Advertisement

ಕರಾವಳಿ ಭಾಗದಲ್ಲಿ ಕಮಲ, ಮೈಸೂರಲ್ಲಿ ದಳಕ್ಕೆ ಗೆಲುವು

06:00 AM Nov 01, 2018 | Team Udayavani |

ಅ.28ರಂದು ನಡೆದಿದ್ದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫ‌ಲಿತಾಂಶ ಪ್ರಕಟವಾಗಿದ್ದು, ಕರಾವಳಿ ಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮೈಸೂರು ಭಾಗದಲ್ಲಿ ಜೆಡಿಎಸ್‌ ಜಯದ ರುಚಿ ಕಂಡಿದ್ದರೆ, ಮಾಗಡಿ ತಾಲೂಕಿನ ಕುದೂರು ಜಿಲ್ಲಾ ಪಂಚಾಯತ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಅಣ್ಣೇಗೌಡ  ಜಯಗಳಿಸಿದ್ದಾರೆ.

Advertisement

ಬಿಜೆಪಿಗೆ 7, ಕಾಂಗ್ರೆಸ್‌ಗೆ 4 ಸ್ಥಾನ
ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಚುನಾವಣೆಯ ಒಟ್ಟು 11 ವಾರ್ಡ್‌ಗಳಲ್ಲಿ ಬಿಜೆಪಿ 7 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಗಳಿಸಿದ್ದು, ಕಾಂಗ್ರೆಸ್‌ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಪಂಚಾಯತ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ರಾಜ್ಯ ಸರಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಬೆಳ್ತಂಗಡಿ ಪ.ಪಂ.ನ ಅಧ್ಯಕ್ಷರ ಹುದ್ದೆ
ಹಿಂದುಳಿದ ವರ್ಗ ಎ(ಬಿಸಿಎ) ಹಾಗೂ ಉಪಾಧ್ಯಕ್ಷರ ಹುದ್ದೆ ಸಾಮಾನ್ಯಕ್ಕೆ ಮೀಸಲಾತಿ ಹೊರಡಿಸಿದ್ದು, ಅದರ ಪ್ರಕಾರ ಬಿಜೆಪಿಯ ತುಳಸಿಗೆ ಅಧ್ಯಕ್ಷರಾಗುವ ಅವಕಾಶವಿದೆ. ಉಪಾಧ್ಯಕ್ಷ ಹುದ್ದೆಗೆ ಎಲ್ಲ ಸದಸ್ಯರು ಅರ್ಹರಾಗಿದ್ದಾರೆ. ಈ ಮಧ್ಯೆ, ಬಂಟ್ವಾಳ ತಾಲೂಕು ಸಂಗಬೆಟ್ಟು ತಾ.ಪಂ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಭಾಕರ ಪ್ರಭು 1,089 ಮತಗಳಿಂದ ವಿಜೇತರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ 3,939 ಮತಗಳನ್ನು, ಕಾಂಗ್ರೆಸ್‌ನ ದಿನೇಶ್‌ ಸುಂದರ ಶಾಂತಿ 2,850 ಮತಗಳನ್ನು ಪಡೆದ್ದಾರೆ.

ಸೋಮನಾಥಪುರ ಜಿಪಂ ಕ್ಷೇತ್ರ ಜೆಡಿಎಸ್‌ ಪಾಲು
ಮೈಸೂರು: ಮೈಸೂರು ಜಿಲ್ಲೆ ಸೋಮನಾಥಪುರ ಜಿಪಂ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎಸ್‌. ಆರ್‌.ಜಯಪಾಲ್‌ ಅವರು 1,549 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಪದ್ಮನಾಭ್‌ ವಿರುದಟಛಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಕಳೆದ
ವಿಧಾನಸಭಾ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿ ಭಾರೀ ಅಂತರದಲ್ಲಿ ಸೋತಿದ್ದ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪಗೆ ಮತ್ತೂಮ್ಮೆ ಮುಖಭಂಗವಾಗಿದೆ.

ಕೊಳ್ಳೇಗಾಲದಲ್ಲಿ ಅರಳಿದ ಕಮಲ
ಕೊಳ್ಳೇಗಾಲ: ನಗರಸಭೆಯ 9ನೇ ವಾರ್ಡಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಂದ್ರ ಗೆಲುವು ಸಾಧಿಸಿದ್ದಾರೆ. 9ನೇ ವಾರ್ಡಿನ ಬಿಎಸ್ಪಿ ಅಭ್ಯರ್ಥಿ ರಮೇಶ್‌ ನಿಧನದಿಂದಾಗಿ ಚುನಾವಣೆ ರದ್ದಾಗಿತ್ತು. ಬಿಜೆಪಿ ಅಭ್ಯರ್ಥಿ ನಾಗೇಂದ್ರ 577 ಮತ ಗಳಿಸಿದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ.ಮಹದೇವ 506 ಮತಗಳಿಸಿ ಸೋಲು ಅನುಭವಿಸಿದರು. ಈ ಮಧ್ಯೆ, ಗುಂಡ್ಲುಪೇಟೆ
ತಾಲೂಕಿನ ತೆರಕಣಾಂಬಿ ತಾಲೂಕು ಪಂಚಾಯತಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆರ್‌.ಮಹೇಶ್‌ 306 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ನಾರಾಯಣ ನಾಯ್ಕರನ್ನು ಪರಾಭವಗೊಳಿಸಿದ್ದಾರೆ.

ರಾಮನಾಥಪುರದಲ್ಲಿ ಕೈಗೆ ಜಯ
ಅರಕಲಗೂಡು: ಹಾಸನ ಜಿಲ್ಲೆ ರಾಮನಾಥಪುರ ತಾಲೂಕು ಪಂಚಾಯಿತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 
ಜೆ.ಸಿ.ಮಂಜೇಗೌಡ ಗೆಲುವು ಸಾಧಿಸಿದ್ದಾರೆ. ತಾಲೂಕು ಪಂಚಾಯಿತಿ ಕ್ಷೇತ್ರದ ಹಿಂದಿನ ಸದಸ್ಯ ಶಿವೇಗೌಡ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಮಂಜೇಗೌಡ ಅವರು 286 ಮತಗಳ ಅಂತರದಿಂದ ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಜಯ ಗಳಿಸಿದ್ದಾರೆ.

Advertisement

ಪಕ್ಷೇತರ ಅಭ್ಯರ್ಥಿ ಗೆಲುವು
ಮಾಗಡಿ: ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಜಿಲ್ಲಾ ಪಂಚಾಯಿತಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಅಣ್ಣೇಗೌಡ ಜಯಗಳಿಸಿದ್ದಾರೆ. ಶಾಸಕ ಎ. ಮಂಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಪಕ್ಷೇತರ ಅಭ್ಯರ್ಥಿ ಬಿ.ಅಣ್ಣೇಗೌಡ ಅವರು 13,202 ಮತಗಳಿಸಿ, ಜಯಶಾಲಿಯಾಗಿದ್ದಾರೆ. ಉಳಿದೆಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಕಾಂಗ್ರೆಸ್‌ ಸ್ಥಾನ ಅಬಾಧಿತ
ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆವಿನಹಳ್ಳಿ ಜಿಪಂಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭೀಮನೇರಿ ಶಿವಪ್ಪ ಅವರು ತಮ್ಮ ಸಮೀಪದ ಪ್ರತಿಸ್ಪ ರ್ಧಿ ಬಿಜೆಪಿಯ ಬಿ.ಟಿ.ರವೀಂದ್ರ ಬಸ್ರಾಣಿ ಅವರನ್ನು 500 ಮತಗಳ ಅಂತರದಿಂದ
ಪರಾಭವಗೊಳಿಸಿದ್ದಾರೆ. ಶಿವಪ್ಪ 10,192  ಮತಗಳನ್ನು ಪಡೆದರೆ, ರವೀಂದ್ರ 9,692 ಮತ ಪಡೆದರು. ಕಾಂಗ್ರೆಸ್‌ನ ಕಾಗೋಡು ಅಣ್ಣಪ್ಪ ಅವರ ಅಕಾಲಿಕ ಮರಣದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು.

ತಾಂತ್ರಿಕ ದೋಷ: ಉಪ ಚುನಾವಣೆ ಫಲಿತಾಂಶಕ್ಕೆ ತಡೆ
ದೇವದುರ್ಗ: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಜಿಪಂ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ವೇಳೆ ಮತ ಪೆಟ್ಟಿಗೆಯೊಂದರಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಮತಪೆಟ್ಟಿಗೆ ತೆರೆಯಲಾಗಿಲ್ಲ. ಉಳಿದ 30 ಮತ ಕೇಂದ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಪಾಣಿ 7,973 ಮತ ಪಡೆದು, ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ವಿಠೊಬ ನಾಯಕ ದಿವಾನ್‌ 7,531 ಮತ, ಪಕ್ಷೇತರ ಅಭ್ಯರ್ಥಿ ನರಸಣ್ಣ ನಾಯಕ ಬಿ.ಗಣೇಕಲ್‌ 240 ಮತ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next