ಮಾಗಡಿ: ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚಟುವಟಿಕೆಗಳು ಗರಿಗೆದರಿವೆ. ಮಾಗಡಿ ಪುರಸಭೆಗೆ ಒಟ್ಟು 23 ಸ್ಥಾನಗಳಿದ್ದು , ಜೆಡಿಎಸ್ 12, ಕಾಂಗ್ರೆಸ್ 10, ಬಿಜೆಪಿ 1 ಸ್ಥಾನ ಪಡೆದಿದೆ. ಚುನಾವಣೆಯಲ್ಲಿ ಶಾಸಕ ಎ.ಮಂಜುನಾಥ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರಿಗೆ ಮತದಾನದ ಹಕ್ಕಿದ್ದು, ಜೆಡಿಎಸ್ ಸ್ಪಷ್ಟ ಬಹುಮತದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷಸ್ಥಾನ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಭಾರೀ ಪೈಪೋಟಿ: ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಗೆ ಮೀಸಲಾಗಿದ್ದು, ಇನ್ನು ಕೆಲವೇ ದಿನದಲ್ಲಿ ಚುನಾವಣೆ ದಿನ ನಿಗದಿಯಾಗಲಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ಚುನಾವಣೆ ಮುಗಿದಿದ್ದರೂ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಮಾತ್ರ ನಡೆಯದೆ ಪುರಸಭಾ ಸದಸ್ಯರಿಗೆ ಅಧಿಕಾರ ಚಲಾವಣೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್‌ನಲ್ಲಿ ಮಹಿಳಾ ಮೀಸಲಾತಿಯಲ್ಲಿ ವಿಜೇತರಾದ ಸದಸ್ಯರಿಂದ ಶಾಸಕ ಎ.ಮಂಜುನಾಥ್ ಮನವೊಲಿಸುವ ಕಾರ್ಯ ಆರಂಭಗೊಂಡಿದೆ.
ಯಾರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬುದು ಜನರಲ್ಲಿ ಕುತೂಹಲ ಕೆರಳಿಸಿದೆ. ಹೈಕೋರ್ಟ್ ನ.10ರಒಳಗೆ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ. ಅದರಂತೆ ಜಿಲ್ಲಾಧಿಕಾರಿಗಳು ತಾಲೂಕು ಆಡಳಿತಕ್ಕೆ ಚುನಾವಣೆ ದಿನಾಂಕ ನಿಗದಿಪಡಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ. ಅಭಿವೃದ್ಧಿಗೆ ಒತ್ತು ನೀಡಿ: ಪುರಸಭೆಯ ಆಡಳಿತ ತುಕ್ಕು ಹಿಡಿದಿದ್ದು, ಗದ್ದುಗೆ ಏರುವ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕ್ರಿಯಾಶೀಲರಾಗಿರಬೇಕಿದೆ. ತುಕ್ಕು ಹಿಡಿದ ಆಡಳಿತಕ್ಕೆ ಚಾಟಿ ಬೀಸುವ ಮೂಲಕ ಪುರೋಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಕುಡಿಯುವ ನೀರಿನ ಸಮಸ್ಯೆ, ಕಸ ನಿರ್ವಹಣೆ, ಬೀದಿ ದೀಪ ನಿರ್ವಹಣೆ, ಪಟ್ಟಣದ ವ್ಯಾಪ್ತಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಬೇಗಮುಗಿಸಬೇಕು. ಇ-ಖಾತೆ ಪ್ರಕ್ರಿಯೆಗೆ ವೇಗ ನೀಡಿ, ಬಾಕಿ ಇರುವ ಅರ್ಜಿಗಳನ್ನು ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ನನೆಗುದಿಗೆಬಿದ್ದಿರುವ ನಿವೇಶನ ಹಂಚಿಕೆ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕಾಗಿದೆ.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನ.10 ರ ಒಳಗಾಗಿ ಚುನಾವಣೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಕೋರ್ಟ್ ಆದೇಶದಂತೆ ಚುನಾವಣೆ ಮುಗಿಸುತ್ತೇವೆ. ಶೀಘ್ರವೇ ದಿನಾಂಕ ಪ್ರಕಟಿಸಲಾಗುವುದು.
–ಶ್ರೀನಿವಾಸ್ ಪ್ರಸಾದ್, ತಹಶೀಲ್ದಾರ್