ಬೆಂಗಳೂರು: ಹೊಸ ರೇಶನ್ ಕಾರ್ಡ್‌ಗಳ ಅರ್ಜಿ ವಿಲೇವಾರಿಗೇ ಹೆಣಗಾಡುತ್ತಿರುವ ಆಹಾರ ಇಲಾಖೆಗೆ ಸಾಲ ಮನ್ನಾ ಯೋಜನೆಯಡಿ ರೈತರು ಋಣಮುಕ್ತ ಪತ್ರ ಪಡೆಯಬೇಕಾದರೆ ರೇಶನ್ ಕಾರ್ಡ್ ಕಡ್ಡಾಯ ಎಂದು ಸರಕಾರ ಹೇಳಿರುವುದು ಮತ್ತೂಂದು “ತಲೆ ನೋವು’ ತಂದಿಟ್ಟಿದೆ. ಸರಕಾರದ “ರೇಶನ್ ಕಾರ್ಡ್ ಲಿಂಕ್’ ನಿರ್ಧಾರದಿಂದ ಹೊಸ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಅವಿಭಕ್ತ ಕುಟುಂಬದ ರೇಶನ್ ಕಾರ್ಡ್‌ನಲ್ಲಿ ಈಗಾಗಲೇ ಹೆಸರು ಇರುವ ಕೆಲವರು ಸಾಲ ಮನ್ನಾದ ಲಾಭ ಪಡೆದುಕೊಳ್ಳಲು ಪ್ರತ್ಯೇಕ ರೇಶನ್ ಕಾರ್ಡ್ ಕೋರಿ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಅರ್ಜಿಗಳ ಲೆಕ್ಕ ಸಿಗದಂತಾಗಿದೆ.
ಸಾಲ ಮನ್ನಾ ಯೋಜನೆಯಡಿ ಋಣ ಮುಕ್ತ ಪತ್ರ ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ರೇಶನ್ ಕಾರ್ಡ್ ಹೊಂದಿರಬೇಕು ಎಂದು ಸರಕಾರ ಆದೇಶ ಹೊರಡಿಸಿದ ಬಳಿಕ ಜೂನ್ ತಿಂಗಳಿಂದ ಹೊಸ ರೇಶನ್ ಕಾರ್ಡ್ ಕೋರಿ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಿಂದಾಗಿ ಆಹಾರ ಇಲಾಖೆಯ ಸಿಬಂದಿ ಮೇಲೆ ಕಾರ್ಯದೊತ್ತಡ ಹೆಚ್ಚಾಗಿದೆ ಎಂದು ಇಲಾಖೆ ಹೇಳುತ್ತಿದೆ.
ಇದೇ ವೇಳೆ ಬ್ಯಾಂಕುಗಳಿಗೆ ನಿಗದಿತ ಅವಧಿಯಲ್ಲಿ ದಾಖಲೆ ಸಲ್ಲಿಕೆ ಮಾಡಬೇಕಾಗಿರುವುದರಿಂದ ರೇಶನ್‌ಕಾರ್ಡ್ ಬೇಗ ಕೊಡಿ ಎಂಬ ಒತ್ತಡಗಳು ಹೆಚ್ಚಾಗುತ್ತಿವೆ. ಆನ್‌ಲೈನ್‌ನಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ (ಫಸ್ಟ್ ಕಮ್ ಫಸ್ಟ್ ಸರ್ವ್) ವ್ಯವಸ್ಥೆ ಇರುವುದರಿಂದ ಕ್ರಮಾಂಕದ ಪ್ರಕಾರವೇ ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗುತ್ತದೆ. ತಾಂತ್ರಿಕ ಕಾರಣಗಳಿಗೆ ತಮ್ಮ ರೇಶನ್ ಕಾರ್ಡ್ ಬೇಗ ಸಿಗದಿದ್ದರೆ, ರೈತರಿಗೆ ರೇಶನ್ ಕಾರ್ಡ್ ಕೊಡುತ್ತಿಲ್ಲ ಎಂಬ ಪುಕಾರು ಎಬ್ಬಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಾರೆ.
2018ರ ಮಾರ್ಚ್‌ವರೆಗಿನ ಕಾರ್ಡ್ ಪರಿಗಣನೆ ರೇಶನ್ ಕಾರ್ಡ್‌ನಲ್ಲಿ ಹೆಸರು ಇರುವ ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಹೊಸ ರೇಶನ್ ಕಾರ್ಡ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವುದನ್ನು ನಿಲ್ಲಿಸದಿದ್ದರೆ ಹೊಸದಾಗಿ ಅರ್ಜಿ ಸಲ್ಲಿಸಿದ ಅರ್ಹ ಕುಟುಂಬಗಳಿಗೆ ರೇಶನ್ ಕಾರ್ಡ್ ಸಿಗುವುದು ವಿಳಂಬವಾಗುತ್ತದೆ. ಜತೆಗೆ ರೇಶನ್‌ಕಾರ್ಡ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಮುಂದಿನ ದಿನಗಳಲ್ಲಿ ಅದು ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಖ್ಯ ವಾಗಿ ಸಾಲ ಮನ್ನಾ ವ್ಯಾಪ್ತಿಗೆ ಬರುವ ರೈತರ ಸಂಖ್ಯೆ ಹೆಚ್ಚಾಗಿ ಸರಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತದೆ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
4 ಲಕ್ಷ ಕಾರ್ಡ್ ವಿತರಣೆ
ಹೊಸ ರೇಶನ್ ಕಾರ್ಡ್ ಕೊಡುವುದನ್ನು ನಿಲ್ಲಿಸಿಲ್ಲ. ಆದರೆ ಸಾಲ ಮನ್ನಾ ಯೋಜನೆ ಲಾಭ ಪಡೆದುಕೊಳ್ಳಲು ರೇಶನ್ ಕಾರ್ಡ್ ಸಲ್ಲಿಸುವುದು ಕಡ್ಡಾಯ ಮಾಡಿರುವುದರಿಂದ ಹೊಸ ರೇಶನ್‌ಕಾರ್ಡ್‌ಗೆ ಅರ್ಜಿಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಇದರಿಂದಾಗಿ ಇಲಾಖೆಯ ಸಿಬಂದಿ ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಕಳೆದ ಮೇ ತಿಂಗಳ ಬಳಿಕ ಸಲ್ಲಿಕೆಯಾದ ಸುಮಾರು 7 ಲಕ್ಷ ಅರ್ಜಿಗಳ ಪೈಕಿ ಅಂದಾಜು 4 ಲಕ್ಷ ರೇಶನ್ ಕಾರ್ಡ್‌ಗಳನ್ನು ಈಗಾಗಲೇ ಫಲಾನುಭವಿಗಳಿಗೆ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ 1.14 ಕೋಟಿ ಬಿಪಿಎಲ್ ಕಾರ್ಡ್ ಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ ರೇಶನ್ ಕಾರ್ಡ್ ಪಡೆದು ಹೆಚ್ಚು ಸಾಲ ಮನ್ನಾ ಮಾಡಿಸಿಕೊಳ್ಳಲು ಪ್ರಯತ್ನಿಸಿದರೆ ಅದು ಸರಕಾರಕ್ಕೆ ವಂಚಿಸಿದಂತೆ. ಆದ್ದರಿಂದ 2018ರ ಜುಲೈ 5ರ ಅನಂತರದ ರೇಶನ್ ಕಾರ್ಡ್‌ಗಳು ಇದ್ದರೆ, ಅದನ್ನು ಮೂಲ ರೇಶನ್ ಕಾರ್ಡ್ ಎಂದೇ ಪರಿಗಣಿಸಲಾಗುತ್ತಿದೆ.
– ಮುನೀಷ್ ಮೌದ್ಗಿಲ್ ಸಾಲ ಮನ್ನಾ ಯೋಜನೆ ನೋಡಲ್ ಅಧಿಕಾರಿ
ರಫೀಕ್ ಅಹ್ಮದ್