ಭಾರತ ಮತ್ತು ಪಾಕಿಸ್ಥಾನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಜಂಟಿ ಕದನ ವಿರಾಮವನ್ನು ಘೋಷಿಸಿವೆ. ಇದರಿಂದಾಗಿ ಗಡಿಯಲ್ಲಿ ಎರಡೂ ದೇಶಗಳ ಸೇನೆಯ ನಡುವೆ ಗುಂಡಿನ ಚಕಮಕಿ, ಘರ್ಷಣೆ, ಹಿಂಸಾಚಾರ ಕಡಿಮೆಯಾಗುವ ನಿರೀಕ್ಷೆ ಇದೆ. ಈ ನಿರ್ಧಾರದಿಂದಾಗಿ ಗಡಿ ಗ್ರಾಮಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕೇವಲ ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಒತ್ತಡಗಳ ಹೊರತಾಗಿಯೂ ಪಾಕಿಸ್ಥಾನವು ಭಯೋತ್ಪಾದಕರಿಗೆ ಆಶ್ರಯ ಮತ್ತು ಹಣಕಾಸಿನ ನೆರವು ನೀಡುತ್ತಿತ್ತು. ಕಾಶ್ಮೀರ ವಿಷಯವನ್ನು ಪದೇಪದೆ ಕೆದಕುವ ಮೂಲಕ ವಿವಾದವಾಗಿ ಜೀವಂತವಾಗಿರಿಸುವ ಪ್ರಯತ್ನವನ್ನು ನಡೆಸುತ್ತಲೇ ಬಂದಿದ್ದರೂ ಭಾರತ ಮಾತ್ರ ಇದಕ್ಕೆ ಅವಕಾಶ ನೀಡಿರಲಿಲ್ಲ. ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಡೆಸಿದ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸುವ ಮೂಲಕ ಭಾರತ ಪಾಕಿಸ್ಥಾನವನ್ನು ಮುಖಭಂಗಕ್ಕೀಡು ಮಾಡಿತ್ತು. ಆದಾಗ್ಯೂ ಪಾಕಿಸ್ಥಾನ ತನ್ನ ಸೇನೆಯ ಬೆಂಬಲದೊಂದಿಗೆ ಉಗ್ರರನ್ನು ಒಳನುಸುಳಿಸಿ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಿರಂತರವಾಗಿ ನಡೆಸುತ್ತಿತ್ತು. ಇಷ್ಟು ಮಾತ್ರ ವಲ್ಲದೆ ಗಡಿಯಲ್ಲಿ ಪದೇಪದೆ ಕದನವಿರಾಮ ಉಲ್ಲಂ ಸಿ ಪಾಕ್ ಯೋಧರು ಗುಂಡಿನ ದಾಳಿ ನಡೆಸುತ್ತಲೇ ಬಂದಿರುವರಾದರೂ ಭಾರ ತೀಯ ಯೋಧರು ಇದಕ್ಕೆ ಸೂಕ್ತ ತಿರುಗೇಟು ನೀಡುತ್ತಿದ್ದರು. ಪಾಕಿಸ್ಥಾನದ ಈ ಎಲ್ಲ ದುಷ್ಕೃತ್ಯಗಳಿಗೆ ಚೀನವು ಪರೋಕ್ಷವಾಗಿ ನೆರವು ನೀಡುತ್ತಿತ್ತು.
ಇತ್ತೀಚೆಗೆ ಗಡಿಯಲ್ಲಿ ಭಾರತ-ಚೀನ ನಡುವೆ ಸಂಘರ್ಷ ಏರ್ಪಟ್ಟ ಸಂದರ್ಭದಲ್ಲಿ ಭಾರತವು ಚೀನ ಸೇನೆಗೆ ಸಡ್ಡು ಹೊಡೆದು ಆಯಕಟ್ಟಿನ ಸ್ಥಳಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಿತ್ತು. ತಿಂಗಳುಗಳ ಕಾಲ ಭಾರತೀಯ ಯೋಧರು ಭಾರೀ ಚಳಿಯನ್ನೂ ಲೆಕ್ಕಿಸದೆ ಗಡಿಯಲ್ಲಿ ಬೀಡು ಬಿಡುವ ಮೂಲಕ ತಮ್ಮ ನಿಲುವೇನು ಎಂಬುದನ್ನು ಚೀನಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಜಾಹೀರುಗೊಳಿಸಿದ್ದರು. ಭಾರತ ಶಾಂತಿಗೆ ಎಂದೆಂದಿಗೂ ಬದ್ಧ ಹಾಗೆಂದು ಕಾಲು ಕೆರೆದು ಜಗಳಕ್ಕೆ ಬರುವ ದೇಶಗಳಿಗೆ ತಕ್ಕ ಪ್ರತ್ಯುತ್ತರವನ್ನೂ ನೀಡಲು ಸಿದ್ಧ ಎಂಬುದನ್ನು ತೋರಿಸಿಕೊಟ್ಟಿತು. ತಿಂಗಳುಗಳ ಕಾಲ ನಡೆದ ಈ ಸಂಘರ್ಷದ ಬಳಿಕ ಚೀನ ಅನಿವಾರ್ಯವಾಗಿ ಗಡಿಯಿಂದ ತನ್ನ ಸೇನೆಯನ್ನು ವಾಪಸು ಕರೆಸಿಕೊಳ್ಳುವ ಸಂಬಂಧ ಭಾರತದೊಂದಿಗೆ ಮಾತುಕತೆಗೆ ಮುಂದಾಯಿತು. ಅದರಂತೆ ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಟ್ಟು ಎರಡೂ ರಾಷ್ಟ್ರಗಳೂ ಗಡಿಯಿಂದ ತಮ್ಮ ಸೇನೆಗಳನ್ನು ವಾಪಾಸು ಕರೆಸಿಕೊಂಡಿವೆ.
ಇದಾದ ಕೆಲವೇ ದಿನಗಳಲ್ಲಿಯೇ ಪಾಕಿಸ್ಥಾನ ಕೂಡ ಎಲ್‌ಒಸಿಯಲ್ಲಿ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದೆ. ಚೀನದ ವಿಚಾರ ದಲ್ಲಿ ಭಾರತದ ದಿಟ್ಟ ನಿರ್ಧಾರಗಳೇ ಪಾಕಿಸ್ಥಾನವನ್ನು ಇಂಥದೊಂದು ಅನಿವಾರ್ಯ ಶಾಂತಿ ನಿರ್ಧಾರಕ್ಕೆ ತಳ್ಳುವಂತೆ ಮಾಡಿದೆ. ಕೊರೊನಾದಿಂದಾಗಿ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಆರ್ಥಿಕ ನೆರವು ಸಿಗದೆ ಕಂಗಾಲಾಗಿದೆ. ಕದನ ವಿರಾಮದ ಹೊರತಾಗಿಯೂ ಗಡಿ ಭಾಗಗಳ ಸಹಿತ ಕಾಶ್ಮೀರ ಕಣಿವೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ನಿಲ್ಲದು ಎಂದು ಭಾರತೀಯ ಸೇನೆ ಈಗಾಗಲೇ ಸ್ಪಷ್ಟಪಡಿಸಿದೆ. ಈ ಹಿಂದೆ ಹಲವಾರು ಬಾರಿ ಪಾಕಿಸ್ಥಾನ ಭಾರತದೊಂದಿಗೆ ಸ್ನೇಹಹಸ್ತ ಚಾಚಿ ಒಪ್ಪಂದ ಮಾಡಿಕೊಂಡಿತ್ತಾದರೂ ಕೆಲವೇ ದಿನಗಳಲ್ಲಿ ಇದನ್ನು ಮುರಿಯುವ ಮೂಲಕ ತನ್ನ ಕುಟಿಲ ಬುದ್ಧಿ ತೋರಿಸಿತ್ತು. ಹೀಗಾಗಿ ಭಾರತ ಹೆಚ್ಚಿ ನ ನಿಗಾ ತೋರುವುದು ಅಗತ್ಯ.