇದರ ಪರಿಹಾರಕ್ಕಾಗಿ ಹಿಂದೆ ಉಳ್ತೂರಿನಲ್ಲಿ 2.17ಎಕ್ರೆ ಜಾಗ ಖರೀದಿಸಲಾಗಿತ್ತು. ಆದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಇಂದಿಗೂ ಸಮಸ್ಯೆ ಜೀವಂತವಾಗಿದೆ. ಮುಂದೆ ಆಡಳಿತಕ್ಕೆ ಬರುವವರು ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಹಲವು ವಾರ್ಡ್‌ಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬನ್ನಾಡಿ ಹೊಳೆಗೆ ಅಣೆಕಟ್ಟು ನಿರ್ಮಿಸಿ, ಶುದ್ಧೀಕರಣ ಘಟಕ ಅಳವಡಿಸಿ ಬಹುಕೋಟಿ ವೆಚ್ಚದ ಕಾಮಗಾರಿ ಪ್ರಾಸ್ತಾವನೆಯಲ್ಲೇ ಉಳಿದಿದ್ದು, ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಯೋಜನೆಗೆ ಜೀವ ನೀಡಬೇಕಿದೆ.

ಪ.ಪಂ.ನಲ್ಲಿ ಕ್ಯಾಶ್‌ಲೆಸ್‌ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರತಿಯೊಂದಕ್ಕೂ ಬ್ಯಾಂಕ್‌ಗೆ ತೆರಳಿ ಹಣ ಪಾವತಿಸಬೇಕಿದೆ. ಕ್ಯಾಶ್‌ಲೆಸ್‌ ವ್ಯವಸ್ಥೆ ಜಾರಿಗೊಳಿಸಿ ಎಲ್ಲಾ ತೆರಿಗೆ, ಇನ್ನಿತರ ಶುಲ್ಕವನ್ನು ಪ.ಪಂನಲ್ಲೇ  ಪಾವತಿಸಿಕೊಳ್ಳುವ ವ್ಯವಸ್ಥೆ ಜಾರಿಯಾಗಬೇಕಿದೆ. ಸಾಲಿಗ್ರಾಮದಲ್ಲಿ ಉತ್ತಮವಾದ ಆಟದ ಮೈದಾನ, ಸಾರ್ವಜನಿಕ ಕಾರ್ಯ ಕ್ರಮಗಳಿಗೆ ಸಭಾಂಗಣ ಅಗತ್ಯವಿದೆ. ಸಬ್‌ ರಿಜಿಸ್ಟ್ರ್ ಕಚೇರಿ ಸ್ಥಾಪನೆಯಾಗಬೇಕಿದೆ. ಕಾರಂತ ಬೀದಿಯ ಟ್ರಾಫಿಕ್‌ ಕೂಡ ಬಹುದೊಡ್ಡ ಸಮಸ್ಯೆಯಾಗಿದ್ದು  ಒತ್ತುವರಿ ತೆರವು, ಪಾರ್ಕಿಂಗ್‌ ಸ್ಥಳ ನಿಗದಿ ನಿಟ್ಟಿನಲ್ಲಿ ಯೋಜನೆ ಸಿದ್ಧವಾಗಬೇಕಿದೆ.

Advertisement

ಆರೋಗ್ಯ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿ ಬೇರೆ ಯಾವುದೇ ಆಸ್ಪತ್ರೆಗಳು ಇಲ್ಲಿಲ್ಲ. ಪಾರಂಪಳ್ಳಿ-ಪಡುಕರೆ ಕಡಲ ತೀರವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶವಿದ್ದು ಈ ನಿಟ್ಟಿನಲ್ಲಿ ಕೆಲಸವಾಗಬೇಕಿದೆ. ಪಾರಂಪಳ್ಳಿ-ಪಡುಕರೆ ಸೇತುವೆಯಿಂದ ಗುಂಡ್ಮಿಯ ತನಕ ನದಿ ದಂಡೆಯಲ್ಲಿ ರಿಂಗ್‌ ರೋಡ್‌ ನಿರ್ಮಾಣವಾಗಬೇಕಿದೆ. ನಾಯ್ಕನಬೈಲು ಮರದ ಸೇತುವೆಗೆ ಮುಕ್ತಿ ಬೇಕಿದೆ. ಸಣ್ಣ ಕೈಗಾರಿಕಾ ಕೇಂದ್ರಗಳೂ ಸ್ಥಾಪನೆಯಾಗಿ ಉದ್ಯೋಗಾವಕಾಶಕ್ಕೆ ನೆರವಾಗಬೇಕಿದೆ.   

ಶರವೇಗದಲ್ಲಿ ಬೆಳೆದ ಸಹಕಾರಿ ಕ್ಷೇತ್ರ
ಸುಮಾರು 25 ವರ್ಷದ ಹಿಂದೆ ಸಾಲಿಗ್ರಾಮದಲ್ಲಿ ಕೇವಲ 2ರಾಷ್ಟ್ರೀಕೃತ ಬ್ಯಾಂಕ್‌, ಒಂದು ಸಹಕಾರಿ ವ್ಯಾವಸಾಯಿಕ ಸಂಘದ ಶಾಖೆ ಇತ್ತು. ಆದರೆ ಇದೀಗ 4ರಾಷ್ಟ್ರೀಕೃತ ಬ್ಯಾಂಕ್‌, 11 ಸಹಕಾರಿ ಬ್ಯಾಂಕ್‌ಗಳು ಶಾಖೆ ಕಾರ್ಯನಿರ್ವಹಿಸುತ್ತಿದೆ. ಅದು ಕೂಡ ಕೇವಲ 500ಮೀಟರ್‌ ವ್ಯಾಪ್ತಿಯೊಳಗಿನ ಮುಖ್ಯ ಪೇಟೆಯಲ್ಲಿ. ಹೀಗಾಗಿ ಸಹಕಾರಿ ರಂಗ ಇಲ್ಲಿ ಶರವೇಗದಲ್ಲಿ ಬೆಳೆದಿದೆ.

ಜನಜೀವನ ಸ್ಥಿತಿಗತಿ
ಸಾಲಿಗ್ರಾಮ ಪ.ಪಂ. ಚಿತ್ರಪಾಡಿ, ಗುಂಡ್ಮಿ, ಪಾರಂಪಳ್ಳಿ, ಕಾರ್ಕಡ ಎನ್ನುವ ನಾಲ್ಕು ಗ್ರಾಮ ಹಾಗೂ 16 ವಾರ್ಡ್‌ಗಳನ್ನೊಳಗೊಂಡಿದೆ. ಭೌಗೋಳಿಕವಾಗಿ ಒಟ್ಟು 14.69 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು, 2011ರ ಜನಗಣತಿಯ ಪ್ರಕಾರ 15,123 ಜನಸಂಖ್ಯೆ ಇದೆ. ಇದರಲ್ಲಿ ಶೇ. 50 ಮಂದಿ ಕೃಷಿಕರು, ಶೇ.20 ಖಾಸಗಿ ಹಾಗೂ ಸರಕಾರಿ ಉದ್ಯೋಗಸ್ಥರು. ಶೇ.30 ಕೂಲಿ ಕಾರ್ಮಿಕರಾಗಿದ್ದಾರೆ. 838 ಮಂದಿ ವಸತಿರಹಿತರು ಎಂದು ಘೋಷಿಸಿಕೊಂಡಿದ್ದು, ಇವರಲ್ಲಿ 445 ಮಂದಿ ವಸತಿರಹಿತರ ಪಟ್ಟಿಗೆ ಅರ್ಹರು ಎಂದು ಪ.ಪಂ. ಗುರುತಿಸಿದೆ. ಮನೆ ತೆರಿಗೆಯಿಂದ ವಾರ್ಷಿಕ 65ಲಕ್ಷ  ಆದಾಯ ಸೇರಿದಂತೆ  ಒಟ್ಟು  75 ಲಕ್ಷ ವಾರ್ಷಿಕ ಆದಾಯವಿದೆ. ಎಸ್‌.ಎಫ್‌.ಐ.ನಿಂದ 75ಲಕ್ಷ ಸೇರಿದಂತೆ 1ಕೋಟಿಗೂ ಹೆಚ್ಚು ಅನುದಾನ ಅಭಿವೃದ್ಧಿ ಕಾರ್ಯಕ್ಕೆ ಮೀಸಲಿರಿಸಲಾಗುತ್ತದೆ.

— ರಾಜೇಶ ಗಾಣಿಗ ಅಚ್ಲಾಡಿ 

Advertisement

Udayavani is now on Telegram. Click here to join our channel and stay updated with the latest news.

Next