ಗಜೇಂದ್ರಗಡ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಗದ್ದುಗೆಗಾಗಿ ಬಿಜೆಪಿ ವಲಯದಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ಕಳೆದೆರಡು ವರ್ಷಗಳಿಂದ ಆಡಳಿತ ಯಂತ್ರ ಇಲ್ಲದಂತಾಗಿದ್ದ ಪುರಸಭೆಗೆ ರಾಜ್ಯ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬಿಡುಗಡೆಗೊಳಿಸಿದೆ. ಅದರನ್ವಯ ನ.5ರಂದು ಚುನಾವಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಮಲ ಪಾಳಯದಲ್ಲಿ ಭರ್ಜರಿ ಲಾಬಿ ನಡೆದಿದೆ. ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ18 ಸ್ಥಾನ ಹೊಂದಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮೀಸಲಾಗಿದ್ದರಿಂದ ಪುರುಷ ಸದಸ್ಯರುಒಳಗೊಳಗೆ ಕಸರತ್ತು ನಡೆಸಿದ್ದಾರೆಂದು ಕೇಳಿ ಬರುತ್ತಿವೆ. ಇನ್ನು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮೀಸಲಾಗಿದ್ದು, ಅಲ್ಲಿಯೂ ಪೈಪೋಟಿ ಏರ್ಪಟ್ಟಿದೆ.
ಪುರುಷರಿಗೆ ಅಧ್ಯಕ್ಷ ಪಟ್ಟ?: ಹಿಂದಿನ ಎರಡು ಅವಧಿಯಲ್ಲಿ ಪುರಸಭೆ ಅಧ್ಯಕ್ಷ ಗಾದಿಯನ್ನು ಮಹಿಳೆಯರೇ ಅಲಂಕರಿಸಿದ್ದರು. ಕಳೆದ ಅವಧಿಯಲ್ಲಿ ಸಾಮಾನ್ಯ ಮಹಿಳೆ, ನಂತರ ಹಿಂದುಳಿದ ವರ್ಗ ಎ ಮಹಿಳೆಯರು ಪಟ್ಟಣದಲ್ಲಿ ಆಳ್ವಿಕೆ ನಡೆಸಿದ್ದರು. ಆದರೆ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆಸಾಮಾನ್ಯ ಮೀಸಲಾತಿಯುಳ್ಳ ಪುರುಷ ಮತ್ತು ಮಹಿಳೆಯಾದರೂ ಸ್ಪರ್ಧಿಸಲು ಅವಕಾಶ ಬಂದೊದಗಿದೆ. ಆದರೆ ಬಹುತೇಕ ಅಧ್ಯಕ್ಷ ಸ್ಥಾನ ಈ ಬಾರಿ ಪುರುಷರ ಪಾಲಾಗಲಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.
ಮೊದಲ ಬಾರಿಗೆ ಸಮಾನ್ಯ ಮೀಸಲಾತಿ: ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸ್ಥಾನ ಈ ಹಿಂದೆ ಮಹಿಳೆಯರಿಗೆ ನೀಡಲಾಗಿತ್ತು. ಆದರೆ ಇದೇಮೊದಲ ಬಾರಿಗೆ ಸಾಮಾನ್ಯ ಮೀಸಲಾತಿ ಬಂದಿರುವುದರಿಂದಾಗಿ ಅಧ್ಯಕ್ಷ ಗದ್ದುಗೆ ಪುರುಷರುದೊಡ್ಡ ಮಟ್ಟದಲ್ಲಿ ಪೈಪೋಟಿ ನಡೆಸಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಪುರಪುತ್ರರ ಜೊತೆ ಮಹಿಳಾ ಮಣಿಗಳು ಸಹ ಭರ್ಜರಿಯಾಗಿ ಪೈಪೋಟಿ ನಡೆಸಿದ್ದಾರೆ. ಇನ್ನೊಂದು ಬಾರಿ ಸ್ತ್ರೀಯರಿಗೆ ಅವಕಾಶ ಕಲ್ಪಿಸಿ ಎಂದು ವರಿಷ್ಠರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆಂಬ ಮಾತುಗಳು ಸಹ ಪ್ರಬಲವಾಗಿ ಕೇಳಿ ಬರುತ್ತಿವೆ. ಆದರೆ ಎರಡುಸ್ಥಾನಗಳು ಮತ್ತೆ ಮಹಿಳೆಯರ ಪಾಲಾಗುತ್ತವೆಯೋ, ಅಥವಾ ಪುರುಷರಿಗೂ ಸ್ಥಾನ ಕಲ್ಪಿಸುತ್ತಾರೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಬಿಜೆಪಿ ಹೈಕಮಾಂಡ್ ಯಾರ ಹೆಸರನ್ನು ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಸೂಚಿಸುವರೋ, ಸೇವೆ ಸಲ್ಲಿಸುತ್ತೇವೆ ಎನ್ನುವ ಮಾತುಗಳೂಬಿಜೆಪಿ ವಲಯದಲ್ಲಿ ಸುಳಿದಾಡುತ್ತಿವೆ. ಆದರೂ ಅಧ್ಯಕ್ಷ ಆಯ್ಕೆ ಮಾತ್ರ ಬಿಜೆಪಿಗೆ ಕಗ್ಗಂಟಾಗುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಎಲ್ಲರ ಚಿತ್ತ ನ.5 ರತ್ತ : ಗಜೇಂದ್ರಗಡ ಪುರಸಭೆ ಚುನಾವಣೆ2018ರಲ್ಲಿಯೇ ನಡೆದು ಇಂದಿಗೆ ಎರಡು ವರ್ಷಗಳು ಕಳೆದಿವೆ. ಧೀರ್ಘ ಕಾಲದ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ನ. 5ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಯಾರು, ಯಾವ ಸ್ಥಾನ ಅಲಂಕರಿಸಲಿದ್ದಾರೆ ಎನ್ನುವ ಕುತೂಹಲ ಕೋಟೆ ನಾಡಿನ ಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಡಿ.ಜಿ. ಮೋಮಿನ್